ADVERTISEMENT

ಎರಡನೇ ಸುತ್ತಿಗೆ ಸೈನಾ ನೆಹ್ವಾಲ್

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST
ಎರಡನೇ ಸುತ್ತಿಗೆ ಸೈನಾ ನೆಹ್ವಾಲ್
ಎರಡನೇ ಸುತ್ತಿಗೆ ಸೈನಾ ನೆಹ್ವಾಲ್   

ನವದೆಹಲಿ (ಪಿಟಿಐ): ಸೈನಾ ನೆಹ್ವಾಲ್ ಇಲ್ಲಿ ಆರಂಭವಾದ ಫ್ರೆಂಚ್ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದು, ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಆದರೆ ಚೇತನ್ ಆನಂದ್ ಮತ್ತು ಪಿ. ಕಶ್ಯಪ್ ಮೊದಲ ಸುತ್ತಿನಲ್ಲೇ ಎಡವಿದರು.

 ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಆಟಗಾರ್ತಿ 21-14, 21-9 ರಲ್ಲಿ ಹಾಲೆಂಡ್‌ನ ಜೀ ಯಾವೊ ವಿರುದ್ಧ ಜಯ ಸಾಧಿಸಿದರು. ಇಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ಸೈನಾ 29 ನಿಮಿಷಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು. ಚೀನಾದ ಕ್ಸುರುಯ್ ಲಿ ಮತ್ತು ಕೊರಿಯಾದ ಯುವಾನ್ ಜೂ ನಡುವಿನ ಪಂದ್ಯದ ವಿಜೇತರನ್ನು ಸೈನಾ ಎರಡನೇ ಸುತ್ತಿನಲ್ಲಿ ಎದುರಿಸಲಿದ್ದಾರೆ.

ಎದುರಾಳಿಗೆ ಮೇಲುಗೈ ಸಾಧಿಸಲು ಯಾವುದೇ ಅವಕಾಶ ನೀಡದ ಸೈನಾ ಒಟ್ಟು 22 ಸ್ಮ್ಯಾಷ್‌ಗಳನ್ನು ಸಿಡಿಸಿದರು. ನೆಟ್ ಬಳಿಯ ಆಟದಲ್ಲೂ ಚುರುಕುತನ ತೋರಿದ ಅವರು ಏಳು `ನೆಟ್ ವಿನ್ನರ್~ಗಳ ಮೂಲಕ ಯಾವೊ ಮೇಲೆ ಒತ್ತಡ ಹೇರಿದರು.

ಚೇತನ್ ಆನಂದ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನ ತಡೆ ದಾಟುವಲ್ಲಿ ವಿಫಲರಾದರು. ಫ್ರಾನ್ಸ್‌ನ ಬ್ರೈಸ್ ಲೆವೆರ್‌ಡೆಜ್ ಎದುರಿನ ಪಂದ್ಯದ ಮೊದಲ ಸೆಟ್‌ನ್ನು 13-21 ರಲ್ಲಿ ಕಳೆದುಕೊಂಡ ಚೇತನ್ ಗಾಯದ ಸಮಸ್ಯೆಯಿಂದ ಹಿಂದೆ ಸರಿದರು.

ಪಿ. ಕಶ್ಯಪ್ 18-21, 21-17, 9-21 ರಲ್ಲಿ ಕೊರಿಯಾದ ವಾನ್ ಹೊ ಶಾನ್ ಕೈಯಲ್ಲಿ ಪರಾಭವಗೊಂಡರು. 56 ನಿಮಿಷಗಳ ಮ್ಯಾರಥಾನ್ ಹೋರಾಟದಲ್ಲಿ ಕಶ್ಯಪ್ ಎದುರಾಳಿಗೆ ತಕ್ಕ ಪೈಪೋಟಿ ನೀಡುವಲ್ಲಿ ಯಶಸ್ವಿಯಾದರು.

ಜ್ವಾಲಾ ಗುಟ್ಟಾ ಮತ್ತು ವಿ. ದಿಜು ಮಿಶ್ರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು. ಮೂರನೇ ಶ್ರೇಯಾಂಕದ ಜೋಡಿ ಇಂಡೊನೇಷ್ಯದ ತೊಂತೊವಿ ಅಹ್ಮದ್- ಲಿಲಿಯಾನ ನತ್ಸಿರ್ 21-16, 21-8 ರಲ್ಲಿ ಭಾರತದ ಜೋಡಿಯ ವಿರುದ್ಧ ಸುಲಭ ಗೆಲುವು ಪಡೆಯಿತು.

ರೂಪೇಶ್ ಕುಮಾರ್ ಮತ್ತು ಸನಾವೆ ಥಾಮಸ್ ಜೋಡಿಗೂ ಮೊದಲ ಸುತ್ತಿನ ತಡೆ ದಾಟಲು ಆಗಲಿಲ್ಲ. ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಇಂಡೊನೇಷ್ಯದ ಅನ್ಗಾ ಪ್ರತಾಮ- ರ‌್ಯಾನ್ ಅಗಾಂಗ್ ಸಪುತ್ರ 15-21, 21-12, 21-13 ರಲ್ಲಿ ಭಾರತದ ಜೋಡಿಯ ವಿರುದ್ಧ ಜಯ ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.