ADVERTISEMENT

ಎರಡನೇ ಸುತ್ತಿಗೆ ಸೈನಾ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 19:30 IST
Last Updated 17 ಮಾರ್ಚ್ 2011, 19:30 IST

ನವದೆಹಲಿ (ಪಿಟಿಐ): ಜನ್ಮದಿನದ ಸಂಭ್ರಮದಲ್ಲಿರುವ ಭಾರತದ ಸೈನಾ ನೆಹ್ವಾಲ್ ಸ್ವಿಟ್ಜರ್‌ಲೆಂಡ್‌ನಲ್ಲಿ  ನಡೆಯುತ್ತಿರುವ ವಿಲ್ಸನ್ ಸ್ವಿಸ್ ಓಪನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.

ನಾಲ್ಕನೇ ಶ್ರೇಯಾಂಕಿತ ಆಟಗಾರ್ತಿ ಸೈನಾ ನೆಹ್ವಾಲ್ ಮೊದಲ ಸುತ್ತಿನ ಪಂದ್ಯದಲ್ಲಿ 23-21, 21-9ರಲ್ಲಿ ಫ್ರಾನ್ಸ್‌ನ ಸಶೀನಾ ವಿಗ್ನಸ್ ಅವರನ್ನು ಮಣಿಸಿದರು. ಎರಡೂ ಗೇಮ್‌ಗಳಲ್ಲಿಯೂ ಪ್ರಭಾವಿ ಪ್ರದರ್ಶನ ತೋರಿದ ಸೈನಾಗೆ ಮೊದಲ ಗೇಮ್‌ನಲ್ಲಿ ಭಾರಿ ಪೈಪೋಟಿ ಎದುರಾಯಿತು. ಆದರೂ ಕರಾರುವಕ್ಕಾದ ಹೊಡೆತಗಳ ಮೂಲಕ ಗೆಲುವು ಪಡೆಯುವಲ್ಲಿ ಸೈನಾ ಯಶ ಕಂಡರು.

ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ಆಟಗಾರ್ತಿ ಜಪಾನ್‌ನ ಈರಿಕೋ ಹಿರೋಸೆ  ಅವರ ಸವಾಲನ್ನು ಎದುರಿಸಲಿದ್ದಾರೆ,ಕಳೆದ ವಾರ ನಡೆದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಹಿರೋಸೆ ಅವರಿಂದ ಸೈನಾ ಸೋಲು ಅನುಭವಿಸಿದ್ದರು. ಈಗ ಹಿರೋಸೆಗೆ ತಿರುಗೇಟು ನೀಡಲು ಸೈನಾ ಕಾಯುತ್ತಿದ್ದಾರೆ.ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಅಜಯ್ ಜಯರಾಮ್ 22-20, 22-20ರಲ್ಲಿ ಬೆಲ್ಜಿಯಂನ ಯಾಹೂನ್ ತಾನ್ ಅವರನ್ನು ಮಣಿಸಿದರು.

ಆನಂದ್, ಕಶ್ಯಪ್‌ಗೆ ಸೋಲು: ಭಾರತದ ಆನಂದ್ ಪವಾರ್ 21-17, 15-21, 18-21ರಲ್ಲಿ ಕೊರಿಯಾದ ಐದನೇ ಶ್ರೇಯಾಂಕಿತ ವಾನ್ ಹೂ ಶೋನ್ ವಿರುದ್ಧ ಪರಾಭವಗೊಂಡರು. ಪಿ. ಕಶ್ಯಪ್ ಕೂಡಾ ಮೊದಲ ಸುತ್ತಿನ ಪಂದ್ಯದಲ್ಲಿ 21-10, 19-21, 19-21ರಲ್ಲಿ ಜರ್ಮನಿಯ ಸೆವಿನ್ ಈರಿಕ್ ಕಸ್ಟೆನ್ಸ್  ಎದುರು ನಿರಾಸೆ ಅನುಭವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.