ADVERTISEMENT

ಎಸ್‌ಎಐನಲ್ಲಿ ಸಿಬ್ಬಂದಿ ಕೊರತೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಭವಿಷ್ಯದ ಕ್ರೀಡಾಪಟುಗಳನ್ನು ಸಜ್ಜುಗೊಳಿಸುವ ದೊಡ್ಡ ಹೊರೆ ಹೊತ್ತಿರುವ ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಈಗ ಭಾರಿ ಸಂಖ್ಯೆಯ ಕೋಚ್‌ಗಳ ಕೊರತೆಯಿಂದ ಸಂಕಷ್ಟದಲ್ಲಿ ಸಿಲುಕಿದೆ.

ಕೋಚ್‌ಗಳು ಮಾತ್ರವಲ್ಲ ಇತರ ಸಿಬ್ಬಂದಿಯ ಅಗತ್ಯ ಹೆಚ್ಚಿದ್ದು, ಅದಕ್ಕೆ ತಕ್ಕಂತೆ ಹುದ್ದೆಗಳನ್ನು ತುಂಬುವ ಕೆಲಸ ನಡೆಯುತ್ತಿಲ್ಲ. ಆದ್ದರಿಂದ ಕ್ರೀಡಾಪಟುಗಳ ತರಬೇತಿ ಚುರುಕಾಗಿ ಸಾಗುವ ಬದಲು ಮುಗ್ಗರಿಸಿ ಬಿದ್ದಿದೆ.

ಈ ಸತ್ಯವನ್ನು ಬಹಿರಂಗಗೊಳಿಸಿದ್ದು ಮತ್ತಾರೂ ಅಲ್ಲ ಕ್ರೀಡಾ ಸಚಿವ ಅಜಯ್ ಮಾಕನ್. ಲೋಕಸಭೆಯಲ್ಲಿ ಮಂಗಳವಾರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ತೆರೆದಿಟ್ಟ ಅಂಕಿ-ಅಂಶಗಳು ಕೊರತೆಯ ಮಟ್ಟ ಎಷ್ಟೊಂದು ಗಂಭೀರವಾಗಿದೆ ಎನ್ನುವುದನ್ನು ಸ್ಪಷ್ಟಗೊಳಿಸಿತು.

ADVERTISEMENT

2003ರಲ್ಲಿ ಸುಧಾರಣಾ ಸಮಿತಿಯು ನೀಡಿದ್ದ ವರದಿಯ ಪ್ರಕಾರ ದೇಶದಲ್ಲಿನ `ಎಸ್‌ಎಐ~ ಕೇಂದ್ರಗಳಲ್ಲಿ ಇರಬೇಕಾಗಿದ್ದ ಒಟ್ಟಾರೆ ಸಿಬ್ಬಂದಿ ಸಂಖ್ಯೆ 2026. ಆದರೆ ಈಗಿರುವ ಸಂಖ್ಯೆ ಕೇವಲ 1162 ಆಗಿದೆ. ಅಂದರೆ 864 ವಿವಿಧ ಹುದ್ದೆಗಳು ಖಾಲಿ ಇವೆ.

ಎಸ್‌ಎಐ ಕೇಂದ್ರದ ಮೂಲ ಉದ್ದೇಶ ಕ್ರೀಡಾಪಟುಗಳಿಗೆ ತರಬೇತಿ ನೀಡುವುದು. ಆದರೆ ಅದಕ್ಕೆ ಅಗತ್ಯವಾದ ಕೋಚ್‌ಗಳ ಕೊರತೆಯಂತೂ ಅಪಾರ. ತರಬೇತಿ ಕಾರ್ಯವು ಸುಗಮವಾಗಿ ನಡೆಯುವುದಕ್ಕೆ 240 ಕೋಚ್‌ಗಳು ಅಗತ್ಯ. ಈಗ ಇರುವುದು 1142 ಪೂರ್ಣಾವಧಿ ಕೋಚ್‌ಗಳು. 142 ಮಂದಿ ಗುತ್ತಿಗೆ ಆಧಾರದಲ್ಲಿ ತರಬೇತಿ ನೀಡುತ್ತಿದ್ದಾರೆ. ಕೋಚ್‌ಗಳ ಸಂಖ್ಯೆ ಕಡಿಮೆ ಇರುವ ಕಾರಣ ಯುವ ಕ್ರೀಡಾಪಟುಗಳ ಕಡೆಗೆ ವೈಯಕ್ತಿಕವಾಗಿ ಗಮನ ನೀಡುವುದು ಬಹಳ ಕಷ್ಟವಾಗಿದೆ ಎನ್ನುವ ಕಟುಸತ್ಯವನ್ನು ಮಾಕನ್ ತೆರೆದಿಟ್ಟಿದ್ದಾರೆ.

`ಈಗಿರುವ ಸಿಬ್ಬಂದಿಯಲ್ಲಿ ಕೇವಲ ಒಬ್ಬರು ಪೋಷಕಾಂಶ ನಿರ್ಧಾರ ತಜ್ಞ. ಎಲ್ಲ ಕೇಂದ್ರಗಳಲ್ಲಿ ಸೇರಿ ಒಟ್ಟು ಐದು ವೈದ್ಯರು, ಮೂವರು ನರ್ಸ್‌ಗಳು ಹಾಗೂ ಹದಿನಾಲ್ಕು ಹಾಸ್ಟೆಲ್ ಮೇಲ್ವಿಚಾರಕರಿದ್ದಾರೆ. 1524 ಕೋಚ್‌ಗಳು ಇರಬೇಕಾಗಿತ್ತು. ಆದರೆ ಅಷ್ಟೊಂದು ತರಬೇತುದಾರರಿಲ್ಲ~ ಎಂದು ಮಾಕನ್ ತಿಳಿಸಿದರು.

`ತುರ್ತಾಗಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಕ್ರೀಡಾಪಟುಗಳ ತರಬೇತಿಗೆ ತೊಡಕಾಗದಂತೆ ನೋಡಿಕೊಳ್ಳಬೇಕೆಂದು ಎಸ್‌ಎಐ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ~ ಎಂದ ಅವರು `ಖಾಲಿ ಇರುವ ಹುದ್ದೆಗಳನ್ನು ಈಗಾಗಲೇ ಜಾರಿ ಇರುವ ನೇಮಕಾತಿ ನಿಯಮದೊಂದಿಗೆ ತುಂಬಿಕೊಳ್ಳಬೇಕೆಂದು ನಿರ್ದೇಶಿಸಲಾಗಿದೆ~ ಎಂದರು.

`ಕ್ರೀಡಾ ಫೆಡರೇಷನ್‌ಗಳು ಪಾರದರ್ಶಕತೆಯಿಂದ ಕೆಲಸ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕಳೆದ ಒಂದು ವರ್ಷದಲ್ಲಿ ಯಾವುದೇ ಗಂಭೀರವಾದ ಅವ್ಯವಹಾರದ ಪ್ರಕರಣಗಳು ನಡೆದಿಲ್ಲ~ ಎಂದು ಕೂಡ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

`ಪ್ರತಿಭಾ ಶೋಧ, ತರಬೇತಿ ಹಾಗೂ ಪ್ರೋತ್ಸಾಹದಲ್ಲಿ ಯಾವುದೇ ಕೊರತೆ ಮಾಡುತ್ತಿಲ್ಲ. ಕ್ರೀಡಾ ಫೆಡರೇಷನ್‌ಗಳಿಗೂ ಅಗತ್ಯವಾದ ಹಣಕಾಸು ನೆರವು ಕಲ್ಪಿಸಲಾಗುತ್ತಿದೆ~ ಎಂದ ಮಾಕೆನ್ `ಕ್ರೀಡಾಪಟುಗಳಿಗೆ ವಿದೇಶಿ ಕೋಚ್‌ಗಳ ಮಾರ್ಗದರ್ಶನ ಸಿಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಹೆಚ್ಚಿನ ಅವಕಾಶ ಮಾಡಿಕೊಡಲಾಗುತ್ತಿದೆ~ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.