ADVERTISEMENT

ಏಷ್ಯನ್ ಅರ್ಚರಿ: ಒಲಿಂಪಿಕ್ ಅರ್ಹತೆ ಮೇಲೆ ಕಣ್ಣು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಕೋಲ್ಕತ್ತ (ಪಿಟಿಐ): ಭಾರತದ ಸ್ಪರ್ಧಿಗಳು ಇರಾನ್‌ನಲ್ಲಿ ಮಂಗಳವಾರ ಆರಂಭವಾಗಲಿರುವ ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯಿಸಿ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ಕಸರತ್ತು ನಡೆಸಲಿದ್ದಾರೆ.

`ತಂಡ ಹಾಗೂ ರಿಕರ್ವ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸುವ ವಿಶ್ವಾಸವಿದೆ~ ಎಂದು ನವದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಎರಡು ಸ್ವರ್ಣ ಗೆದ್ದಿದ್ದ ದೀಪಿಕಾ ಕುಮಾರಿ ಭರವಸೆ ವ್ಯಕ್ತಪಡಿಸಿದ್ದಾರೆ. 17 ವರ್ಷದ ದೀಪಿಕಾ ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಇನ್ನುಳಿದ ಕೆಲ ಸ್ಪರ್ಧಿಗಳು ಇಲ್ಲಿ ಪದಕ ಗೆದ್ದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಳ್ಳುವತ್ತ ಚಿತ್ತ ಹರಿಸಲಿದ್ದಾರೆ.

ಭಾರತದ ಇನ್ನೊಬ್ಬ ಸ್ಪರ್ಧಿ ಜಯಂತ್ ತಾಲೂಕ್ದಾರ್ ಸಹ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ವಿಶ್ವದ ಅಗ್ರ ತಂಡಗಳಾದ ದಕ್ಷಿಣ ಕೊರಿಯಾ, ಚೀನಾ, ಕಜಕಸ್ತಾನ್, ಆತಿಥೇಯ ಇರಾನ್ ಹಾಗೂ ಉಜ್ಬೇಕಿಸ್ತಾನ ಸೇರಿದಂತೆ ಇತರ ದೇಶಗಳ ಸ್ಪರ್ಧಿಗಳು ಪ್ರಬಲ ಪೈಪೋಟಿ ನೀಡಲಿದ್ದಾರೆ. ಆದ್ದರಿಂದ ಈ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎಂದು ಇರಾನ್‌ಗೆ ತೆರಳುವ ಮುನ್ನ ಕೋಲ್ಕತ್ತದಲ್ಲಿ ಅವರು ಹೇಳಿದರು.

`ಒಲಿಂಪಿಕ್ಸ್ ಆರಂಭಕ್ಕೆ ಕೆಲ ತಿಂಗಳು ಮಾತ್ರ ಬಾಕಿ ಇರುವುದರಿಂದ ಉತ್ತಮವಾಗಿ ಸಜ್ಜುಗೊಳ್ಳುತ್ತಿದ್ದೇವೆ. ಸಾಕಷ್ಟು ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಜಯಂತ್ ಹೇಳಿದರು. ಪುರುಷರ ರಿಕರ್ವ್ ತಂಡ ವಿಭಾಗದಲ್ಲಿ ಜಯಂತ್ ಪಾಲ್ಗೊಳ್ಳಲಿದ್ದಾರೆ. ಇದೇ ವರ್ಷದ ಮೇ ನಲ್ಲಿ ನಡೆದ ಆರ್ಚರಿ ವಿಶ್ವಕಪ್‌ನಲ್ಲಿ ಈ ತಂಡ ಬೆಳ್ಳಿ ಜಯಿಸಿತ್ತು. ಕ್ರೊಯೇಷಿಯಾದಲ್ಲಿ ಬೆಳ್ಳಿ ಪದಕ ಜಯಿಸಿದ್ದು, ವಿಶ್ವಾಸ ಹೆಚ್ಚಿಸಿದೆ.

ಈ ಚಾಂಪಿಯನ್‌ಷಿಪ್‌ಗೆ ಮನಶಾಸ್ತ್ರಜ್ಞ ವೈಭವ್ ಅವರ ಬಳಿ ತರಬೇತಿ ಪಡೆದು ಮಾನಸಿಕವಾಗಿ ಸಜ್ಜುಗೊಂಡಿದ್ದೇನೆ ಎಂದು ಭಾರತ ತಂಡದಲ್ಲಿರುವ ರಾಹುಲ್ ಬ್ಯಾನರ್ಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT