ADVERTISEMENT

ಏಷ್ಯಾಕಪ್ ಕ್ರಿಕೆಟ್: ಪಾಕ್ ವಿರುದ್ಧ ಪೈಪೋಟಿಗೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 19:30 IST
Last Updated 17 ಮಾರ್ಚ್ 2012, 19:30 IST
ಏಷ್ಯಾಕಪ್ ಕ್ರಿಕೆಟ್: ಪಾಕ್ ವಿರುದ್ಧ ಪೈಪೋಟಿಗೆ ಸಿದ್ಧ
ಏಷ್ಯಾಕಪ್ ಕ್ರಿಕೆಟ್: ಪಾಕ್ ವಿರುದ್ಧ ಪೈಪೋಟಿಗೆ ಸಿದ್ಧ   

ಮೀರ್‌ಪುರ (ಢಾಕಾ): ಬಾಂಗ್ಲಾದೇಶ ವಿರುದ್ಧದ ಸೋಲಿನಿಂದ ಭಾರತದ ಸಂಕಷ್ಟ ಹೆಚ್ಚಿದೆ. ಇಂಥ ಒತ್ತಡ ಇರುವಾಗಲೇ ಗೆಲ್ಲಲೇಬೇಕು ಎನ್ನುವಂಥ ಪಂದ್ಯ ಎದುರಾಗಿದೆ. ಮುಂದಿರುವ ಎದುರಾಳಿ ಅಪಾಯಗಳ ತಂದು ಸುರಿಯುವಂಥ ಪಾಕಿಸ್ತಾನ. ಆದರೂ ಎದೆಗುಂದದ `ಮಹಿ~ ಪಡೆಯು ಕುತೂಹಲ ಕೆರಳಿಸಿರುವ ಕದನದಲ್ಲಿ ಕಷ್ಟಗಳನ್ನು ಗೆಲ್ಲಲು ಸಜ್ಜಾಗಿದೆ.

ಸಚಿನ್ ತೆಂಡೂಲ್ಕರ್ ಅವರ ಶತಕಗಳ ಶತಕದ ಹೊಳಪಿಗೆ ಕೊಳೆ ಮೆತ್ತಿದ ಬಾಂಗ್ಲಾ ವಿರುದ್ಧದ ಸೋಲು ಮುಖ ಮುಚ್ಚಿಕೊಳ್ಳುವಂಥ ಅವಮಾನ. ಇಂಥ ಅಸಮಾಧಾನ ತೊಳೆದು ಹಾಕಲು ಏಷ್ಯಾಕಪ್ ಫೈನಲ್ ತಲುಪಲೇಬೇಕು. ಆ ನಿಟ್ಟಿನಲ್ಲಿ ಇರುವ ಅವಕಾಶದ ಏಕೈಕ ಮೆಟ್ಟಿಲು ಭಾನುವಾರ ನಡೆಯುವ ಪಾಕ್ ವಿರುದ್ಧದ ಹಣಾಹಣಿ.

ಜಯ ಅಗತ್ಯ ಮಾತ್ರವಲ್ಲ ಅನಿವಾರ್ಯವೂ ಆಗಿದೆ. ಈ ಮೊದಲು ಆಡಿದ ಪಂದ್ಯಗಳಲ್ಲಿ ಶ್ರೀಲಂಕಾ ವಿರುದ್ಧ ಐವತ್ತು ರನ್‌ಗಳ ಅಂತರದಿಂದ ವಿಜಯ ಸಾಧಿಸಿದ್ದ ಮಹೇಂದ್ರ ಸಿಂಗ್ ದೋನಿ ಬಳಗವು ಆತಿಥೇಯ ಬಾಂಗ್ಲಾದೇಶಕ್ಕೆ ಐದು ವಿಕೆಟ್‌ಗಳ ಅಂತರದಿಂದ ಶರಣಾಗಿದ್ದು ಆತಂಕ ಹೆಚ್ಚಲು ಕಾರಣ. ಬಾಂಗ್ಲಾವನ್ನು ಮಣಿಸಿದ್ದರೆ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲು ಕಾಯುವ ಅಗತ್ಯ ಎದುರಾಗುತ್ತಿರಲಿಲ್ಲ. ಒತ್ತಡ ಮುಕ್ತವಾಗಿ ಪಾಕ್ ತಂಡವನ್ನು ಎದುರಿಸಬಹುದಿತ್ತು. ಆದರೆ ಬೌಲಿಂಗ್ ವಿಭಾಗದಲ್ಲಿ ಸತ್ವ ಕಳೆದುಕೊಂಡ ಭಾರತವು ಚಡಪಡಿಸುವಂತಾಗಿದೆ.

ಭಾರತದವರು ಯಾವುದೇ ಸರಣಿಯಲ್ಲಿ ಹೀಗೆ ಲೆಕ್ಕಾಚಾರ ಮಾಡುವ ಹಂತಕ್ಕೆ ಬಂದು ತಲುಪುವುದು ಸಾಮಾನ್ಯ ಎನ್ನುವಂತಾಗಿದೆ. ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ತ್ರಿಕೋನ ಸರಣಿಯಲ್ಲಿ ಇದೇ ರೀತಿಯ ಪರಿಸ್ಥಿತಿ ಎದುರಿಸಿ, ಫೈನಲ್‌ನಲ್ಲಿ ಅವಕಾಶ ಗಿಟ್ಟಿಸಲಾಗದೇ ಪರಿತಪಿಸಿದ ಕಹಿ ನೆನಪು ಇನ್ನೂ ಹಸಿರಾಗಿದೆ.

ಮಿಸ್ಬಾ ಉಲ್ ಹಕ್ ನೇತೃತ್ವದ ತಂಡಕ್ಕೆ ಮಾತ್ರ ಫೈನಲ್‌ಗೆ ಮುನ್ನ ತಾಲೀಮು ಎನ್ನುವಂಥ ಪಂದ್ಯ ಇದಾಗಿದೆ. ಉದ್ಘಾಟನಾ ಪಂದ್ಯದಲ್ಲಿ 21 ರನ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿ, ನಂತರ ಸಿಂಹಳೀಯರ ಪಡೆಯನ್ನು ಆರು ವಿಕೆಟ್‌ಗಳ ಅಂತರದಿಂದ ನಿರಾಯಾಸವಾಗಿ ಮಣಿಸಿ ಒಂದು ಬೋನಸ್ ಪಾಯಿಂಟ್ ಕೂಡ ಗಿಟ್ಟಿಸಿದೆ ಪಾಕ್. ಆದ್ದರಿಂದ ಅದಕ್ಕೆ ಮಾರ್ಚ್ 22ರಂದು ನಡೆಯುವ ಅಂತಿಮ ಪಂದ್ಯದಲ್ಲಿ ಸ್ಥಾನ ಖಚಿತ. ಮಿಸ್ಬಾ ಬಳಗಕ್ಕೆ ಎದುರಾಗುವವರು ಯಾರೆನ್ನುವುದು ಮಾತ್ರ ನಿರ್ಧಾರವಾಗಬೇಕು. ಪೈಪೋಟಿ ಇರುವುದು ಭಾರತ ಹಾಗೂ ಬಾಂಗ್ಲಾದೇಶ ನಡುವೆ ಮಾತ್ರ.

ಪಂದ್ಯ ಆರಂಭ: (ಭಾರತೀಯ ಕಾಲಮಾನ) ಮಧ್ಯಾಹ್ನ 1.30ಕ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.