ADVERTISEMENT

ಐಪಿಎಲ್: ಕೊಳೆ ತೊಳೆಯಲು ಕ್ರಮ

ಕುಂದ್ರಾ ಅಮಾನತು; ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 19:59 IST
Last Updated 10 ಜೂನ್ 2013, 19:59 IST
ಬಿಸಿಸಿಐ ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು 	-ಪಿಟಿಐ ಚಿತ್ರ
ಬಿಸಿಸಿಐ ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು -ಪಿಟಿಐ ಚಿತ್ರ   

ನವದೆಹಲಿ (ಪಿಟಿಐ/ಐಎಎನ್‌ಎಸ್): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಅಂಟಿಕೊಂಡಿರುವ ಕಳಂಕವನ್ನು ತೊಳೆಯಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಹಲವು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.

ಸೋಮವಾರ ನಡೆದ ಬಿಸಿಸಿಐ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಇದರ ಜೊತೆಗೆ ಬೆಟ್ಟಿಂಗ್‌ನಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ರಾಜಸ್ತಾನ ರಾಯಲ್ಸ್ ತಂಡದ ಸಹ ಮಾಲೀಕ ಹಾಗೂ ಉದ್ಯಮಿ ರಾಜ್ ಕುಂದ್ರಾ ಅವರನ್ನು ಅಮಾನತು ಮಾಡಲೂ ಸಭೆ ನಿರ್ಧರಿಸಿತು.

`ಕುಂದ್ರಾ ಮೇಲಿರುವ ಆರೋಪಗಳ ಬಗ್ಗೆ ತನಿಖೆ ಪೂರ್ಣಗೊಳ್ಳುವ ತನಕ ಅವರನ್ನು ಕ್ರಿಕೆಟ್‌ನ ಎಲ್ಲಾ ಚಟುವಟಿಕೆಗಳಿಂದ ದೂರವಿಡುವ ಬಗ್ಗೆ ತೀರ್ಮಾನಿಸಲಾಗಿದೆ. ಇದರ ಜೊತೆಗೆ ಐಪಿಎಲ್ ಟೂರ್ನಿಯನ್ನು ಸುವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು 12 ಅಂಶಗಳ ಕಾರ್ಯಸೂಚಿಯ ಪ್ರಸ್ತಾವನೆಯನ್ನು ಸಭೆಯಲ್ಲಿ ಮಂಡಿಸಲಾಯಿತು' ಎಂದು ಬಿಸಿಸಿಐನ ಉಪಾಧ್ಯಕ್ಷ ಚಿತ್ರಕ್ ಮಿತ್ರಾ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

`ಕ್ರಿಕೆಟ್‌ನ ಎಲ್ಲಾ ಚಟುವಟಿಕೆಗಳಿಂದ ಕುಂದ್ರಾ ಅವರನ್ನು ದೂರವಿಡಬೇಕು ಎಂದು ಸಭೆಯಲ್ಲಿ ನಿರ್ಧಾರ ತಗೆದುಕೊಂಡ ಹಿನ್ನೆಲೆಯಲ್ಲಿ ಅವರು ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಲೀಗ್ ಟೂರ್ನಿಯ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ನೋಡುವಂತಿಲ್ಲ' ಎಂದು ಕಾರ್ಯಕಾರಿ ಸಮಿತಿಯ ಸದಸ್ಯರೊಬ್ಬರು ಹೇಳಿದರು.

ಅನಿವಾಸಿ ಭಾರತೀಯ ಉದ್ಯಮಿ ಕುಂದ್ರಾ ಹೋದ ವಾರ ಪೊಲೀಸರ ಎದುರು ವಿಚಾರಣೆಗೆ ಹಾಜರಾದ ವೇಳೆ `ನಾನು ಬೆಟ್ಟಿಂಗ್ ಆಡಿದ್ದೇನೆ. ಇದರಿಂದ ಸಾಕಷ್ಟು ಹಣ ಕಳೆದುಕೊಂಡಿದ್ದೇನೆ' ಎಂದು ಬಾಯಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬಿಸಿಸಿಸಿ ತುರ್ತು ಸಭೆ ಕರೆದು ಈ ನಿರ್ಧಾರ ತೆಗೆದುಕೊಂಡಿದೆ.

ಆದರೆ, ರಾಯಲ್ಸ್ ತಂಡದ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ. ಕುಂದ್ರಾ ಬೆಟ್ಟಿಂಗ್‌ನಲ್ಲಿ ಭಾಗಿಯಾದ ಆರೋಪ ಕೇಳಿ ಬಂದ ದಿನದಿಂದಲೇ ರಾಯಲ್ಸ್ ಐಪಿಎಲ್‌ನಿಂದ ರದ್ದಾಗುವ ಭೀತಿ ಎದುರಿಸಿತ್ತು. ಈ ಹಿನ್ನೆಲೆಯಲ್ಲಿ ಕುಂದ್ರಾ ಅವರೊಂದಿಗೆ ಅಂತರ ಕಾಯ್ದಕೊಳ್ಳಲು ಯತ್ನಿಸಿತ್ತು. ರಾಯಲ್ಸ್ ತಂಡದಲ್ಲಿ ಶೇ. 11.7ರಷ್ಟು ಷೇರುಗಳನ್ನು ಹೊಂದಿರುವ ಕುಂದ್ರಾ ವಿರುದ್ಧ ಬೆಟ್ಟಿಂಗ್‌ನಲ್ಲಿ ಭಾಗಿಯಾದ ಆರೋಪ ಕೇಳಿ ಬಂದಾಗ ಬಿಸಿಸಿಐ ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ತುರ್ತು ಸಭೆ ಕರೆದಿದ್ದರು.

ಶಿಸ್ತು ಸಮಿತಿಗೆ ರವಾನೆ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಕುರಿತು ತನಿಖೆ ನಡೆಸಿರುವ ಬಿಸಿಸಿಐ ಭ್ರಷ್ಟಾಚಾರ ತಡೆ ಮತ್ತು ಭದ್ರತಾ ಘಟಕದ ಮುಖ್ಯಸ್ಥ ರವಿ ಸವಾನಿ ನೀಡಿರುವ ವರದಿಯನ್ನು ಮಂಡಳಿಯ ಶಿಸ್ತು ಸಮಿತಿಗೆ ಕಳುಹಿಸುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಸವಾನಿ ಅವರಿಗೆ ತನಿಖೆ ನಡೆಸಿ ವರದಿ ನೀಡಲು ಬಿಸಿಸಿಐ ಸೂಚಿಸಿತ್ತು.

`ಸವಾನಿ ನೀಡಿದ ವರದಿಯಲ್ಲಿರುವ ಅಂಶಗಳು ಏನು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿಲ್ಲ. ಆ ವರದಿಯನ್ನು ಎಲ್ಲೂ ಬಹಿರಂಗಗೊಳಿಸಿಲ್ಲ. ಅದನ್ನು ಬಿಸಿಸಿಐ ಶಿಸ್ತು ಸಮಿತಿಗೆ ಕಳುಹಿಸಲು ನಿರ್ಧರಿಸಲಾಯಿತು' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದರು. ಇದರ ಜೊತೆಗೆ ಶಿಸ್ತು ಸಮಿತಿಯಲ್ಲಿದ್ದ ಶ್ರೀನಿವಾಸನ್ ಮತ್ತು ಮಂಡಳಿಯ ಮಾಜಿ ಕಾರ್ಯದರ್ಶಿ ನಿರಂಜನ್ ಷಾ ಅವರನ್ನು ತೆಗೆದು ಹಾಕಲು ಸಭೆ ತೀರ್ಮಾನಿಸಿತು.

ಮಾತಿನ ಚಕಮಕಿ: ಮಂಡಳಿಯ ಕೆಲ ಸದಸ್ಯರು ಮತ್ತು ಪಂಜಾಬ್ ಕ್ರಿಕೆಟ್ ಸಂಸ್ಥೆ ಮುಖ್ಯಸ್ಥ ಐ.ಎಸ್. ಬಿಂದ್ರಾ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು.

`ಕುಂದ್ರಾ ಅವರನ್ನು ಅಮಾನತು ಮಾಡಲು, ಬಿಸಿಸಿಐ ಕಾರ್ಯದರ್ಶಿ ಮತ್ತು ಖಜಾಂಚಿಯನ್ನು ನೇಮಕ ಮಾಡಲು ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಅವರಿಗೇನು ಅಧಿಕಾರವಿದೆ' ಎಂದು ಬಿಂದ್ರಾ ಪ್ರಶ್ನಿಸಿದರು. ರಾಜಸ್ತಾನ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಸಿ.ಪಿ. ಜೋಶಿ ಇದಕ್ಕೆ ದನಿಗೂಡಿಸಿದರು. ಇದರಿಂದ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಏನಾದರೂ ಚರ್ಚೆ ನಡೆಯಿತೇ ಎಂದು ಬಿಸಿಸಿಐ ಅಧಿಕಾರಿಯೊಬ್ಬರನ್ನು ಪ್ರಶ್ನಿಸಿದಾಗ, ಅವರು ಉತ್ತರ ನೀಡಲು ನಿರಾಕರಿಸಿದರು. ಬಿಸಿಸಿಐ ಅಧ್ಯಕ್ಷ (ಅಧಿಕಾರ ರಹಿತ) ಎನ್. ಶ್ರೀನಿವಾಸನ್ ಅಳಿಯ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ `ಸಿಇಒ' ಗುರುನಾಥ್ ಮೇಯಪ್ಪನ್ ಬೆಟ್ಟಿಂಗ್‌ನಲ್ಲಿ ಭಾಗಿಯಾದ ಆರೋಪ ಹೊತ್ತಿದ್ದಾರೆ. ಆದರೆ, ಇದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತೇ ಎನ್ನುವುದು ಮಾತ್ರ ಬಹಿರಂಗವಾಗಲಿಲ್ಲ.

ಒಪ್ಪಿಗೆ: ಸೂಪರ್ ಕಿಂಗ್ಸ್ ತಂಡ, ರಾಜ್ ಕುಂದ್ರಾ ಮತ್ತು ಮೇಯಪ್ಪನ್ ಕುರಿತು ವಿಚಾರಣೆ ನಡೆಸಲು ನೇಮಿಸಲಾಗಿರುವ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳನ್ನೊಳಗೊಂಡ ಸಮಿತಿಗೆ  ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ಸಮಿತಿಯಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಟಿ. ಜಯರಾಮ್ ಚೌಟ ಮತ್ತು ಆರ್. ಬಾಲಸುಬ್ರಮಣಿಯನ್ ಇದ್ದಾರೆ.

ಚಿಯರ್ ಬೆಡಗಿಯರ ನಿಷೇಧ
ಐಪಿಎಲ್ ಪಂದ್ಯದ ವೇಳೆ ಚಿಯರ್ ಬೆಡಗಿಯರ ನಿಷೇಧ, ಪಂದ್ಯದ ನಂತರ ಪಾರ್ಟಿ ಆಯೋಜನೆ ರದ್ದು, ಪಂದ್ಯಗಳ ವೇಳೆ ತಂಡದ ಆಟಗಾರರು ಕೂಡುವ ಸ್ಥಳಕ್ಕೆ ತಂಡಗಳ ಮಾಲೀಕರಿಗೆ ಪ್ರವೇಶ ನಿಷೇಧ ಸೇರಿದಂತೆ ಇನ್ನಿತರ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಇದರಿಂದ ಐಪಿಎಲ್‌ಗೆ ಅಂಟಿಕೊಂಡಿರುವ ಕೊಳೆ ತೊಳೆಯಲು ಬಿಸಿಸಿಐ ಮುಂದಾಗಿದೆ.

`ಮುಂದಿನ ಋತುವಿನಿಂದ ಐಪಿಎಲ್‌ಗೆ ಯಾವ ಕಳಂಕವೂ ಅಂಟಿಕೊಳ್ಳದಂತೆ ಎಚ್ಚರಿಕೆ ವಹಿಸಲಾಗುವುದು. ಅದಕ್ಕಾಗಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು' ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ದಾಲ್ಮಿಯ ನುಡಿದರು.

ದೋನಿ ವಿವಾದ: `ಹಿತಾಸಕ್ತಿ' ಸಂಘರ್ಷದಲ್ಲಿ ಸಿಲುಕಿರುವ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ವಿವಾದವನ್ನು ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮುಗಿದ ನಂತರ ವಿಚಾರಣೆ ನಡೆಸಲಾಗುವುದು ಎಂದೂ ಮಂಡಳಿಯ ಅಧ್ಯಕ್ಷರು ಹೇಳಿದರು.

ರವಿ ಸಾವಂತ್ ಖಜಾಂಚಿ
ಅಜಯ್ ಶಿರ್ಕೆ ಅವರ ರಾಜೀನಾಮೆಯಿಂದ ತೆರವಾಗಿದ್ದ ಬಿಸಿಸಿಐ ಖಜಾಂಚಿ ಸ್ಥಾನಕ್ಕೆ ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರವಿ ಸಾವಂತ್ ಅವರನ್ನು ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಖಜಾಂಚಿ ತಲ್ಲಂ ವೆಂಕಟೇಶ್ ಅವರ ಹೆಸರು ಮೊದಲು ಈ ಸ್ಥಾನಕ್ಕೆ ಕೇಳಿ ಬಂದಿತ್ತು. ಆದರೆ ಬಿಸಿಸಿಐ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಸಾವಂತ್ ಹೆಸರನ್ನು ಪ್ರಕಟಿಸಲಾಯಿತು. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಬಯಲಿಗೆ ಬಂದ ನಂತರ ಶಿರ್ಕೆ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಸಭೆಯಲ್ಲಿ ಕೈಗೊಂಡ ತೀರ್ಮಾನಗಳು
ಐಪಿಎಲ್ ಪಂದ್ಯದ ವೇಳೆ ಚಿಯರ್ ಬೆಡಗಿಯರು ಇಲ್ಲ.

ಪಂದ್ಯದ ನಂತರ ಪಾರ್ಟಿ ಆಯೋಜಿಸುವಂತಿಲ್ಲ

 ಪಂದ್ಯ ನಡೆಯುವ ವೇಳೆ ಆಟಗಾರರ ಕೊಠಡಿಗೆ ತಂಡಗಳ ಮಾಲೀಕರು ಹೋಗುವಂತಿಲ್ಲ

ಐಪಿಎಲ್ ಪಂದ್ಯ ಆರಂಭವಾಗುವ ಮುನ್ನ ಆಟಗಾರರು ಮೊಬೈಲ್ ಬಳಸುವಂತಿಲ್ಲ.

ಪಂದ್ಯ ನಡೆಯುವ ವೇಳೆ ಕ್ರೀಡಾಂಗಣದ ಸುತ್ತಲೂ ಮೊಬೈಲ್ ಬಳಕೆ ಮಾಡದಂತೆ ವ್ಯವಸ್ಥೆ (ಜಾಮರ್ ಅಳವಡಿಕೆ)

ಐಪಿಎಲ್ ತಂಡದ ಆಟಗಾರರ ಆಯ್ಕೆ ವಿಚಾರದಲ್ಲಿ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಸದಸ್ಯರು ತಲೆ ಹಾಕುವಂತಿಲ್ಲ.

ಪ್ರತಿ ಆಟಗಾರನೂ ತನ್ನ ವ್ಯವಹಾರವನ್ನು ನೋಡಿಕೊಳ್ಳಲು ಪ್ರತ್ಯೇಕ ಸಂಸ್ಥೆ ಅಥವಾ ವ್ಯಕ್ತಿಯನ್ನು ನೇಮಿಸಿಕೊಳ್ಳಬೇಕು

 ಮ್ರೈಕ್ರೊಫೋನ್ ಬಳಕೆ ನಿಷೇಧ

 ಐಪಿಎಲ್‌ನಲ್ಲಿ ಪಾರದರ್ಶಕತೆ ಹೆಚ್ಚಿಸಲು ನಾಯಕರುಗಳ ಸಭೆ ನಡೆಸಲು ತೀರ್ಮಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.