ADVERTISEMENT

ಐರ್ಲೆಂಡ್‌ಗೆ ರೋಚಕ ಜಯ

ಕ್ರಿಕೆಟ್‌: ಪ್ರಬಲ ಪೈಪೋಟಿ ನೀಡಿದ ಜಿಂಬಾಬ್ವೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ಸಿಲ್ಹೆಟ್‌, ಬಾಂಗ್ಲಾದೇಶ (ಪಿಟಿಐ): ಪೌಲ್‌ ಸ್ಟರ್ಲಿಂಗ್‌ (60) ಗಳಿಸಿದ ಬಿರುಸಿನ ಅರ್ಧಶತಕದ ನೆರವಿನಿಂದ ಐರ್ಲೆಂಡ್‌ ತಂಡ ಟ್ವೆಂಟಿ-20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಅರ್ಹತಾ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಮೂರು ವಿಕೆಟ್‌ಗಳ ಜಯ ಸಾಧಿಸಿತು.

ಸಿಲ್ಹೆಟ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 163 ರನ್‌ ಪೇರಿಸಿತು. ಉತ್ತಮ ಆರಂಭದ ಬಳಿಕ ಒತ್ತಡಕ್ಕೆ ಒಳಗಾದರೂ ಐರ್ಲೆಂಡ್‌ ಏಳು ವಿಕೆಟ್‌ ಕಳೆದುಕೊಂಡು ಅಂತಿಮ ಎಸೆತದಲ್ಲಿ ಗೆಲುವು ತನ್ನದಾಗಿಸಿಕೊಂಡಿತು.

ಟಾಸ್‌ ಗೆದ್ದ ಐರ್ಲೆಂಡ್‌ ನಾಯಕ ವಿಲಿಯಂ ಪೋರ್ಟರ್‌ಫೀಲ್ಡ್‌ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಜಿಂಬಾಬ್ವೆ ತಂಡ ಸಿಕಂದರ್‌ ರಾಜಾ (10) ಅವರನ್ನು ಬೇಗನೇ ಕಳೆದುಕೊಂ ಡಿತು. ಹ್ಯಾಮಿಲ್ಟನ್‌ ಮಸಕಜ (21) ಮತ್ತು ನಾಯಕ ಬ್ರೆಂಡನ್‌ ಟೇಲರ್‌ ಎರಡನೇ ವಿಕೆಟ್‌ಗೆ 42 ರನ್‌ ಸೇರಿಸಿ ದರು.  ಎದುರಾಳಿ ಬೌಲಿಂಗ್‌ ದಾಳಿ ಯನ್ನು ಸಮರ್ಥವಾಗಿ ಎದುರಿಸಿದ ಟೇಲರ್‌ 46 ಎಸೆತಗಳಲ್ಲಿ 59 ರನ್‌ ಗಳಿಸಿದರು. ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳು ಅವರ ಬ್ಯಾಟ್‌ನಿಂದ ಸಿಡಿದವು.

ಸೀನ್‌ ವಿಲಿಯಮ್ಸ್‌ (16), ವುಸಿ ಸಿಬಾಂಡ (16) ಮತ್ತು ಎಲ್ಟಾನ್‌ ಚಿಗುಂಬುರ (ಔಟಾಗದೆ 22) ಅವರ ನೆರವಿನಿಂದ ಟೇಲರ್‌ ತಂಡದ ಮೊತ್ತವನ್ನು ಹಿಗ್ಗಿಸಿದರು.

ಅಬ್ಬರದ ಆರಂಭ: ಸವಾಲಿನ ಮೊತ್ತ ಬೆನ್ನಟ್ಟಿದ ಐರ್ಲೆಂಡ್‌ಗೆ ಅಬ್ಬರದ ಆರಂಭ ಲಭಿಸಿತು. ಪೋರ್ಟರ್‌ಫೀಲ್ಡ್‌  (31, 23 ಎಸೆತ) ಮತ್ತು ಪೌಲ್‌ ಸ್ಟರ್ಲಿಂಗ್‌ ಮೊದಲ ವಿಕೆಟ್‌ಗೆ 8.2 ಓವರ್‌ಗಳಲ್ಲಿ 80 ರನ್‌ ಸೇರಿಸಿದರು. 11ನೇ ಓವರ್‌ನಲ್ಲಿ ಒಂದು ವಿಕೆಟ್‌ಗೆ 100 ರನ್‌ ಗಳಿಸಿದ್ದ ಐರ್ಲೆಂಡ್‌ ಸುಲಭ ಗೆಲುವಿನ ಸೂಚನೆ ನೀಡಿತ್ತು.

ಈ ಹಂತದಲ್ಲಿ ಸ್ಟರ್ಲಿಂಗ್‌ ಔಟಾ ದರು. ಕೇವಲ 34 ಎಸೆತಗಳನ್ನು ಎದುರಿ ಸಿದ ಈ ಬಲಗೈ ಬ್ಯಾಟ್ಸ್‌ಮನ್‌ 9 ಬೌಂಡರಿ ಮತ್ತು ಒಂದು ಸಿಕ್ಸರ್‌ ಸಿಡಿಸಿ ದರು. ಸ್ಟರ್ಲಿಂಗ್‌ ಔಟಾದ ಬಳಿಕ ಆಗಿಂದಾಗ್ಗೆ ವಿಕೆಟ್‌ ಕಳೆದು ಕೊಂಡ ಐರ್ಲೆಂಡ್ ಒತ್ತಡಕ್ಕೆ ಒಳಗಾಯಿತು.

ಎಡ್‌ ಜಾಯ್ಸ್‌ (22, 28 ಎಸೆತ), ಕೆವಿನ್‌ ಒಬ್ರಿಯನ್‌ (17, 10 ಎಸೆತ) ಮತ್ತು ಆ್ಯಂಡ್ರೀವ್‌ ಪಾಯಿಂಟರ್‌ (23, 15 ಎಸೆತ) ಉತ್ತಮ ಆರಂಭ ಪಡೆದರೂ ಪ್ರಮುಖ ಘಟ್ಟದಲ್ಲಿ ವಿಕೆಟ್‌ ಒಪ್ಪಿಸಿದರು. ಈ ಮೂವರನ್ನು ಔಟ್‌ ಮಾಡಿದ ತಿನೇಶ್‌ ಪನ್ಯಂಗರ (37ಕ್ಕೆ 4) ಜಿಂಬಾಬ್ವೆ ತಂಡದ ಗೆಲುವಿನ ಕನಸನ್ನು ಜೀವಂತವಾಗಿರಿಕೊಂಡರು.

ಐರ್ಲೆಂಡ್‌ ಗೆಲುವಿಗೆ ಕೊನೆಯ ಓವರ್‌ನಲ್ಲಿ ನಾಲ್ಕು ರನ್‌ಗಳು ಬೇಕಿದ್ದವು. ಪನ್ಯಂಗರ ಎಸೆದ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಎರಡು ರನ್‌ಗಳು ಬಂದವು. ಮೂರನೇ ಎಸೆತದಲ್ಲಿ ಎಡ್‌ ಜಾಯ್ಸ್‌ ಔಟಾದರೆ, ನಾಲ್ಕನೇ ಎಸೆತದಲ್ಲಿ ಮ್ಯಾಕ್ಸ್‌ ಸೊರೆನ್ಸನ್‌ (0) ರನೌಟಾದರು. ಕೊನೆಯ ಎರಡು ಎಸೆತಗಳಲ್ಲಿ ಎರಡು ರನ್‌ ಗಳಿಸಿದ ಐರ್ಲೆಂಡ್‌ ರೋಚಕ ಜಯ ತನ್ನದಾಗಿಸಿಕೊಂಡಿತು.

ಸ್ಕೋರ್‌: ಜಿಂಬಾಬ್ವೆ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 163 (ಹ್ಯಾಮಿಲ್ಟನ್‌ ಮಸಕಜ 21, ಬ್ರೆಂಡನ್‌ ಟೇಲರ್‌ 59, ಎಲ್ಟಾನ್‌ ಚಿಗುಂಬುರ ಔಟಾಗದೆ 22, ಜಾರ್ಜ್‌ ಡಾಕ್ರೆಲ್‌ 18ಕ್ಕೆ 2, ಆ್ಯಂಡಿ ಮೆಕ್‌ಬ್ರೈನ್‌ 26ಕ್ಕೆ 2) ಐರ್ಲೆಂಡ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 164 (ವಿಲಿಯಂ ಪೋರ್ಟರ್‌ಫೀಲ್ಡ್‌ 31, ಪೌಲ್‌ ಸ್ಟರ್ಲಿಂಗ್‌ 60, ಎಡ್‌ ಜಾಯ್ಸ್‌ 22, ಆ್ಯಂಡ್ರೀವ್‌ ಪಾಯಿಂಟರ್‌ 23, ಕೆವಿನ್‌ ಒಬ್ರಿಯನ್‌ 17, ತಿನೇಶ್‌ ಪನ್ಯಂಗರ 37ಕ್ಕೆ 4)
ಫಲಿತಾಂಶ: ಐರ್ಲೆಂಡ್‌ಗೆ ಮೂರು ವಿಕೆಟ್‌ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.