ADVERTISEMENT

ಐಸಿಸಿ ತಂಡಕ್ಕೆ ಪ್ರತಿಭಟನೆಯ ಬಿಸಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 18:30 IST
Last Updated 7 ಫೆಬ್ರುವರಿ 2011, 18:30 IST
ಐಸಿಸಿ ತಂಡಕ್ಕೆ ಪ್ರತಿಭಟನೆಯ ಬಿಸಿ
ಐಸಿಸಿ ತಂಡಕ್ಕೆ ಪ್ರತಿಭಟನೆಯ ಬಿಸಿ   

ಕೋಲ್ಕತ್ತ: ಭಾರತ-ಇಂಗ್ಲೆಂಡ್ ನಡುವಣ ವಿಶ್ವಕಪ್ ಕ್ರಿಕೆಟ್‌ನ ಲೀಗ್ ಪಂದ್ಯವನ್ನು ಸ್ಥಳಾಂತರಿಸುವ ಸಲಹೆ ನೀಡಿದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪರಿಶೀಲನಾ ತಂಡದ ಮೇಲೆ ಕೆಂಡಾಮಂಡಲವಾಗಿರುವ ಇಲ್ಲಿನ ಕ್ರಿಕೆಟ್ ಪ್ರೇಮಿಗಳು ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಮುಂದೆ ಸೋಮವಾರ ‘ಕಪ್ಪು ಬಾವುಟ’ ಹಿಡಿದು ಪ್ರತಿಭಟನೆ ನಡೆಸಿದರು.

ಒಂದು ಪಂದ್ಯವನ್ನು ಸ್ಥಳಾಂತರ ಮಾಡಿಯಾಗಿದೆ. ಆದರೆ ಈಡನ್ ಗಾರ್ಡನ್ಸ್‌ನಲ್ಲಿ ನಡೆಸಲು ನಿಗದಿಯಾಗಿರುವ ಬಾಕಿ ಪಂದ್ಯಗಳಿಗೆ ಸಿದ್ಧತೆ ಎಷ್ಟರ ಮಟ್ಟಿಗೆ ಆಗಿದೆ ಎನ್ನುವುದನ್ನು ಪರಿಶೀಲನೆ ಮಾಡಲು ಮತ್ತೆ ಐಸಿಸಿ ತಂಡವು ಇಲ್ಲಿಗೆ ಬಂದಿದೆ. ಈ ತಂಡದ ಸದಸ್ಯರು ಕ್ರೀಡಾಂಗಣಕ್ಕೆ ಆಗಮಿಸಿದಾಗ ಅವರಿಗೆ ಕಪ್ಪು ಬಾವುಟ ಹಾಗೂ ‘ಐಸಿಸಿ ಗೋ ಬ್ಯಾಕ್... ಐಸಿಸಿ ಡೌನ್ ಡೌನ್’ ಎನ್ನುವ ಧಿಕ್ಕಾರಗಳ ‘ಸ್ವಾಗತ’ ದೊರೆಯಿತು.

ಇಂಗ್ಲೆಂಡ್ ತಂಡದ ವಿರುದ್ಧ ಭಾರತವು ಇಲ್ಲಿ ಆಡುವುದನ್ನು ನೋಡಲು ಕಾತರರಾಗಿದ್ದ ಇಲ್ಲಿನ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಅದನ್ನು ಪ್ರತಿಭಟನೆಯ ಮೂಲಕ ವ್ಯಕ್ತಪಡಿಸಿದರು. ದೇಶದ ಅತ್ಯುತ್ತಮವಾದ ಕ್ರಿಕೆಟ್ ಕೇಂದ್ರದಲ್ಲಿನ ಸಿದ್ಧತೆಯ ಬಗ್ಗೆ ಐಸಿಸಿ ಪರಿಶೀಲನಾ ತಂಡವು ಅತೃಪ್ತಿ ವ್ಯಕ್ತಪಡಿಸಿದ್ದನ್ನು ಕ್ರಿಕೆಟ್ ಪ್ರಿಯರು ಖಂಡಿಸಿದರು. ಪ್ರತಿಭಟನಾಕಾರರು ಕ್ರೀಡಾಂಗಣದ ತೀರ ಹತ್ತಿರಕ್ಕೆ ಹೋಗದಂತೆ ಪೊಲೀಸರು ಎಚ್ಚರವಹಿಸಿದರು.

ಐಸಿಸಿ ಕಳುಹಿಸಿರುವ ತಂಡದ ಸದಸ್ಯರು ಸುಮಾರು ಮೂರು ತಾಸುಗಳ ಕಾಲ ಕ್ರೀಡಾಂಗಣದಲ್ಲಿ ಇದ್ದವರು. ಪ್ರತಿಯೊಂದು ಮೂಲೆಯನ್ನೂ ಸೂಕ್ಷ್ಮವಾಗಿ ಗಮನಿಸಿದರು. ‘ಕ್ರೀಡಾಂಗಣದ ಒಂದೊಂದು ಅಡಿಯನ್ನೂ ಸಂಪೂರ್ಣವಾಗಿ ಅವರಿಗೆ ತೋರಿಸಿದ್ದೇವೆ. ಬಾಕಿ ಪಂದ್ಯಗಳನ್ನು ಇಲ್ಲಿ ನಡೆಸಲು ಐಸಿಸಿ ಅನುಮಾನಪಡದ ರೀತಿಯಲ್ಲಿ ನೋಡಿಕೊಳ್ಳಲಾಗಿದೆ’ ಎಂದು ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಜಂಟಿ ಕಾರ್ಯದರ್ಶಿ ವಿಶ್ವರೂಪ್ ಡೇ ಅವರು ಆನಂತರ ಸುದ್ದಿಗಾರರಿಗೆ ತಿಳಿಸಿದರು.

ಈ ಬಾರಿ ಐಸಿಸಿ ಪ್ರತಿನಿಧಿಗಳಾಗಿ ಬಂದವರು ಸಿದ್ಧತೆಯ ಬಗ್ಗೆ ತೃಪ್ತಿಗೊಂಡಿದ್ದಾರಾ? ಎಂದು ಕೇಳಿದ್ದಕ್ಕೆ ‘ನನಗೆ ಗೊತ್ತಿಲ್ಲ; ಅವರಂತೂ ನಮ್ಮ ಮುಂದೆ ಆ ಕುರಿತು ಏನೂ ಮಾತನಾಡಿಲ್ಲ’ ಎಂದು ಹೇಳಿ ವಿಶ್ವರೂಪ್ ಅವರು ನುಣುಚಿಕೊಂಡರು.

 ಬೆಳಿಗ್ಗೆ 9.30ಕ್ಕೆ ಬಂದ ಐಸಿಸಿ ಪ್ರತಿನಿಧಿಗಳು ಹೊಸದಾಗಿ ನಿರ್ಮಿಸಲಾಗಿರುವ ಎರಡು ಗ್ಯಾಲರಿಗಳನ್ನು ಪರಿಶೀಲಿಸಿದರು. ಆಟಗಾರರ ಡ್ರೆಸಿಂಗ್ ಕೋಣೆಯಲ್ಲಿ ಒಂದೊಂದು ಮೂಲೆಯನ್ನೂ ಪರೀಕ್ಷೆ ಮಾಡಿದರು. ಆನಂತರ ಕೆಲವು ಕಾರ್ಪೊರೇಟ್ ಬಾಕ್ಸ್‌ಗಳನ್ನು ನೋಡಿದರು. ಸೈಟ್ ಸ್ಕ್ರೀನ್‌ಗಳನ್ನು ನೋಡುವಲ್ಲಿ ಹೆಚ್ಚಿನ ಸಮಯ ತೆಗೆದುಕೊಂಡರು ಎನ್ನುವುದು ವಿಶೇಷವೆಂದು ಸಿಎಬಿ ಮೂಲಗಳು ತಿಳಿಸಿವೆ.

ಹೊಸ ಗ್ಯಾಲರಿಗಳ ಮೇಲ್ಛಾವಣಿಯ ಕೆಲಸ ಈಗಲೂ ಪೂರ್ಣಗೊಂಡಿಲ್ಲ. ಬೇಗ ನಿರ್ಮಾಣ ಪೂರ್ಣಗೊಳಿಸಬೇಕೆಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕೆಲವು ದಿನಗಳ ಹಿಂದೆಯೇ ಸೂಚನೆ ನೀಡಿದೆ. ಆದರೆ ಅದು ಅವಸರದಲ್ಲಿ ಸಾಧ್ಯವಾಗುವ ಕೆಲಸವಲ್ಲ ಎನ್ನುವುದನ್ನು ಸಿಎಬಿ ಈಗಾಗಲೇ ಸ್ಪಷ್ಟಪಡಿಸಿದೆ. ಛಾವಣಿಯು ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ಆದ್ದರಿಂದ ಅಲ್ಲಿ ಈಗಲೇ ಚಾವಣಿ ಅಳವಡಿಸಲಾಗದೆಂದು ಕೂಡ ನೇರವಾಗಿ ತಿಳಿಸಿದೆ. ಆದ್ದರಿಂದ ಐಸಿಸಿ ಮತ್ತೆ ಯೋಚನೆ ಮಾಡುವಂಥ ಸ್ಥಿತಿ ನಿರ್ಮಾಣವಾಗಿದೆ
.
ಈಡನ್‌ನಲ್ಲಿ ಭಾರತ ತಂಡದ ಆಟವನ್ನು ನೋಡುವ ಅವಕಾಶವಂತೂ ತಪ್ಪಿ ಹೋಗಿದೆ. ಫೆಬ್ರುವರಿ 27ರ ಪಂದ್ಯವು ಬೆಂಗಳೂರಿನಲ್ಲಿ ನಡೆಯಲಿದೆ. ಅದನ್ನು ಬಿಟ್ಟು ಮೂರು ಪಂದ್ಯಗಳು ಇಲ್ಲಿ ನಡೆಯಬೇಕು. ದಕ್ಷಿಣ ಆಫ್ರಿಕಾ-ಐರ್ಲೆಂಡ್ (ಮಾರ್ಚ್ 15), ಹಾಲೆಂಡ್-ಐರ್ಲೆಂಡ್ (ಮಾ.18) ಹಾಗೂ ಜಿಂಬಾಬ್ವೆ-ಕೀನ್ಯಾ (ಮಾ.20) ತಂಡಗಳು ಮಾತ್ರ ಇಲ್ಲಿ ಆಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.