ADVERTISEMENT

ಐ-ಲೀಗ್: ಇಂದು ಎಚ್‌ಎಎಲ್-ಎಂಎಫ್‌ಸಿ ಸೆಣಸಾಟ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 17:55 IST
Last Updated 26 ಫೆಬ್ರುವರಿ 2011, 17:55 IST

ಬೆಂಗಳೂರು: ಸೋಲಿನ ಸುಳಿಯಲ್ಲಿದ್ದ ಕೊನೆಯ ಪಂದ್ಯವನ್ನು ಡ್ರಾ ಮಾಡಿಕೊಂಡು ಆತ್ಮವಿಶ್ವಾಸದಲ್ಲಿರುವ ತವರು ನೆಲದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮೆಟೆಡ್ (ಎಚ್‌ಎಎಲ್) ಸ್ಪೋರ್ಟ್ಸ್ ಕ್ಲಬ್ ತಂಡದವರು ಭಾನುವಾರ ಇಲ್ಲಿ ನಡೆಯಲಿರುವ ಐ-ಲೀಗ್ ಪುಟ್‌ಬಾಲ್ ಪಂದ್ಯದಲ್ಲಿ ಮುಂಬೈಯ ಎಫ್.ಸಿ. ತಂಡದ ಸವಾಲನ್ನು ಎದುರಿಸಲಿದ್ದಾರೆ.

ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಎಚ್‌ಎಎಲ್ ತಂಡದಲ್ಲಿ ಕ್ಲೇವಿಯರ್ ವಿಜಯ್ ಕುಮಾರ್ ಆಡುತ್ತಿದ್ದಾರೆ. ಹಳದಿ ಕಾರ್ಡ್ ಪಡೆದಿದ್ದರಿಂದ ಕೊನೆಯ ಪಂದ್ಯದಲ್ಲಿ ಅವರು ಆಡಿರಲಿಲ್ಲ. ಎಚ್‌ಎಎಲ್ ತಂಡ ಐ ಲೀಗ್ ಟೂರ್ನಿಯಲ್ಲಿ ಈಗಾಗಲೇ ಒಟ್ಟು 15 ಪಂದ್ಯಗಳನ್ನು ಆಡಿದ್ದು, ನಾಲ್ಕರಲ್ಲಿ ಗೆಲುವು ಕಂಡಿದೆ. ಏಳು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ನಾಲ್ಕು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದು, ಒಟ್ಟು 16 ಪಾಯಿಂಟ್‌ಗಳಲ್ಲಿ ಕಲೆ ಹಾಕಿದೆ.

ಕೊನೆಯ ಪಂದ್ಯದಲ್ಲಿ ಏರ್ ಇಂಡಿಯಾ ತಂಡವನ್ನು ಮಣಿಸಿರುವ ಮುಂಬೈಯ ಎಫ್‌ಸಿ ತಂಡವು ಕೂಡಾ ಆತ್ಮವಿಶ್ವಾಸದಲ್ಲಿದೆ. ಎಂಎಫ್‌ಸಿ ತಂಡ ಆಡಿರುವ 14 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಪಡೆದಿದ್ದು, ನಾಲ್ಕರಲ್ಲಿ ಸೋಲು ಅನುಭವಿಸಿದೆ. ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಈ ತಂಡ ಒಟ್ಟು 24 ಪಾಯಿಂಟ್‌ಗಳನ್ನು ಹೊಂದಿದೆ. ಕೋಚ್ ಆರ್. ತ್ಯಾಗರಾಜನ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದರು.

ಎರಡೂ ತಂಡಗಳ ಆಟಗಾರರು ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ್ದು, ಉಭಯ ತಂಡಗಳಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆಯಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ಸ್ಥಳ: ಕಂಠೀರವ ಕ್ರೀಡಾಂಗಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.