ಬೆಂಗಳೂರು: ನಿರೀಕ್ಷೆ ಹುಸಿಯಾಗಲಿಲ್ಲ, ಹಿಂದೂಸ್ತಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ ಕ್ಲಬ್ (ಎಚ್‌ಎಎಲ್) ತಂಡಕ್ಕೆ ಐ ಲೀಗ್ ಫುಟ್‌ಬಾಲ್ ಟೂರ್ನಿಯ 23ನೇ ಸುತ್ತಿನ ಪಂದ್ಯದಲ್ಲೂ ಸೋಲು ತಪ್ಪಲಿಲ್ಲ.
ಅಶೋಕನಗರದಲ್ಲಿರುವ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಪುಣೆ ಫುಟ್‌ಬಾಲ್ ಕ್ಲಬ್ 6-4 ಗೋಲುಗಳಿಂದ ಅತಿಥೇಯ ಎಚ್‌ಎಎಲ್ ತಂಡವನ್ನು ಸೋಲಿಸಿತು.
ಆರಂಭದಲ್ಲಿಯೇ ಉತ್ತಮ ಪ್ರದರ್ಶನ ನೀಡಿದ ಎಚ್‌ಎಎಲ್ ತಂಡದ ರೋಹಿತ್ ಚಾಂದ್ ಮೊದಲ ನಿಮಿಷದಲ್ಲಿಯೇ ಗೋಲಿನ ಖಾತೆ ತೆರೆದರು.
ಪುಣೆಯ ಸುಭಾಷ್ ಸಿಂಗ್ 9ನೇ ನಿಮಿಷದಲ್ಲಿ ಗೋಲು ತಂದಿಟ್ಟು ತಿರುಗೇಟು ನೀಡಿದರು. ಇದಕ್ಕೆ ಸಾಥ್ ನೀಡಿದ ನಾಯಕ ಮಂಡೋವ್ ಕೇಟಾ 34 ಹಾಗೂ 36ನೇ ನಿಮಿಷದಲ್ಲಿ ಸತತ ಎರಡು ಸಲ ಚೆಂಡನ್ನು ಗುರಿ ಸೇರಿಸಿದರು. ಮೊದಲಾರ್ಧ ಅಂತ್ಯಗೊಳ್ಳಲು ಎರಡು ನಿಮಿಷ ಬಾಕಿ ಇರುವಾಗ ದುಹಾವ್ ಪೆರ‌್ರಿ ಗೋಲು ಗಳಿಸಿದರು. ಇದರಿಂದ ಪುಣೆ ತಂಡ ವಿರಾಮದ ವೇಳೆಗೆ 4-1ರಲ್ಲಿ ಮುನ್ನಡೆ ಸಾಧಿಸಿತು. ಇದು ಪಿ. ಪ್ರಮೋದ್ ನೇತೃತ್ವದ ಎಚ್‌ಎಎಲ್ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು.
ಪುಣೆಯ ಸುಭಾಷ್ (65ನೇ ನಿಮಿಷ) ಗೋಲು ಗಳಿಸಿ ಅಂತರವನ್ನು 5-1ಕ್ಕೆ ಹೆಚ್ಚಿಸಿದರು. ಈ ವೇಳೆ `ಎಚ್‌ಎಎಲ್‌ಗೆ ಮತ್ತೆ ಸೋಲು~ ಎಂದುಕೊಂಡು ಅಭಿಮಾನಿಗಳು ಕ್ರೀಡಾಂಗಣದಿಂದ ಜಾಗ ಖಾಲಿ ಮಾಡತೊಡಗಿದರು.
ಈ ವೇಳೆ ಜಗಬ್ ಹಮ್ಜಾ ಹಾಗೂ ರೋಹಿತ್ ಕ್ರಮವಾಗಿ 70 ಮತ್ತು 73ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಪಂದ್ಯಕ್ಕೆ ತಿರುವು ನೀಡುವ ಸೂಚನೆ ನೀಡಿದರು. ಇದರಿಂದ ಕೆಲವರು ಮರಳಿ ಕ್ರೀಡಾಂಗಣದತ್ತ ಹೆಜ್ಜೆ ಹಾಕಿದರು. ರೋಹಿತ್ 87ನೇ ನಿಮಿಷದಲ್ಲಿ ಇನ್ನೊಂದು ಗೋಲನ್ನು ಕಲೆ ಹಾಕಿ ಅಂತರವನ್ನು 4-5ಕ್ಕೆ ತಗ್ಗಿಸಿದರು.
ಸಮಬಲ ಸಾಧಿಸಲು ಈ ವೇಳೆ ತವರಿನ ತಂಡಕ್ಕೆ ಕೇವಲ ಒಂದು ಗೋಲಿನ ಅಗತ್ಯವಿತ್ತು. ಮೊದಲ ಮೂರು ಗೋಲು ಗಳಿಸಿದ್ದ ರೋಹಿತ್ ಚಾಂದ್ ಮೇಲೆ ಎಲ್ಲರ ನಿರೀಕ್ಷೆ ಇತ್ತು. ಆದರೆ, ಪುಣೆಯ ಮಣಿಂದರ್ ಸಿಂಗ್ 89ನೇ ನಿಮಿಷದಲ್ಲಿ ಆಕರ್ಷಕವಾಗಿ ಚೆಂಡನ್ನು ಗುರಿ ಸೇರಿಸಿದರು. ಆಗ ಈ ಅಂತರ 6-4ಕ್ಕೆ ಹೆಚ್ಚಾಯಿತು. ಇನ್ನುಳಿದ ಕೆಲ ನಿಮಿಷಗಳ ಅವಧಿಯಲ್ಲಿ ಪುಣೆ `ಟೈಂಪಾಸ್~ ಮೊರೆ ಹೋಯಿತು.
ಹಿಂದಿನ ಪಂದ್ಯಗಳಿಗೆ ಹೋಲಿಸಿದರೆ, ಎಚ್‌ಎಎಲ್ ಆರಂಭದಲ್ಲಿ ಗೋಲು ಗಳಿಸಲು ಪರದಾಡುತ್ತಿತ್ತು. ಆದರೆ, ಈ ಪಂದ್ಯದಲ್ಲಿ ಆರಂಭಿಕ ಮುನ್ನಡೆ ಸಾಧಿಸಿಯೂ ಸೋಲು ಅನುಭವಿಸಿತು.
ಕಾಡಿದ ನೆನಪು: ಡಿವಿಷನ್ ಪಂದ್ಯವನ್ನು ಆಡುವಾಗ ಕ್ರೀಡಾಂಗಣದಲ್ಲಿಯೇ ಮೃತಪಟ್ಟ ಡಿ. ವೆಂಕಟೇಶ್ ನೆನಪು ಪದೇ ಪದೇ ಕಾಡಿತು.
ಈ ಆಟಗಾರನ ಭಾವಚಿತ್ರ ಹೊಂದಿದ್ದ ಫ್ಲೆಕ್ಸನ್ನು ಅಭಿಮಾನಿಗಳು ಅಂಗಳದ ಸುತ್ತಲೂ ಹಾಕಿದ್ದರು. ಮಾರ್ಚ್ 31ರಂದು ಈ ಪಂದ್ಯ ನಡೆಯಬೇಕಿತ್ತು. ಈ ಘಟನೆ ನಡೆದ ಕಾರಣ ಪಂದ್ಯವನ್ನು ಮುಂದೂಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.