ದೀಪಿಕಾ ಕುಮಾರಿ
ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತದ ಬಿಲ್ಲುಗಾರರು ಪದಕ ಗೆಲ್ಲಬಹುದೆಂಬ ನಿರೀಕ್ಷೆ ಬಹಳ ಮಂದಿಯಲ್ಲಿದೆ. ಅದರಲ್ಲಿಯೂ ದೀಪಿಕಾ ಕುಮಾರಿ ಈ ಸಲ ಪದಕ ಗೆಲ್ಲುವುದಂತೂ ಖಚಿತ ಎಂಬ ಮಾತು ವ್ಯಾಪಕವಾಗಿ ಕೇಳಿ ಬರುತ್ತಿದೆ. ಈಚೆಗೆ ಇವರು ಆರ್ಚರಿ ರಿಕರ್ವ್ ವಿಭಾಗದಲ್ಲಿ ವಿಶ್ವದ ಅಗ್ರಕ್ರಮಾಂಕದ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ರಾಂಚಿಯಲ್ಲಿ ಹುಟ್ಟಿದ (13-6-1994) ಇವರಿಗೆ ಎಳವೆಯಿಂದಲೂ ಕ್ರೀಡಾ ಚಟುವಟಿಕೆಗಳಲ್ಲಿ ಅಪಾರ ಆಸಕ್ತಿ. ರಿಕ್ಷಾ ಚಾಲಕರಾಗಿರುವ ಶಿವನಾರಾಯಣ್ ಮಹತೊ ಮತ್ತು ಸ್ಥಳೀಯ ಆಸ್ಪತ್ರೆಯಲ್ಲಿ ದಾದಿಯಾಗಿರುವ ಗೀತಾ ದಂಪತಿ ತಮ್ಮ ಪುತ್ರಿ ದೀಪಿಕಾಳ ಕ್ರೀಡಾಸಕ್ತಿಗೆ ಬೆಂಬಲವಾಗಿ ನಿಂತಿದ್ದರು.
2005ರಲ್ಲಿ ಅರ್ಜುನ್ ಆರ್ಚರಿ ಅಕಾಡೆಮಿಯಲ್ಲಿ ತರಬೇತಿಗೆಂದು ದೀಪಿಕಾ ಸೇರಿದ ಮೇಲೆ ಇವರ ಕ್ರೀಡಾ ಬದುಕಿಗೊಂದು ಹೊಸ ಆಯಾಮ ಸಿಕ್ಕಿತು. ಆ ಸಂದರ್ಭದಲ್ಲಿ ತೋರಿದ ವಿಶೇಷ ಸಾಮರ್ಥ್ಯದ ಮೇರೆಗೆ ಮರುವರ್ಷವೇ ಇವರಿಗೆ ಜಮ್‌ಷೆಡ್‌ಪುರದ ಟಾಟಾ ಆರ್ಚರಿ ಅಕಾಡೆಮಿಯಲ್ಲಿ ಪ್ರವೇಶ ಸಿಕ್ಕಿತು. ನಂತರ ದೀಪಿಕಾ ಹಿಂತಿರುಗಿ ನೋಡಿದ್ದೇ ಇಲ್ಲ.
ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಹತ್ತು ಹಲವು ಪ್ರಶಸ್ತಿಗಳನ್ನು ಗೆದ್ದ ಇವರು 2009ರ ನವೆಂಬರ್‌ನಲ್ಲಿ ಕೆಡೆಟ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರು. ಆಗ ಇವರಿಗೆ ಕೇವಲ 15 ವರ್ಷ ವಯಸ್ಸು.
ದೆಹಲಿಯಲ್ಲಿ 2010ರಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇವರು ಎರಡು ಚಿನ್ನದ ಪದಕಗಳನ್ನು ಗೆದ್ದರು. ಆದರೆ ಗುವಾಂಗ್‌ಜೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಇವರಿಗೆ ವೈಯಕ್ತಿಕ ಪದಕ ಗೆಲ್ಲಲಾಗಲಿಲ್ಲ. ಆದರೆ ದೋಲಾ ಬ್ಯಾನರ್ಜಿ, ರಿಮಿಲ್ ಬುರ‌್ಯುಲಿ ಜತೆ ಸೇರಿ ತಂಡ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದರು.
ಕಳೆದ ಮೇ ತಿಂಗಳಲ್ಲಿ ಟರ್ಕಿಯ ಅಂತಲಾದಲ್ಲಿ ನಡೆದ ವಿಶ್ವಕಪ್ ರಿಕರ್ವ್ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಇವರಿಗೆ ಇದೀಗ ಇನ್ನಷ್ಟೂ ಸಂತಸ. ತಮ್ಮ ವಿಭಾಗದಲ್ಲಿ ಜೂನಿಯರ್ ವಿಶ್ವಚಾಂಪಿಯನ್ ಹೆಗ್ಗಳಿಕೆ ಹೊಂದಿರುವ ಇವರು ಪ್ರಸಕ್ತ ಅಗ್ರಕ್ರಮಾಂಕಕ್ಕೇರಿದ್ದಾರೆ. ಈ ಸಾಧನೆಗಳಿಂದಾಗಿ ಕ್ರಮಾಂಕಪಟ್ಟಿಯಲ್ಲಿ ದಕ್ಷಿಣ ಕೊರಿಯಾದ ಬೊ ಬೇ ಕಿ ಅವರನ್ನು ಹಿಂದಿಕ್ಕಿ 3ನೇ ಸ್ಥಾನದಿಂದ ಏಕಾಏಕಿ ಅಗ್ರಸ್ಥಾನಕ್ಕೇರಿದ್ದಾರೆ.
ಪ್ರಸಕ್ತ ಪೂರ್ಣಿಮಾ ಮಹತೊ ಅವರಿಂದ ತರಬೇತಿ ಪಡೆಯುತ್ತಿರುವ ದೀಪಿಕಾ ಕುಮಾರಿ ಅವರಿಗೆ ಆರ್ಥಿಕವಾಗಿ ಯಾವುದೇ ತೊಂದರೆಯಾಗದಂತೆ ಟಾಟಾ ಸ್ಟೀಲ್ ಸಂಸ್ಥೆ ಜವಾಬ್ದಾರಿ ವಹಿಸಿಕೊಂಡಿದೆ.
ಎಡ್ವಿನ್ ಮೋಸೆಸ್
ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಪುರುಷರ 400ಮೀ. ಹರ್ಡಲ್ಸ್ ಲೋಕದಲ್ಲಿ ಅಪ್ರತಿಮರಾಗಿ ಕಂಡು ಬಂದ ಎಡ್ವಿನ್ ಮೋಸೆಸ್ ಅವರ ಸಾಧನೆ ಅನನ್ಯ. ಇವರು ಸತತವಾಗಿ 122 ಅಂತರರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಕೂಟಗಳಲ್ಲಿ ಈ ಸ್ಪರ್ಧೆಯಲ್ಲಿ (1977ರ ಆಗಸ್ಟ್‌ನಿಂದ 1987ರ ಮೇ ತಿಂಗಳವರೆಗೆ) ಅಜೇಯವಾಗುಳಿದು, ನಿರಂತರ ಚಿನ್ನದ ಸಾಧನೆ ಮಾಡಿದವರು.
ಇವರು 1976ರ ಮಾಂಟ್ರಿಯಲ್ ಒಲಿಂಪಿಕ್ಸ್‌ನಲ್ಲಿ 47.63 ಸೆಕೆಂಡುಗಳಲ್ಲಿ ನಿಗದಿತ ದೂರವನ್ನು ಕ್ರಮಿಸಿ ಚಿನ್ನದ ಪದಕ ಗೆದ್ದಿದ್ದರು. 1984ರ ಒಲಿಂಪಿಕ್ಸ್‌ನಲ್ಲಿ ಕೂಡಾ ಸ್ವರ್ಣ ಪದಕ ಇವರದೇ ಆಗಿತ್ತು. ಆದರೆ 1988ರ ಸೋಲ್ ಒಲಿಂಪಿಕ್ಸ್‌ನಲ್ಲಿ ಇವರು ಕಂಚಿನ ಪದಕಕ್ಕೆ ತೃಪ್ತರಾಗಬೇಕಾಯಿತು. 1980ರ ಮಾಸ್ಕೊ ಒಲಿಂಪಿಕ್ಸ್ ಅನ್ನು ಅಮೆರಿಕ ಬಹಿಷ್ಕರಿಸಿದ್ದರಿಂದ ಇವರು ಪಾಲ್ಗೊಂಡಿರಲಿಲ್ಲ. ಒಂದು ವೇಳೆ ಭಾಗವಹಿಸಿದ್ದರೆ ಬಂಗಾರದ ಸಾಧನೆ ತೋರುತ್ತಿದ್ದರೆನ್ನುವುದರಲ್ಲಿ ಎರಡು ಮಾತೇ ಇಲ್ಲ.
ಓಹಿಯೊ ಪ್ರಾಂತ್ಯದ ಡೇಟನ್‌ನಲ್ಲಿ ಹುಟ್ಟಿದ (31-8-1955) ಇವರು ಆರ್ಥಿಕವಾಗಿ ಸ್ಥಿತಿವಂತ ಕುಟುಂಬದಿಂದ ಬಂದವರೇನಲ್ಲ. ಹೀಗಾಗಿ ಇವರು ಅಟ್ಲಾಂಟಕ್ಕೆ ಸಮೀಪದ ಊರಿನ ಸರ್ಕಾರಿ ಹೈಸ್ಕೂಲೊಂದರ ಮೈದಾನದಲ್ಲೇ ಅಭ್ಯಾಸ ನಡೆಸಿ ರಾಷ್ಟ್ರೀಯ ಕೂಟದ 400ಮೀ. ಹರ್ಡಲ್ಸ್‌ನಲ್ಲಿ ದಾಖಲೆ ನಿರ್ಮಿಸಿದ್ದರು. ಹೀಗಾಗಿ ಅಮೆರಿಕಾದ ಅಥ್ಲೆಟಿಕ್ ತಂಡಕ್ಕೆ ಆಯ್ಕೆಯಾಗಿ, 1976ರ ಒಲಿಂಪಿಕ್ಸ್‌ನಲ್ಲಿ ಬಂಗಾರದ ಸಾಧನೆ ಮಾಡಿದ್ದರು.
ಇವರು 1983 ಮತ್ತು 87ರ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದಲ್ಲದೆ ನಾಲ್ಕು ಸಲ ವಿಶ್ವ ದಾಖಲೆಯನ್ನು ಸುಧಾರಿಸಿದ್ದರು. ಇವರು ಒಮ್ಮೆ 47.02 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಜೀವನಶ್ರೇಷ್ಟ ಸಾಧನೆ ತೋರಿದ್ದರು.
ಅಮೆರಿಕಾದ ಸರ್ವಕಾಲ ಶ್ರೇಷ್ಟ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಎಡ್ವಿನ್ ಅವರು ಲಾಸ್‌ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರೀಡಾಪಟುಗಳ ಪರವಾಗಿ ಪ್ರತಿಜ್ಞಾವಿಧಿ ಸ್ವೀಕರಿಸುವ ಗೌರವ ಪಡೆದಿದ್ದರು.
ಇತಿಹಾಸದ ಪುಟಗಳಿಂದ
ಮೂವತ್ತರ ದಶಕದ ಆರಂಭದಲ್ಲಿ ಆರ್ಥಿಕ ಮುಗ್ಗಟ್ಟು ಜಗತ್ತಿನಾದ್ಯಂತ ಇನ್ನಿಲ್ಲದಂತೆ ಕಾಡಿತ್ತು. ಹೀಗಾಗಿ 1932ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಪೈಪೋಟಿ ಕಂಡು ಬರಲಿಲ್ಲ. ಆಗ ಅಮೆರಿಕಾದ ಲಾಸ್‌ಏಂಜಲೀಸ್ ನಗರ ಆತಿಥ್ಯ ವಹಿಸಿಕೊಂಡಿತ್ತು. ಆದರೆ ಈ ಒಲಿಂಪಿಕ್ಸ್ ಕೂಟ ಮಾತ್ರ ಲಾಭ ಗಳಿಸಿತ್ತು !
ಆ ವರ್ಷ 37 ದೇಶಗಳಿಂದ 126 ಮಹಿಳೆಯರೂ ಸೇರಿದಂತೆ 1,332 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಈ ಕೂಟದ ಉದ್ಘಾಟನಾ ಸಮಾರಂಭ ಹಿಂದೆಂದಿಗಿಂತಲೂ ವರ್ಣರಂಜಿತವಾಗಿ ನಡೆಯಿತು. ಈ ಸಮಾರಂಭದಲ್ಲಿ ಒಲಿಂಪಿಕ್ಸ್ ಚರಿತ್ರೆಯಲ್ಲಿಯೇ ಮೊದಲ ಬಾರಿಗೆ ಎಂಬಂತೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಲಾಸ್‌ಏಂಜಲೀಸ್ ನಗರದಲ್ಲಿ ಅಂದು ಹಬ್ಬದ ವಾತಾವರಣ ಮೂಡಿತ್ತು.
ಈ ಕೂಟದಲ್ಲಿ ನಿರೀಕ್ಷೆಯಂತೆ ಅಮೆರಿಕ ತಂಡವೇ ಸಂಪೂರ್ಣ ಮೇಲುಗೈ ಸಾಧಿಸಿತ್ತು. ಡೈವಿಂಗ್‌ನ ಎಲ್ಲಾ 12 ಪದಕಗಳೂ ಅಮೆರಿಕಾದ ಪಾಲಾಗಿದ್ದವು. ಅಮೆರಿಕ 41 ಚಿನ್ನಗಳೂ ಸೇರಿದಂತೆ ಒಟ್ಟು 103 ಪದಕಗಳನ್ನು ಗಳಿಸಿದ್ದರೆ, ಇಟಲಿ 12 ಚಿನ್ನಗಳೂ ಸೇರಿದಂತೆ 36 ಪದಕಗಳನ್ನು ಗೆದ್ದಿತ್ತು. ಬ್ರಿಟನ್ 4 ಚಿನ್ನವೂ ಸೇರಿದಂತೆ 16 ಪದಕಗಳನ್ನಷ್ಟೇ ಗೆಲ್ಲಲು ಶಕ್ತವಾಗಿತ್ತು.
ಭಾರತದ ಹಾಕಿ ತಂಡ ಎರಡನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದು ನಿರಾಯಾಸವಾಗಿ ಸ್ವರ್ಣ ಪದಕ ಗೆದ್ದಿತ್ತು. ಪಂದ್ಯವೊಂದರಲ್ಲಿ ಭಾರತದ ಆಟಗಾರರು 24-1 ಗೋಲುಗಳಿಂದ ಅಮೆರಿಕವನ್ನು ಸೋಲಿಸಿದ್ದರು.
ಇನ್ನೊಂದು ಪಂದ್ಯದಲ್ಲಿ ಜಪಾನ್ ಕೂಡಾ ಅಮೆರಿಕಾವನ್ನು ಮಣಿಸಿತ್ತು. ಜಪಾನ್ ಬೆಳ್ಳಿ ಗೆದ್ದರೆ, ಅಮೆರಿಕ ಕಂಚು ಗಳಿಸಿತ್ತು! ಈ ಕೂಟದಲ್ಲಿಯೇ ಮೊದಲ ಬಾರಿಗೆ ವಿಜೇತರಿಗೆ ಪದಕ ನೀಡುವುದಕ್ಕಾಗಿ ವಿಜಯವೇದಿಕೆ (ವಿಕ್ಟರಿ ಪೋಡಿಯಂ)ಯನ್ನು ಬಳಸಲಾಯಿತು. ನಂತರದ ಒಲಿಂಪಿಕ್ಸ್‌ಗಳಲ್ಲಿ ಈ ಪರಂಪರೆ ಮುಂದುವರಿಯಿತು.
ಕ್ರೀಡಾಪಟುಗಳು ಒಲಿಂಪಿಕ್ಸ್ ಗ್ರಾಮದಲ್ಲಿ ಇಳಿದುಕೊಳ್ಳುವ ಸಂಪ್ರದಾಯವೂ ಈ ಕೂಟದಲ್ಲಿಯೇ ಆರಂಭವಾಗಿದ್ದು.
ಅರ್ಜೆಂಟೀನಾ
ಅರ್ಜೆಂಟಿನಾ ಬಹುಸಂಸ್ಕೃತಿಯ ದೇಶ. ಶತಮಾನಗಳ ಯೂರೊಪ್ ದೇಶಗಳ ಸಂಪರ್ಕದಿಂದಾಗಿ ಯೂರೊಪ್ ಪ್ರಭಾವವೂ ಹೆಚ್ಚು. ಕ್ರೀಡಾ ಚಟುವಟಿಕೆಗಳಲ್ಲಂತೂ ಅದು ಎದ್ದು ಕಾಣುತ್ತದೆ. ಒಲಿಂಪಿಕ್ ಆಂದೋಲನ ಹುಟ್ಟು ಹಾಕುವ ನಿಟ್ಟಿನಲ್ಲಿ ಮೊದಲಿಗೆ ಒಗ್ಗೂಡಿದ್ದ ಎಂಟು ದೇಶಗಳಲ್ಲಿ ಈ ದೇಶವೂ ಒಂದು. ಮೊದಲ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯಲ್ಲಿ ಅರ್ಜೆಂಟಿನಾ ಸ್ಥಾನ ಪಡೆದಿತ್ತು. ಆದರೆ ಈ ದೇಶವು 1900ರಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿತ್ತು.
ನಂತರ 1920ರವರೆಗೆ ಯಾವುದೇ ಪದಕ ಗೆದ್ದಿರಲಿಲ್ಲ. ಪ್ಯಾರಿಸ್‌ನಲ್ಲಿ 1924ರಲ್ಲಿ ನಡೆದ ಕೂಟದಲ್ಲಿ ಈ ದೇಶ ಆರು ಪದಕಗಳನ್ನು ಗೆದ್ದುಕೊಂಡಿತ್ತು. ಆ ನಂತರ ಅರ್ಜೆಂಟಿನಾ ತಂಡವು ಒಲಿಂಪಿಕ್ಸ್‌ನಲ್ಲಿ ಗಣನೀಯ ಸಾಮರ್ಥ್ಯವನ್ನಂತೂ ತೋರಲೇ ಇಲ್ಲ.
ಆದರೆ ಫುಟ್‌ಬಾಲ್ ಅಪಾರ ಜನಪ್ರಿಯವಾಗಿರುವ ಈ ದೇಶ ಇದೇ ಕ್ರೀಡೆಯಲ್ಲಿ ಎರಡು ಸಲ ಬಂಗಾರದ ಪದಕ ಗೆದ್ದಿದ್ದರೆ, ಇನ್ನೆರಡು ಸಲ ರಜತ ಪದಕ ಗೆದ್ದಿತ್ತು. ಬ್ಯಾಸ್ಕೆಟ್‌ಬಾಲ್‌ನಲ್ಲಿ ಕೂಡಾ ಈ ದೇಶ ಗಮನಾರ್ಹ ಸಾಮರ್ಥ್ಯವನ್ನೇ ತೋರಿದೆ.
ಈ ದೇಶ ಈವರೆಗೆ 17 ಚಿನ್ನವೂ ಸೇರಿದಂತೆ ಒಟ್ಟು 66 ಪದಕಗಳನ್ನು ಗೆದ್ದುಕೊಂಡಿದೆ. ಇವುಗಳಲ್ಲಿ 24 ಪದಕಗಳು ಬಾಕ್ಸಿಂಗ್‌ನಿಂದಲೇ ಬಂದಿವೆ ಎನ್ನುವುದೊಂದು ವಿಶೇಷ. ಅಥೆನ್ಸ್ ಮತ್ತು ಬೀಜಿಂಗ್ ಒಲಿಂಪಿಕ್ಸ್‌ಗಳಲ್ಲಿ ತಲಾ ಆರು ಪದಕಗಳನ್ನು ಗೆದ್ದಿರುವ ಅರ್ಜೆಂಟಿನಾ, ಇದೀಗ ಲಂಡನ್ ಒಲಿಂಪಿಕ್ಸ್‌ನಲ್ಲಿ ಇನ್ನೂ ಎತ್ತರದ ಸಾಮರ್ಥ್ಯ ತೋರಲು ತುದಿಗಾಲಲ್ಲಿ ನಿಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.