ADVERTISEMENT

ಒಲಿಂಪಿಕ್ಸ್ ಸುತ್ತ-ಮುತ್ತ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2012, 19:30 IST
Last Updated 6 ಆಗಸ್ಟ್ 2012, 19:30 IST
ಒಲಿಂಪಿಕ್ಸ್ ಸುತ್ತ-ಮುತ್ತ
ಒಲಿಂಪಿಕ್ಸ್ ಸುತ್ತ-ಮುತ್ತ   

ಒಲಿಂಪಿಕ್ಸ್ ಸಿಟಿ ಅಲ್ಲ; ಭೂತ ನಗರಿ!
ಲಂಡನ್ (ಎಎಫ್‌ಪಿ): ಖಾಲಿ ಖಾಲಿ ರೆಸ್ಟೋರೆಂಟ್‌ಗಳು, ನಿರ್ಜನ ಬೀದಿಗಳು, ಗಿರಾಕಿಗಳಿಗಾಗಿ ಕಾದು ಕುಳಿತಿರುವ ಅಂಗಡಿಗಳ ಮಾಲೀಕರು... ಸದಾ ಗಿಜುಗುಡುತ್ತಿದ್ದ ಲಂಡನ್ ನಗರಿಯಲ್ಲಿ ಈಗ ಕಂಡುಬರುತ್ತಿರುವ ದೃಶ್ಯವಿದು.

ಹಾಗಾಗಿ ಇದು ಒಲಿಂಪಿಕ್ಸ್ ಸಿಟಿಯೋ, ಭೂತ ನಗರಿಯೋ ಎಂಬ ಅನುಮಾನಕ್ಕೆ ಕಾರಣವಾಗಿದೆ. ಒಲಿಂಪಿಕ್ಸ್ ನಡೆಯುತ್ತಿರುವ ಕಾರಣ ಹೋಟೆಲ್‌ಗಳ ದರದಲ್ಲಿ ಹೆಚ್ಚಾಗಬಹುದು ಎಂಬ ಕಾರಣ ಪ್ರವಾಸಿಗರು ಲಂಡನ್ ನಗರಿಯಿಂದ ದೂರ ಉಳಿದಿದ್ದಾರೆ. ಜೊತೆಗೆ ಟ್ರಾಫಿಕ್ ಸಮಸ್ಯೆ ಆಗಬಹುದು ಎಂದು ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ಪ್ರವಾಸಿಗರಿಗೆ ನೀಡಿದ್ದ ಎಚ್ಚರಿಕೆ ತಿರುಗೇಟಾಗಿ ಪರಿಣಮಿಸಿದೆ.

`2011ರ ಇದೇ ಸಮಯಕ್ಕೆ ಹೋಲಿಸಿದರೆ ಈ ಬಾರಿ ವ್ಯಾಪಾರದಲ್ಲಿ ಗಣನೀಯ ಕುಸಿತ ಕಂಡಿದೆ. ಪ್ರವಾಸಿಗಳ ಸಂಖ್ಯೆ ಕಡಿಮೆ ಆಗಿದೆ~ ಎಂದು ಮೇಸನ್ ಬೆರ್ಟಾಕ್ಸ್ ಪಬ್ ಮಾಲೀಕ ಮಿಶೆಲ್ ವೇಡ್ ನುಡಿದಿದ್ದಾರೆ.
 `ವ್ಯಾಪಾರ ನಡೆಯುವ ರೀತಿ ಇದಲ್ಲ. ಪಬ್ ಮಾತ್ರವಲ್ಲ; ನನ್ನ ಗೆಳೆಯ ಸೆಲೂನ್ ಇಟ್ಟುಕೊಂಡಿದ್ದಾನೆ. ಅದ್ಭುತ ಹೇರ್ ಡ್ರೆಸರ್ ಆತ. ಆದರೆ ಶನಿವಾರ ಕೇವಲ ಇಬ್ಬರು ಗ್ರಾಹಕರು ಆತನ ಅಂಗಡಿಗೆ ಬಂದಿದ್ದರು. ಒಲಿಂಪಿಕ್ಸ್‌ಗೆ ಮುನ್ನ ಪ್ರತಿನಿತ್ಯ 24ಕ್ಕೂ ಅಧಿಕ ಮಂದಿ ಬರುತ್ತಿದ್ದರು~ ಎಂದು ಮಿಶೆಲ್ ನುಡಿದಿದ್ದಾರೆ.

`ಈ ವಾರ ಗ್ರಾಹಕರ ಸಂಖ್ಯೆಯಲ್ಲಿ ಶೇಕಡಾ 30ರಷ್ಟು ಕುಸಿತ ಕಂಡಿದೆ~ ಎಂದು ಖಾಲಿ ಹೊಡೆಯುತ್ತಿದ್ದ ತನ್ನ ಬಟ್ಟೆ ಅಂಗಡಿಯಲ್ಲಿ ಗ್ರಾಹಕರಿಗೆ ಎದುರು ನೋಡುತ್ತಾ ಕುಳಿತ್ತಿದ್ದ ಮ್ಯಾನೇಜರ್ ರಾಬ್ ಗ್ರೊಗನ್ ನಿರಾಶೆಯಿಂದ ಹೇಳುತ್ತಾರೆ.

ಒಲಿಂಪಿಕ್ಸ್‌ನಿಂದಾಗಿ ಇಂಗ್ಲೆಂಡ್‌ನ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸುಧಾರಿಸಲಿದೆ. ಪ್ರವಾಸೋದ್ಯಮದಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದು ಹೇಳಲಾಗುತಿತ್ತು. ಆದರೆ ಕ್ರೀಡಾ ಮೇಳದಿಂದಾಗಿ ತದ್ವಿರುದ್ಧ ಪರಿಣಾಮ ಬೀರಿದೆ.

ರೋಯಿಂಗ್ ಸ್ಪರ್ಧಿಗಳ ಪ್ರದರ್ಶನ ತೃಪ್ತಿ
ಲಂಡನ್ (ಪಿಟಿಐ): ಭಾರತದ ರೋಯಿಂಗ್ ಸ್ಪರ್ಧಿಗಳು ಒಲಿಂಪಿಕ್ಸ್‌ನಲ್ಲಿ ನಿರೀಕ್ಷೆಯನ್ನೂ ಮೀರಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಕೋಚ್ ಇಸ್ಮಾಯಿಲ್ ಬೇಗ್ ಸಂತಸ ವ್ಯಕ್ತಪಡಿಸಿದ್ದಾರೆ.
`ಸಿಂಗಲ್ಸ್ ಸ್ಕಲ್ಸ್‌ನಲ್ಲಿ 16ನೇ ಸ್ಥಾನ ಪಡೆದ ಸ್ವರಣ್ ಸಿಂಗ್ ಪ್ರದರ್ಶನವೂ ತೃಪ್ತಿಕರವಾಗಿತ್ತು.
 
ಈ ವಿಭಾಗದಲ್ಲಿ 15ರೊಳಗೆ ಸ್ಥಾನ ಪಡೆದರೆ, ಹೆಚ್ಚು ಖುಷಿಯಾಗುತ್ತಿತ್ತು. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತದ ಭಜರಂಗ್ ಸಿಂಗ್ 21ನೇ ಸ್ಥಾನ ಪಡೆದಿದ್ದರು. ಅದಕ್ಕೆ ಹೋಲಿಸಿದರೆ ಇದು ಉತ್ತಮ ಸಾಧನೆ~ ಎಂದು ಅವರು ನುಡಿದರು.

`ಮೊದಲ ಎರಡು ದಿನ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಎಲ್ಲರಿಗೂ ಕಷ್ಟವಾಯಿತು. ಡಬಲ್ಸ್ ಸ್ಕಲ್ಸ್‌ನಲ್ಲಿ ಮನ್‌ಜಿತ್ ಸಿಂಗ್ ಹಾಗೂ ಸಂದೀಪ್ ಕುಮಾರ್ 24 ಸ್ಪರ್ಧಿಗಳ ಮಧ್ಯೆ 19ನೇ ಸ್ಥಾನ ಗಳಿಸಿದರು. ಈ ಸಲದ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಪರ್ಧಿಗಳು ನೀಡಿದ ಪ್ರದರ್ಶನದಿಂದ ರೋಯಿಂಗ್‌ಗೆ ಭಾರತದಲ್ಲಿ ಉತ್ತಮ ಭವಿಷ್ಯವಿದೆ ಎಂಬುದು ಸಾಬೀತಾಗಿದೆ~ ಎಂದರು.

`ಬಿಲ್ಲುಗಾರರಿಗೆ ಕ್ಷಮೆಯೇ ಇಲ್ಲ~

ಲಂಡನ್ (ಐಎಎನ್‌ಎಸ್): ಒಲಿಂಪಿಕ್ಸ್‌ನಲ್ಲಿ ನೀರಸ ಪ್ರದರ್ಶನ ನೀಡಿ ನಿರೀಕ್ಷೆ ಹುಸಿಗೊಳಿಸಿರುವ ಭಾರತ ಬಿಲ್ಲುಗಾರಿಕೆ ತಂಡದವರ ಬಗ್ಗೆ ತರಬೇತುದಾರರಾದ ಲಿಂಬಾರಾಮ್ ಹಾಗೂ ರವಿಶಂಕರ್ ಅವರು ಅಸಮಾಧಾನಗೊಂಡಿದ್ದು, ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಖಾರವಾಗಿ ನುಡಿದಿದ್ದಾರೆ.
ಭಾರತಕ್ಕೆ ವಾಪಸ್ಸಾಗುವ ಮುನ್ನ ಕ್ರೀಡಾಗ್ರಾಮದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 `ಸಾಕಷ್ಟು ಕಠಿಣ ತರಬೇತಿ ನೀಡಿದ್ದೆವು. ಆರು ಸದಸ್ಯರ ತಂಡ ವೈಯಕ್ತಿಕ ಹಾಗೂ ತಂಡ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದೆ. ದೀಪಿಕಾ ಕುಮಾರಿ ವಿಶ್ವ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೂ ಕಳಪೆ ಪ್ರದರ್ಶನ ನೀಡಿದರು. ಎಲ್ಲಾ ಸೌಲಭ್ಯಗಳನ್ನು ನೀಡಿದರೂ ಆದ ಪ್ರಯೋಜನವೇನು~ ಎಂದು ಲಿಂಬಾ ಹಾಗೂ ರವಿ ಪ್ರಶ್ನಿಸಿದರು.

`ಬಿಲ್ಲುಗಾರಿಕೆ ತಂಡದ ಪ್ರದರ್ಶನದ ಬಗ್ಗೆ ಭಾರತ ಬಿಲ್ಲುಗಾರಿಕೆ ಸಂಸ್ಥೆ, ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಸರ್ಕಾರ ಬೇಸರಗೊಂಡಿದೆ. ಬಲಿಷ್ಠ ತಂಡವಿದ್ದ ಕಾರಣ ಕನಿಷ್ಠ ಒಂದು ಪದಕವಾದರೂ ಗೆಲ್ಲಬಹುದು ಎಂದು ನಿರೀಕ್ಷೆ ಮಾಡಿದ್ದೆವು. ದಿಢೀರನೆ ಪ್ರದರ್ಶನದಲ್ಲಿ ಕುಸಿತ ಕಂಡ ಬಗ್ಗೆ ಏನು ಹೇಳಬೇಕೆನ್ನುವುದು ಗೊತ್ತಾಗುತ್ತಿಲ್ಲ. ಲಂಡನ್‌ಗೆ ಬರುವ ಮುನ್ನ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆವು~ ಎಂದು ಲಿಂಬಾ ನುಡಿದರು.

`ನಮ್ಮ ಕ್ರೀಡಾಳುಗಳು ಸಾಕಷ್ಟು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿದ್ದ ಅನುಭವ ಹೊಂದಿದ್ದರು. ತರುಣ್‌ದೀಪ್ ರಾಯ್ ಹಾಗೂ ಬೊಂಬ್ಯಾಲ ದೇವಿ ಅವರು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಒಲಿಂಪಿಕ್ಸ್‌ಗೂ ಮುನ್ನ ದೀಪಿಕಾ ನೀಡಿದ ಪ್ರದರ್ಶನ ನೋಡಿ ಪದಕ ಗೆಲ್ಲುತ್ತಾರೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಇದರಿಂದ ಆಕೆ ಒತ್ತಡಕ್ಕೆ ಒಳಗಾದಳು. ಪದಕದ ನಿರೀಕ್ಷೆಯೂ ಹುಸಿಯಾಯಿತು~ ಎಂದು ರವಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.