ADVERTISEMENT

ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನ ಗೆದ್ದ ಜಮೈಕದ ಉಸೇನ್ ಬೋಲ್ಟ್‌

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2012, 19:30 IST
Last Updated 6 ಆಗಸ್ಟ್ 2012, 19:30 IST

ಲಂಡನ್: ವೇಗದ ಓಟದಲ್ಲಿ ತನಗೆ ಸರಿಸಾಟಿಯಾಗಿ ನಿಲ್ಲುವವರು ಯಾರೂ ಇಲ್ಲ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟ ಜಮೈಕದ ಉಸೇನ್ ಬೋಲ್ಟ್ ಲಂಡನ್ ಒಲಿಂಪಿಕ್ಸ್‌ನ ಪುರುಷರ 100 ಮೀ. ಓಟದ ಚಿನ್ನದ ಪದಕ ಗೆದ್ದುಕೊಂಡರು.

ಒಲಿಂಪಿಕ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಸಾಕಷ್ಟು ಕುತೂಹಲ ಕೆರಳಿಸಿದ ಸ್ಪರ್ಧೆಯಲ್ಲಿ ಬೋಲ್ಟ್ 9.63 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಈ ಹಾದಿಯಲ್ಲಿ ಒಲಿಂಪಿಕ್ ದಾಖಲೆಯನ್ನೂ ಮಾಡಿದರು. ನಾಲ್ಕು ವರ್ಷಗಳ ಹಿಂದೆ ಬೀಜಿಂಗ್‌ನಲ್ಲಿ ಸ್ಥಾಪಿಸಿದ್ದ ದಾಖಲೆಯನ್ನು (9.69 ಸೆ.) ಉತ್ತಮಪಡಿಸಿಕೊಂಡರು. ಆದರೆ ತಮ್ಮದೇ ಹೆಸರಿನಲ್ಲಿರುವ ವಿಶ್ವದಾಖಲೆ (9.58 ಸೆ.) ಮುರಿಯುವ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡರು.

ಬೋಲ್ಟ್‌ಗೆ ಪ್ರಬಲ ಪೈಪೋಟಿ ನೀಡುವರೆಂದು ಭಾವಿಸಿದ್ದ ಜಮೈಕದವರೇ ಆದ ಯೋಹಾನ್ ಬ್ಲೇಕ್ (9.75) ಎರಡನೇ ಸ್ಥಾನ ಪಡೆದರೆ, ಅಮೆರಿಕದ ಜಸ್ಟಿನ್ ಗ್ಯಾಟ್ಲಿನ್ (9.79) ಕಂಚು ಪಡೆದರು. 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದ ಗ್ಯಾಟ್ಲಿನ್‌ಗೆ ಇದು ಭರ್ಜರಿ `ಪುನರಾಗಮನ~ ಎನಿಸಿತು. ಏಕೆಂದರೆ 2006 ರಲ್ಲಿ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದು ನಾಲ್ಕು ವರ್ಷ ನಿಷೇಧ ಶಿಕ್ಷೆ ಅನುಭವಿಸಿದ್ದರು.

2007ರ ವಿಶ್ವಚಾಂಪಿಯನ್ ಅಮೆರಿಕದ ಟೈಸನ್ ಗೇ (9.80 ಸೆ.) ನಾಲ್ಕನೇ ಸ್ಥಾನ ಪಡೆದರೆ, ಅಮೆರಿಕದ ಇನ್ನೊಬ್ಬ ಸ್ಪರ್ಧಿ ರ‌್ಯಾನ್ ಬೈಲಿ (9.88) ಬಳಿಕದ ಸ್ಥಾನದಲ್ಲಿ ಕಾಣಿಸಿಕೊಂಡರು. ಜಮೈಕದ ಅಸಫಾ ಪೊವೆಲ್ ಕೊನೆಯ ಕೆಲವು ಮೀಟರ್‌ಗಳಿರುವಾಗ ಸ್ನಾಯು ಸೆಳೆತದಿಂದ ಬಳಲಿದರಲ್ಲದೆ, 11.99 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು.

ಬೀಜಿಂಗ್‌ನಲ್ಲಿ ತೋರಿದ್ದ ಸಾಧನೆಯನ್ನು ಬೋಲ್ಟ್ ಪುನರಾವರ್ತಿಸುವರೇ ಎಂಬ ಅನುಮಾನ ಒಲಿಂಪಿಕ್‌ಗೆ ಮುನ್ನ ಹಲವರನ್ನು ಕಾಡಿತ್ತು. ಆದರೆ ಅಂತಹ ಅನುಮಾನವನ್ನು ಬೋಲ್ಟ್ ಕೇವಲ 9.63 ಸೆಕೆಂಡ್‌ಗಳಲ್ಲಿ ದೂರ ಮಾಡಿದರು. ಬೋಲ್ಟ್ ಗೆಲುವು ಪುಟ್ಟ ರಾಷ್ಟ್ರ ಜಮೈಕದಲ್ಲಿ ಸಂಭ್ರಮದ ಅಲೆ ಎಬ್ಬಿಸಿದೆ.

ಇದೀಗ ಬೀಜಿಂಗ್‌ನಂತೆ ಲಂಡನ್‌ನಲ್ಲೂ ಮೂರು ಚಿನ್ನದ ಪದಕ ಗೆಲ್ಲುವ ಅವಕಾಶ ಬೋಲ್ಟ್‌ಗೆ ದೊರೆತಿದೆ. ಗುರುವಾರ ನಡೆಯಲಿರುವ 200 ಮೀ. ಓಟದಲ್ಲೂ ಚಿನ್ನ ಗೆಲ್ಲುವ ಫೇವರಿಟ್ ಎನಿಸಿದ್ದಾರೆ. ಅದೇ ರೀತಿ 4ಷ100 ಮೀ. ರಿಲೇನಲ್ಲಿ ಜಮೈಕ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಫೈನಲ್‌ಗೆ ಸಾಕಷ್ಟು ಮುನ್ನವೇ ಒಲಿಂಪಿಕ್ ಕ್ರೀಡಾಂಗಣ 80 ಸಾವಿರಕ್ಕೂ ಅಧಿಕ ಪ್ರೇಕ್ಷಕರಿಂದ ಭರ್ತಿಯಾಗಿತ್ತು. ಎಂಟು ಘಟಾನುಘಟಿಗಳು ಫೈನಲ್‌ಗೆ ಸಜ್ಜಾಗುತ್ತಿದ್ದಂತೆಯೇ ಪ್ರೇಕ್ಷಕರು ಉಸಿರು ಬಿಗಿಹಿಡಿದು ನಿಂತರು. ಎಲ್ಲರ ಗಮನವೂ ಏಳನೇ ಲೇನ್‌ನಲ್ಲಿ ಓಡಲಿರುವ ಬೋಲ್ಟ್ ಮೇಲೆ ಇತ್ತು. ಬ್ಲೇಕ್ ಮತ್ತು ಗ್ಯಾಟ್ಲಿನ್ ಕ್ರಮವಾಗಿ ಐದು ಹಾಗೂ ಆರನೇ ಲೇನ್‌ನಲ್ಲಿ ಸಜ್ಜಾದರು.

`ಸ್ಟಾರ್ಟರ್  ಪಿಸ್ತೂಲ್~ನ ಶಬ್ದ ಹೊರಡುತ್ತಿದ್ದಂತೆಯೇ ಎಂಟೂ ಸ್ಪರ್ಧಿಗಳು ರಾಕೆಟ್ ವೇಗದಲ್ಲಿ ಮುನ್ನುಗ್ಗಿದರು. ಮೊದಲ 50 ಮೀ. ವರೆಗೆ ಸಮಬಲದ ಪೈಪೋಟಿ ಕಂಡುಬಂತು. ಗ್ಯಾಟ್ಲಿನ್ ಕೂದಲೆಳೆಯ ಅಂತರದಲ್ಲಿ ಮುಂದಿದ್ದರು. ಆದರೆ ಚಿರತೆಯ ವೇಗದಲ್ಲಿ ಮುನ್ನುಗ್ಗಿದ ಬೋಲ್ಟ್ ಕೊನೆಯ 30 ಮೀ.ಗಳಿರುವಂತೆಯೇ ಸ್ಪಷ್ಟ ಮುನ್ನಡೆ ಪಡೆದರು.

ಮಿಂಚಿನ ವೇಗದಲ್ಲಿ ಗುರಿಮುಟ್ಟಿದ ಅವರು ಟ್ರ್ಯಾಕ್‌ನಲ್ಲಿ ಒಂದಷ್ಟು ದೂರ ಓಡಿ ಗೆಲುವಿನ ಸಂಭ್ರಮ ಆಚರಿಸಿದರು. ಗ್ಯಾಲರಿಯಿಂದ ಉಸೇನ್.. ಉಸೇನ್.. ಎಂಬ ಕೂಗು ಅಲೆ ಅಲೆಯಾಗಿ ತೇಲಿಬಂತು. ತಮ್ಮ `ಟ್ರೇಡ್ ಮಾರ್ಕ್~ ಶೈಲಿಯಲ್ಲಿ ಅವರು ಪ್ರೇಕ್ಷಕರ ಅಭಿನಂದನೆಗೆ ಕೃತಜ್ಞತೆ ಸಲ್ಲಿಸಿದರು.

ಈ ಸಾಧನೆಯ ಮೂಲಕ ಬೋಲ್ಟ್ `ಸ್ಪ್ರಿಂಟ್ ದಂತಕತೆ~ ಕಾರ್ಲ್ ಲೂಯಿಸ್ ಸಾಧನೆಯನ್ನು ಸರಿಗಟ್ಟಿದರು. ಲೂಯಿಸ್ ಕೂಡಾ 100 ಮೀ. ಓಟದಲ್ಲಿ ಸತತ ಎರಡು ಒಲಿಂಪಿಕ್ ಚಿನ್ನ ಗೆದ್ದಿದ್ದರು. 1988ರ ಕೂಟದಲ್ಲಿ ಅವರು ಎರಡನೇ ಸ್ಥಾನ ಪಡೆದಿದ್ದರು. ಮೊದಲ ಸ್ಥಾನ ಪಡೆದಿದ್ದ ಬೆನ್ ಜಾನ್ಸನ್ ಉದ್ದೀನ ಮದ್ದು ಸೇವಿಸಿದ್ದು ಸಾಬೀತಾದ ಕಾರಣ ಬಳಿಕ ಚಿನ್ನ ಲೂಯಿಸ್‌ಗೆ ಲಭಿಸಿತ್ತು.

ಪೂರ್ಣ ಫಿಟ್ ಆಗಿದ್ದರೆ ಜಮೈಕದ `ಸ್ಪ್ರಿಂಟ್ ಕಿಂಗ್~ಗೆ ಸರಿಸಾಟಿಯಾಗಿ ನಿಲ್ಲುವ ತಾಕತ್ತು ಯಾರಿಗೂ ಇಲ್ಲ ಎಂಬುದು ಲಂಡನ್‌ನ ಒಲಿಂಪಿಕ್ ಕ್ರೀಡಾಂಗಣದಲ್ಲಿ  ಮತ್ತೊಮ್ಮೆ ಸಾಬೀತಾಗಿದೆ.  ಈ ಓಟ ಒಲಿಂಪಿಕ್ ಇತಿಹಾಸದ `ಅತಿವೇಗದ ಫೈನಲ್~ ಆಗಿತ್ತು.

ಏಕೆಂದರೆ ಕಣದಲ್ಲಿದ್ದ ಎಂಟು ಅಥ್ಲೀಟ್‌ಗಳಲ್ಲಿ ಏಳು ಮಂದಿಯೂ 10 ಸೆಕೆಂಡ್‌ಗಳ ಒಳಗೆ ಸ್ಪರ್ಧೆ ಕೊನೆಗೊಳಿಸಿದರು. ಸ್ನಾಯು ಸೆಳೆತಕ್ಕೆ ಒಳಗಾಗದಿದ್ದಲ್ಲಿ ಪೊವೆಲ್ ಕೂಡಾ 10 ಸೆಕೆಂಡ್‌ಗಳ ಒಳಗೆ ಗುರಿ ತಲುಪುವ ಸಾಧ್ಯತೆಯಿತ್ತು.

ನಾನೇ ನಂಬರ್ ಒನ್...!
ಲಂಡನ್: `ನನ್ನ ಸಾಮರ್ಥ್ಯದ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಈ ಬಾರಿ ಚಿನ್ನ ಗೆಲ್ಲಲು ಸಾಧ್ಯವಿಲ್ಲ ಎಂದಿದ್ದರು. ಇಂತಹ ಮಾತುಗಳು ನನಗೆ ಹಿತವೆನಿಸಲಿಲ್ಲ. ಇದೀಗ ಅತಿಯಾದ ಸಂತಸವಾಗಿದೆ. ನಾನು ಈಗಲೂ ನಂ.1. ನಾನೇ ಶ್ರೇಷ್ಠ~ ಎಂದು ಸ್ಪರ್ಧೆಯ ಬಳಿಕ ಬೋಲ್ಟ್ ಪ್ರತಿಕ್ರಿಯಿಸಿದರು. `ಆರಂಭದಲ್ಲಿ ಒಂದಷ್ಟು ಆತಂಕಕ್ಕೆ ಒಳಗಾಗಿದ್ದೆ. ಆದರೆ ಇಲ್ಲಿ ಸೇರಿದ್ದ ಜನರ ಅದ್ಭುತ ಬೆಂಬಲ ನೋಡಿದಾಗ ಒತ್ತಡ ದೂರವಾಯಿತು. ಈ ರೀತಿಯ ಬೆಂಬಲ ನನಗೆ ಉತ್ತೇಜನ ನೀಡುತ್ತದೆ~ ಎಂದರು.

ಓಟಕ್ಕೆ ಅಡ್ಡಿಪಡಿಸಲು ವಿಫಲ ಯತ್ನ: ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ವ್ಯಕ್ತಿಯೊಬ್ಬ ಭಾನುವಾರ ನಡೆದ ಪುರುಷರ 100 ಮೀ. ಓಟಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದ ಘಟನೆ ನಡೆಯಿತು. ಬೋಲ್ಟ್ ಒಳಗೊಂಡಂತೆ ಎಂಟು ಅಥ್ಲೀಟ್‌ಗಳು ಓಡಲು ಸಜ್ಜಾಗಿದ್ದ ಸಂದರ್ಭ ಆತ ಟ್ರ್ಯಾಕ್‌ನತ್ತ ಬಾಟಲಿ ಎಸೆದಿದ್ದಾನೆ.

ಕೂಡಲೇ ಪೊಲೀಸರು ಆತನನ್ನು ಬಂಧಿಸಿ ಕ್ರೀಡಾಂಗಣದಿಂದ ಹೊರಕ್ಕೆ ಕರೆದೊಯ್ದರು. ಬಾಟಲಿ ಎಸೆಯುವ ಮುನ್ನ ಆತ ಬೋಲ್ಟ್ ಬಗ್ಗೆ ನಿಂದನೆಯ ಮಾತುಗಳನ್ನಾಡಿದ್ದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ನುಡಿದಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.