ADVERTISEMENT

ಒಲಿಂಪಿಯನ್‌ ಅಥ್ಲೀಟ್‌ ಬೆಟ್ಟಿ ನಿಧನ

ಏಜೆನ್ಸೀಸ್
Published 7 ಆಗಸ್ಟ್ 2017, 19:30 IST
Last Updated 7 ಆಗಸ್ಟ್ 2017, 19:30 IST
ಬೆಟ್ಟಿ ಕಟ್‌ಬರ್ಟ್‌
ಬೆಟ್ಟಿ ಕಟ್‌ಬರ್ಟ್‌   

ಸಿಡ್ನಿ: ಆಸ್ಟ್ರೇಲಿಯಾದ ಒಲಿಂಪಿಯನ್‌ ಅಥ್ಲೀಟ್‌ ಎಲಿಜಬೆತ್‌ ಬೆಟ್ಟಿ ಕತ್ಬರ್ಟ್‌ (79) ಅವರು ಸೋಮವಾರ ನಿಧನರಾದರು. ಬೆಟ್ಟಿ ಅವರು ಒಲಿಂಪಿಕ್ಸ್‌ನಲ್ಲಿ 100, 200 ಮತ್ತು 400 ಮೀಟರ್ಸ್‌ ಓಟದ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದರು.

‘ಗೋಲ್ಡನ್‌ ಗರ್ಲ್‌’ ಎಂದೇ ಪ್ರಸಿದ್ಧರಾಗಿದ್ದ ಎಲಿಜಬೆತ್‌, 18ನೇ ವಯಸ್ಸಿನಲ್ಲೇ ಒಲಿಂಪಿಕ್ಸ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಜಯಿಸಿದ್ದರು.  1956ರ ಮೆಲ್ಬರ್ನ್‌ ಒಲಿಂಪಿಕ್ಸ್‌ನ 100 ಮತ್ತು 200 ಮೀಟರ್ಸ್‌ ಓಟ ಹಾಗೂ 4X100 ಮೀಟರ್ಸ್‌ ರಿಲೇ ಸ್ಪರ್ಧೆಗಳಲ್ಲಿ ಅವರು ಈ ಸಾಧನೆ ಮಾಡಿದ್ದರು.

1964ರಲ್ಲಿ ಟೋಕಿಯೊದಲ್ಲಿ ನಡೆದಿದ್ದ ಕೂಟದ 400 ಮೀಟರ್ಸ್‌ ಓಟದಲ್ಲಿ ಆಸ್ಟ್ರೇಲಿಯಾದ ಸವಾಲು ಎತ್ತಿಹಿಡಿದಿದ್ದ ಬೆಟ್ಟಿ ಅವರು ಚಿನ್ನಕ್ಕೆ ಕೊರಳೊಡ್ಡಿದ್ದರು.

ADVERTISEMENT

ತಮ್ಮ ವೃತ್ತಿಬದುಕಿನಲ್ಲಿ ಒಂಬತ್ತು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದ ಗೌರವಕ್ಕೂ ಅವರು ಭಾಜನರಾಗಿದ್ದಾರೆ. ಅಥ್ಲೆಟಿಕ್ಸ್‌ ಆಸ್ಟ್ರೇಲಿಯಾ ನೀಡುವ ‘ಹಾಲ್‌ ಆಫ್‌ ಫೇಮ್‌’ ಗೌರವಕ್ಕೆ ಪಾತ್ರರಾದ ಮೊದಲ ಅಥ್ಲೀಟ್‌  ಬೆಟ್ಟಿ. 2012ರಲ್ಲಿ ಬೆಟ್ಟಿ ಅವರಿಗೆ ಐಎಎಎಫ್‌ ‘ಹಾಲ್‌ ಆಫ್‌ ಫೇಮ್‌’ ಗೌರವವೂ ಸಂದಿತ್ತು.

‘ಬೆಟ್ಟಿ ಅವರು ಚಾಂಪಿಯನ್‌ ಓಟಗಾರ್ತಿ. ಅವರ ನಿಧನದ ಸುದ್ದಿ ತಿಳಿದು ತುಂಬಾ ನೋವಾಗಿದೆ. ಅವರ ಅಗಲಿಕೆಯಿಂದ ಅಥ್ಲೆಟಿಕ್ಸ್‌ ಲೋಕ ಬಡವಾಗಿದೆ’ ಎಂದು ಆಸ್ಟ್ರೇಲಿಯಾ ಒಲಿಂಪಿಕ್‌ ಸಮಿತಿಯ ಅಧ್ಯಕ್ಷ ಜಾನ್‌ ಕೊವಾಟೆಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.