ADVERTISEMENT

ಕನಸು ನನಸಾದ ಖುಷಿಯಲ್ಲಿ ರಸೂಲ್

ಕಾಶ್ಮೀರದ ಕ್ರಿಕೆಟಿಗನ ಸಾಧನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2013, 19:59 IST
Last Updated 8 ಜನವರಿ 2013, 19:59 IST
ಅಭ್ಯಾಸ ನಿರತ ಫರ್ವೀಜ್ ರಸೂಲ್ 	-ಪಿಟಿಐ ಚಿತ್ರ
ಅಭ್ಯಾಸ ನಿರತ ಫರ್ವೀಜ್ ರಸೂಲ್ -ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ಕಾಶ್ಮೀರವೆಂದರೆ ಮನಮೋಹಕ ಗಿರಿಕಂದರಗಳ ನಾಡು. ಆದರೆ ಅಲ್ಲಿ ಯಾವತ್ತೂ ಗುಂಡಿನ ಸದ್ದು, ಆತಂಕ ಮತ್ತು ಅಶಾಂತಿಯೇ. ಅವುಗಳ ನಡುವೆಯೇ  ಬೆಳೆದವನೊಬ್ಬ ಕ್ರಿಕೆಟ್ ಲೋಕದ ಎತ್ತರಕ್ಕೇರುತ್ತಿರುವುದು ಕಡಿಮೆ ಸಾಧನೆ ಏನಲ್ಲ. ತಾವು ಕಂಡಿದ್ದ ಕನಸನ್ನು ನನಸು ಮಾಡಿಕೊಳ್ಳಲು ಅವರಿಗೆ ಗುಂಡಿನ ಸದ್ದು ಯಾವತ್ತೂ ಅಡ್ಡಿಯಾಗಲಿಲ್ಲ. ಭಾರತ `ಎ' ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ ಜಮ್ಮು ಕಾಶ್ಮೀರದ ಆಲ್‌ರೌಂಡರ್ ಫರ್ವೀಜ್ ರಸೂಲ್ ಅವರ ಕಥೆ ಇದು.

ಇಂಗ್ಲೆಂಡ್ ವಿರುದ್ಧ ನಡೆದ ಅಭ್ಯಾಸ ಕ್ರಿಕೆಟ್ ಪಂದ್ಯಕ್ಕೆ ಅವರು ಸ್ಥಾನ ಗಿಟ್ಟಿಸಿದ್ದರು. ರಣಜಿ ತಂಡದಲ್ಲಿ ತೋರಿದ ಉತ್ತಮ ಪ್ರದರ್ಶನವೇ ಇದಕ್ಕೆ ಕಾರಣ. ಅವರು ಈ ಋತುವಿನಲ್ಲಿ 594 ರನ್ ಹಾಗೂ 33 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ `ಎ' ತಂಡದಲ್ಲಿ ಸ್ಥಾನ ಪಡೆದ ಕಾಶ್ಮೀರದ ಮೊದಲ ಆಟಗಾರ ಎನಿಸಿದ್ದಾರೆ.

`ಕ್ರಿಕೆಟ್ ಆಡಬೇಕೆಂಬ ನನ್ನ ಕನಸಿಗೆ ಈ ಹಿಂಸೆ ಯಾವತ್ತೂ ಅಡ್ಡಿಯಾಗಿಲ್ಲ. ಆ ಘಟನೆಗಳೇ ನನಗೆ ಸರಿಯಾಗಿ ನೆನಪಿಲ್ಲ. ಆದರೆ ನಮಗೆ ಸರಿಯಾದ ಸೌಲಭ್ಯ ಇಲ್ಲ. ಕಾಶ್ಮೀರದಲ್ಲಿ ಕೇವಲ ಎರಡು ಟರ್ಫ್ ಪಿಚ್‌ಗಳಿವೆ' ಎಂದು ಅನಂತನಾಗ್ ಜಿಲ್ಲೆಯ ರಸೂಲ್ ಹೇಳಿದ್ದಾರೆ.

ಕಿಟ್‌ನಲ್ಲಿ ಸ್ಫೋಟಕ ವಸ್ತು ಹೊಂದಿದ್ದಾರೆ ಎಂಬ ಆರೋಪದ ಮೇಲೆ ರಸೂಲ್ ಅವರನ್ನು 2009ರಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪೊಲೀಸರು ಬಂಧಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಆದರೆ ಆಮೇಲೆ ಅವರನ್ನು ಬಿಡುಗಡೆ ಮಾಡಿದ್ದರು. `ಅದೊಂದು ಕೆಟ್ಟ ಘಟನೆ. ಆದರೆ ಆ ಘಟನೆಯನ್ನು ನಾನು ಮರೆತಿದ್ದೇನೆ. ನಾನು ಕ್ರಿಕೆಟಿಗ. ಕ್ರಿಕೆಟ್ ಆಡುವುದಷ್ಟೇ ನನ್ನ ಕೆಲಸ' ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.