ADVERTISEMENT

ಕನಸು ನನಸಾದ ಸಂಭ್ರಮದಲ್ಲಿ ಸ್ಯಾಲಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2012, 19:30 IST
Last Updated 8 ಆಗಸ್ಟ್ 2012, 19:30 IST
ಕನಸು ನನಸಾದ ಸಂಭ್ರಮದಲ್ಲಿ ಸ್ಯಾಲಿ
ಕನಸು ನನಸಾದ ಸಂಭ್ರಮದಲ್ಲಿ ಸ್ಯಾಲಿ   

ಲಂಡನ್: ಹನ್ನೆರಡು ವರ್ಷಗಳ ಹಿಂದೆ ಸಿಡ್ನಿಯಲ್ಲಿ ಮೊಳಕೆಯೊಡೆದಿದ್ದ ಕನಸೊಂದು ಮಂಗಳವಾರ ರಾತ್ರಿ ಲಂಡನ್‌ನ ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ ನನಸಾಯಿತು. ಸ್ಯಾಲಿ ಪಿಯರ್ಸನ್ ಎಂಬ ಆಸ್ಟ್ರೇಲಿಯದ ಅಥ್ಲೀಟ್ ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಚಿನ್ನ ಜಯಿಸಿದ್ದು ಇದಕ್ಕೆ ಕಾರಣ.

ಒಲಿಂಪಿಕ್ಸ್‌ನಲ್ಲಿ ಬಂಗಾರ ಜಯಿಸಬೇಕೆಂಬ ಕನಸನ್ನು ಸ್ಯಾಲಿ ದಶಕದ ಹಿಂದೆಯೇ ಕಂಡಿದ್ದರು. ಅವರ ಕನಸು ಮೊಳಕೆಯೊಡೆದದ್ದು 2000ದ ಸಿಡ್ನಿ ಒಲಿಂಪಿಕ್ಸ್ ಸಂದರ್ಭ.

ಅಂದು ಸ್ಯಾಲಿ 13ರ ಹರೆಯದ ಹುಡುಗಿ. ಗ್ಯಾಲರಿಯಲ್ಲಿ ಕುಳಿತು ಮಹಿಳೆಯರ 400 ಮೀ. ಓಟದ ಸ್ಪರ್ಧೆಯಲ್ಲಿ ವೀಕ್ಷಿಸುತ್ತಿದ್ದರು.

ADVERTISEMENT

ತವರು ಪ್ರೇಕ್ಷಕರ ಬೆಂಬಲದೊಂದಿಗೆ ಓಡಿದ್ದ ಕ್ಯಾಥಿ ಫ್ರೀಮನ್ ಚಿನ್ನ ಜಯಿಸಿದ್ದರು. ಆ ಕ್ಷಣದಲ್ಲಿ ಸ್ಯಾಲಿ ಒಂದು ತೀರ್ಮಾನ ಕೈಗೊಂಡಿದ್ದರು. `ಮುಂದೊಂದು ದಿನ ನನಗೂ ಒಲಿಂಪಿಕ್ಸ್ ಚಿನ್ನ ಗೆಲ್ಲಬೇಕು~ ಎಂಬ ದೃಢ ನಿರ್ಧಾರ ಅದಾಗಿತ್ತು.

ಸಿಡ್ನಿ ಒಲಿಂಪಿಕ್ಸ್ ಕಳೆದು 12 ವರ್ಷಗಳ ಬಳಿಕ ಅವರ ಕನಸು ಈಡೇರಿತು. `ಕ್ಯಾಥಿ ಫ್ರೀಮನ್ ಅಂದು 400 ಮೀ. ಓಟದಲ್ಲಿ ಚಿನ್ನ ಗೆದ್ದ ಕ್ಷಣ ಈಗಲೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ. ನನಗೂ ಚಿನ್ನ ಗೆಲ್ಲಬೇಕೆಂಬ ಬಯಕೆ ಮೂಡಿತ್ತು. ಅದಕ್ಕಾಗಿ ನಾನು ಏನು ಮಾಡಬೇಕು? ಯಾವ ರೀತಿ ಅಭ್ಯಾಸ ನಡೆಸಬೇಕು? ಮುಂತಾದ ಪ್ರಶ್ನೆಗಳು ಮನದಲ್ಲಿ ಸುಳಿದಿದ್ದವು~ ಎಂದು ಚಿನ್ನದ ಪದಕ ಪ್ರದರ್ಶಿಸುತ್ತಾ ಸ್ಯಾಲಿ ನುಡಿದರು.

`ಒಲಿಂಪಿಕ್‌ನಲ್ಲಿ ಚಿನ್ನ ಗೆಲ್ಲುವುದು ಸುಲಭವಲ್ಲ ಎಂಬುದು ನನಗೆ ತಿಳಿದಿತ್ತು. ಆದ್ದರಿಂದ ಈ ಪದಕ ನನಗೆ ಎಲ್ಲವೂ ಆಗಿದೆ~ ಎಂದರು.

`ಬೀಜಿಂಗ್‌ನಲ್ಲಿ ಬೆಳ್ಳಿ ಜಯಿಸಿದಾಗ ನನಗೆ ಹೆಚ್ಚಿನ ಆತ್ಮವಿಶ್ವಾಸ ಬಂತು. ವಿಶ್ವದ ಶ್ರೇಷ್ಠ ಓಟಗಾರ್ತಿಯಾಗುವ ತಾಕತ್ತು ನನ್ನಲ್ಲಿದೆ ಎಂಬುದು ತಿಳಿಯಿತು. ಅಂತಹ ನಂಬಿಕೆ ಹಾಗೂ ಆತ್ಮವಿಶ್ವಾಸದಿಂದಾಗಿ ಇಂದು ಚಿನ್ನ ದೊರೆತಿದೆ~ ಎಂದು ಹೇಳಿದರು.

ಕಳೆದ ವರ್ಷ ಡೇಗುವಿನಲ್ಲಿ ನಡೆದಿದ್ದ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದ್ದ ಸ್ಯಾಲಿ ಆ ಬಳಿಕ ಲಂಡನ್ ಒಲಿಂಪಿಕ್ಸ್‌ನ್ನು ಗುರಿಯಾಗಿಸಿ ಅಭ್ಯಾಸ ನಡೆಸಿದ್ದರು. ಅವರ ಕಠಿಣ ಶ್ರಮಕ್ಕೆ ತಕ್ಕ ಫಲ ದೊರೆತಿದೆ. ಸ್ವರ್ಣ ಸಂಭ್ರಮವೂ ಅವರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.