ADVERTISEMENT

ಕಬಡ್ಡಿ: ಕ್ವಾರ್ಟರ್ ಫೈನಲ್‌ಗೆ ಗುರುಕುಲ ತಂಡ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 19:30 IST
Last Updated 7 ಮಾರ್ಚ್ 2018, 19:30 IST

ಜಮಖಂಡಿ: ಮುಂಬೈನ ಮಹೀಂದ್ರಾ ಅಂಡ್ ಮಹೀಂದ್ರಾ  ಮತ್ತು ಸೋನಿಪತ್‌ನ ಗುರುಕುಲ ತಂಡ  ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಆಹ್ವಾನಿತ ‘ಎ’ ಗ್ರೇಡ್‌ ಪುರುಷ ಮತ್ತು ಮಹಿಳೆಯರ ಕಬಡ್ಡಿ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿವೆ.

ಪುರುಷರ ವಿಭಾಗದಲ್ಲಿ ಮಹೀಂದ್ರಾ ತಂಡ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ 33–31 ಪಾಯಿಂಟ್ಸ್‌ನಿಂದ ಎಎಸ್‌ಸಿ ಬೆಂಗಳೂರು  ಎದುರು ರೋಚಕ ಗೆಲುವು ಪಡೆಯಿತು.

ಮಹಿಳೆಯರ ವಿಭಾಗದಲ್ಲಿ ಗುರುಕುಲ ತಂಡ ಲೀಗ್‌ ಹಣಾಹಣಿಯಲ್ಲಿ ತುಮಕೂರು ಜಿಲ್ಲಾ ತಂಡ, ಬೆಳಗಾವಿಯ ಅಬಾಜಿ ಸ್ಪೋರ್ಟ್ಸ್‌ ಕ್ಲಬ್‌ ಹಾಗೂ ಬೆಂಗಳೂರಿನ ಕೇಶವ ತಂಡಗಳನ್ನು ಮಣಿಸಿ, ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಗುರುಕುಲ ತಂಡ ಶಿವಾ ಓಂ ಪ್ರತಿಷ್ಠಾನದ ವಿರುದ್ಧ ಇನ್ನೊಂದು ಲೀಗ್‌ ಪಂದ್ಯ ಆಡಲಿದೆ.

ADVERTISEMENT

ಪುರುಷರ ವಿಭಾಗದ ಇನ್ನಷ್ಟು ಲೀಗ್‌ ಪಂದ್ಯಗಳಲ್ಲಿ ಬೆಂಗಳೂರಿನ ರೈಲ್ವೇಸ್‌ ತಂಡ 37–08ರಲ್ಲಿ ಬಿಸಿಆರ್‌ ಅಕಾಡೆಮಿ ವಿರುದ್ಧ, ಡಿಡಿಎಎಸ್‌ ದೆಹಲಿ ತಂಡ 32–29ರಲ್ಲಿ ಬ್ಯಾಂಕ್‌ ಆಫ್‌ ಇಂಡಿಯಾ ವಿರುದ್ಧ, ದೆಹಲಿಯ ಜೆ.ಡಿ ಆಕಾಡೆಮಿ 43–12ರಲ್ಲಿ ಶಿವಮೊಗ್ಗ ಜಿಲ್ಲಾ ತಂಡದ ವಿರುದ್ಧ ಗೆಲುವು ಪಡೆದವು.

ಮಹೀಂದ್ರಾ ತಂಡ 23–3ರಲ್ಲಿ ಧಾರವಾಡದ ಭಾರತ ಕ್ರೀಡಾ ಪ್ರಾಧಿಕಾರದ ಮೇಲೂ,  ಮಹಾರಾಷ್ಟ್ರ ಪೊಲೀಸ್‌ ತಂಡ 29–2ರಲ್ಲಿ ಶಿವಮೊಗ್ಗ ವಿರುದ್ಧವೂ, ಎಎಸ್‌ಸಿ ಬೆಂಗಳೂರು ತಂಡ 23–20ರಲ್ಲಿ ಬೆಳಗಾವಿ ಜಿಲ್ಲಾ ತಂಡದ ಮೇಲೂ, ಬ್ಯಾಂಕ್‌ ಆಫ್‌ ಇಂಡಿಯಾ ತಂಡ 30–16ರಲ್ಲಿ ಬಿಸಿಆರ್‌ ಅಕಾಡೆಮಿ ಧಾರವಾಡ ವಿರುದ್ಧ ಗೆಲುವು ಪಡೆದವು.

ಮಹಿಳೆಯರ ವಿಭಾಗದಲ್ಲಿ ಗುರುಕುಲ ಸೋನಿಪತ್ ತಂಡ 38–4ರಲ್ಲಿ ತುಮಕೂರು ಜಿಲ್ಲಾ ತಂಡದ ವಿರುದ್ಧ, ಜಾಗೃತಿ ಪ್ರತಿಷ್ಠಾನ ತಂಡ 39–28ರಲ್ಲಿ ಚಿಕ್ಕಮಗಳೂರು ಜಿಲ್ಲಾ ತಂಡದ ಮೇಲೂ ಜಯ ಪಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.