ADVERTISEMENT

ಕಬಡ್ಡಿ: ವಾರಿಯರ್ಸ್‌, ಪೈರೆಟ್ಸ್‌ಗೆ ಫೈನಲ್ ಕನಸು

ಪಿಟಿಐ
Published 25 ಅಕ್ಟೋಬರ್ 2017, 19:46 IST
Last Updated 25 ಅಕ್ಟೋಬರ್ 2017, 19:46 IST

ಚೆನ್ನೈ: ಟೂರ್ನಿಯುದ್ದಕ್ಕೂ ಏಳು–ಬೀಳುಗಳನ್ನು ಕಂಡು ನಿರ್ಣಾಯಕ ಹಂತದಲ್ಲಿ ಬಂದು ನಿಂತಿರುವ ಬೆಂಗಾಲ್‌ ವಾರಿಯರ್ಸ್ ಮತ್ತು ಪಟ್ನಾ ಪೈರೆಟ್ಸ್ ತಂಡದವರು ಫೈನಲ್ ಕನಸಿನಲ್ಲಿದ್ದಾರೆ. ಪ್ರೊ ಕಬಡ್ಡಿ ಲೀಗ್ ಐದನೇ ಆವೃತ್ತಿಯ ಫೈನಲ್‌ನಲ್ಲಿ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡವನ್ನು ಎದುರಿಸುವ ತಂಡ ಯಾವುದು ಎಂಬ ಕುತೂಹಲಕ್ಕೆ ಗುರುವಾರ ಇಲ್ಲಿ ತೆರೆ ಬೀಳಲಿದೆ.

ರಾತ್ರಿ ಎಂಟು ಗಂಟೆಗೆ ಇಲ್ಲಿನ ಜವಾಹರಲಾಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ವಾರಿಯರ್ಸ್‌ ಮತ್ತು ಪೈರೆಟ್ಸ್ ಸೆಣಸಲಿದ್ದು ಗೆದ್ದ ತಂಡ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲಿದೆ.

ಮೊದಲ ಕ್ವಾಲಿಫೈಯರ್‌ನಲ್ಲಿ ಬೆಂಗಾಲ್ ವಾರಿಯರ್ಸ್‌ ತಂಡ ಗುಜರಾತ್ ಫಾರ್ಚೂನ್‌ಜೈಂಟ್ಸ್ ವಿರುದ್ಧ 17–42ರಿಂದ ಸೋತಿತ್ತು. ಪಟ್ನಾ ಪೈರೆಟ್ಸ್‌ ಎರಡನೇ ಎಲಿಮಿನೇಟರ್‌ ಪಂದ್ಯದಲ್ಲಿ 69–30ರಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿತ್ತು. ಮಂಗಳವಾರ ನಡೆದ ಮೂರನೇ ಎಲಿಮಿನೇಟರ್‌ನಲ್ಲಿ ಪಟ್ನಾ ಪೈರೆಟ್ಸ್ ಪುಣೇರಿ ಪಲ್ಟನ್ ವಿರುದ್ಧ 42–32ರಿಂದ ಗೆದ್ದಿತ್ತು.

ADVERTISEMENT

ಚೆನ್ನೈನಲ್ಲಿ ಇದೇ ಮೊದಲ ಬಾರಿ ಫೈನಲ್ ಹಂತದ ಪಂದ್ಯಗಳು ನಡೆಯುತ್ತಿದ್ದು ಇದರ ಭರಪೂರ ಮನ ರಂಜನೆ ಉಣ್ಣಲು ಕಬಡ್ಡಿ ಪ್ರಿಯರು ಕಾತರಗೊಂಡಿದ್ದಾರೆ.

ಪ್ರದೀಪ್ ನರ್ವಾಲ್ ಆಕರ್ಷಣೆ

ಪ್ರದೀಪ್ ನರ್ವಾಲ್‌ ಪಂದ್ಯದ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ರೈಡಿಂಗ್‌ನಲ್ಲಿ ದಾಖಲೆ ಮಾಡಿರುವ ಅವರು ಚೆನ್ನೈನಲ್ಲಿ ಮಿಂಚು ಹರಿಸುವ ನಿರೀಕ್ಷೆ ಇದೆ. ಹರಿಯಾಣ ಸ್ಟೀಲರ್ಸ್ ವಿರುದ್ಧದ ಪಂದ್ಯದಲ್ಲಿ 34 ಪಾಯಿಂಟ್ ಕಲೆ ಹಾಕಿದ ಅವರು ಪಂದ್ಯವೊಂದರಲ್ಲಿ ಅತ್ಯಧಿಕ ಪಾಯಿಂಟ್ ಗಳಿಸಿದ  ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.