ADVERTISEMENT

ಕರುಣ್‌ ಪಡೆಗೆ ಪ್ರಶಸ್ತಿಯ ಕನಸು

ಪಿಟಿಐ
Published 7 ಮಾರ್ಚ್ 2018, 19:30 IST
Last Updated 7 ಮಾರ್ಚ್ 2018, 19:30 IST
ಕರ್ನಾಟಕ ತಂಡದವರು ಫೈನಲ್‌ನಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ.
ಕರ್ನಾಟಕ ತಂಡದವರು ಫೈನಲ್‌ನಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ.   

ಧರ್ಮಶಾಲಾ: ಏಕದಿನ ಮಾದರಿಯಲ್ಲಿ ಪ್ರಾಬಲ್ಯ ಮೆರೆಯುತ್ತಿರುವ ಕರ್ನಾಟಕ ತಂಡ ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆ ಮಾಡಿಕೊಳ್ಳಲು ಸಜ್ಜಾಗಿದೆ.

ದೇವಧರ್‌ ಟ್ರೋಫಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಹೊತ್ತಿರುವ ಕರುಣ್‌ ನಾಯರ್‌ ಬಳಗ ಈ ಹಾದಿಯಲ್ಲಿ ಇನ್ನೊಂದೇ ಹೆಜ್ಜೆ ಇಡಬೇಕಿದೆ.

ಗುರುವಾರ ನಡೆಯುವ ಫೈನಲ್‌ ಹಣಾಹಣಿಯಲ್ಲಿ ಕರ್ನಾಟಕ, ಭಾರತ ‘ಬಿ’ ತಂಡದ ಸವಾಲು ಎದುರಿಸಲಿದ್ದು ಸುಲಭ ಗೆಲುವಿನ ಕನಸು ಕಾಣುತ್ತಿದೆ.

ADVERTISEMENT

ಕರುಣ್‌ ಪಡೆ ಟೂರ್ನಿಯಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲೂ ಗೆದ್ದಿದೆ. ಮೊದಲ ಪಂದ್ಯದಲ್ಲಿ 6 ರನ್‌ಗಳಿಂದ ಭಾರತ ‘ಬಿ’ ತಂಡದ ಸವಾಲು ಮೀರಿದ್ದ ತಂಡ ಎರಡನೇ ಹಣಾಹಣಿಯಲ್ಲಿ ಭಾರತ ‘ಎ’ ವಿರುದ್ಧ 65 ರನ್‌ಗಳಿಂದ ಗೆದ್ದು ಅಜೇಯವಾಗಿ ಫೈನಲ್ ಪ್ರವೇಶಿಸಿದೆ.

ಕರುಣ್‌ ನಾಯರ್‌ ಮತ್ತು ಮಯಂಕ್‌ ಅಗರವಾಲ್‌ ಆರಂಭಿಕ ಕ್ರಮಾಂಕದಲ್ಲಿ ತಂಡದ ಭರವಸೆ ಹೆಚ್ಚಿಸಿದ್ದಾರೆ. ರಣಜಿ ಟ್ರೋಫಿ ಮತ್ತು ವಿಜಯ್‌ ಹಜಾರೆ ಟೂರ್ನಿಗಳಲ್ಲಿ ರನ್ ಹೊಳೆ ಹರಿಸಿದ್ದ ಮಯಂಕ್‌, ಈ ಟೂರ್ನಿಯಲ್ಲಿ ಎರಡು ಪಂದ್ಯಗಳಿಂದ 66 ರನ್‌  ಗಳಿಸಿದ್ದಾರೆ. ಕರುಣ್‌ ಕೂಡ ರನ್‌ ಕಾಣಿಕೆ ನೀಡಿದ್ದಾರೆ. ಇವರು ಫೈನಲ್‌ನಲ್ಲೂ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡುವ ವಿಶ್ವಾಸದಲ್ಲಿದ್ದಾರೆ.

ಆರ್‌.ಸಮರ್ಥ್‌ ಮತ್ತು ಪವನ್‌ ದೇಶಪಾಂಡೆ ಕ್ರಮವಾಗಿ ಮೂರು ಮತ್ತು ನಾಲ್ಕನೇ ಕ್ರಮಾಂಕಗಳಲ್ಲಿ ಕಣಕ್ಕಿಳಿದು ಗರ್ಜಿಸಿದ್ದಾರೆ. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ  ಸಮರ್ಥ್‌, ಭಾರತ ‘ಎ’ ಎದುರು 87 ಎಸೆತಗಳಲ್ಲಿ 85ರನ್‌ ದಾಖಲಿಸಿದ್ದರು.  ಮೊದಲ ಪಂದ್ಯದಲ್ಲಿ 46ರನ್‌ ಗಳಿಸಿದ್ದ ಪವನ್‌, ಹಿಂದಿನ ಹಣಾಹಣಿಯಲ್ಲಿ 95ರನ್‌ ಬಾರಿಸಿದ್ದರು.

ಅನುಭವಿ ಆಲ್‌ರೌಂಡರ್‌ ಸ್ಟುವರ್ಟ್‌ ಬಿನ್ನಿ ಮತ್ತು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸಿ.ಎಂ.ಗೌತಮ್‌, ಲಯ ಕಂಡುಕೊಂಡಿರುವುದರಿಂದ ಕರ್ನಾಟಕದ ಬ್ಯಾಟಿಂಗ್ ಶಕ್ತಿಗೆ ಇನ್ನಷ್ಟು ಬಲ ಬಂದಂತಾಗಿದೆ.

ಭಾರತ ‘ಎ’ ವಿರುದ್ಧ ಬಿನ್ನಿ ಮತ್ತು ಗೌತಮ್‌ ಕ್ರಮವಾಗಿ 37 ಮತ್ತು 49 ರನ್‌ ಸಿಡಿಸಿ ಅಜೇಯವಾಗುಳಿದಿದ್ದರು. ಇದರಿಂದಾಗಿ ತಂಡದ ಮೊತ್ತ 330ರ ಗಡಿ ದಾಟಿತ್ತು. ಇವರು ಭಾರತ ‘ಬಿ’ ತಂಡದ ಬೌಲರ್‌ಗಳನ್ನು ಕಾಡುವ ಹುಮ್ಮಸ್ಸಿನಲ್ಲಿದ್ದಾರೆ.

ಬೌಲಿಂಗ್‌ನಲ್ಲೂ ಕರ್ನಾಟಕ ತಂಡ ಬಲಿಷ್ಠವಾಗಿದೆ. ಶ್ರೇಯಸ್‌ ಗೋಪಾಲ್‌ ಮತ್ತು ಕೆ.ಗೌತಮ್‌ ತಲಾ 5 ವಿಕೆಟ್‌ ಕಬಳಿಸಿದ್ದಾರೆ. ವೇಗಿಗಳಾದ ಪ್ರಸಿದ್ಧ ಕೃಷ್ಣ, ಟಿ.ಪ್ರದೀಪ, ರೋನಿತ್‌ ಮೋರೆ ಮತ್ತು ಅಭಿಮನ್ಯು ಮಿಥುನ್‌ ಅವರು ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವ ಉತ್ಸಾಹದಲ್ಲಿದ್ದಾರೆ.

ವಿಶ್ವಾಸದಲ್ಲಿ ಶ್ರೇಯಸ್‌ ಪಡೆ: ಶ್ರೇಯಸ್‌ ಅಯ್ಯರ್‌ ಸಾರಥ್ಯದ ಭಾರತ ‘ಬಿ’ ತಂಡ ಕೂಡ ಪ್ರಶಸ್ತಿಯ ಕನಸು ಕಾಣುತ್ತಿದೆ. ಈ ಪಂದ್ಯದಲ್ಲಿ ಗೆದ್ದು ಆರಂಭದಲ್ಲಿ ಎದುರಾಗಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ತಂಡ ಹವಣಿಸುತ್ತಿದೆ. ಮೊದಲ ಪಂದ್ಯದಲ್ಲಿ ಶ್ರೇಯಸ್‌ ಬಳಗ 8 ವಿಕೆಟ್‌ಗಳಿಂದ ಭಾರತ ‘ಎ’ ತಂಡವನ್ನು ಸೋಲಿಸಿತ್ತು.

ತಂಡಗಳು ಇಂತಿವೆ: ಕರ್ನಾಟಕ: ಕರುಣ್‌ ನಾಯರ್‌ (ನಾಯಕ), ಮಯಂಕ್‌ ಅಗರವಾಲ್‌, ಪವನ್‌ ದೇಶಪಾಂಡೆ, ಅಭಿಷೇಕ್‌ ರೆಡ್ಡಿ, ಆರ್‌.ಸಮರ್ಥ್‌, ಸ್ಟುವರ್ಟ್‌ ಬಿನ್ನಿ, ಸಿ.ಎಂ.ಗೌತಮ್‌ (ವಿಕೆಟ್‌ ಕೀಪರ್‌), ಬಿ.ಆರ್‌.ಶರತ್‌, ಶ್ರೇಯಸ್‌ ಗೋಪಾಲ್‌, ಕೆ.ಗೌತಮ್‌, ಅಭಿಮನ್ಯು ಮಿಥುನ್‌, ರೋನಿತ್‌ ಮೋರೆ, ಟಿ.ಪ್ರದೀಪ, ಪ್ರಸಿದ್ಧ ಎಂ.ಕೃಷ್ಣ ಮತ್ತು ಜೆ.ಸುಚಿತ್‌.

ಭಾರತ ‘ಬಿ’: ಶ್ರೇಯಸ್‌ ಅಯ್ಯರ್‌ (ನಾಯಕ), ರುತುರಾಜ್‌ ಗಾಯಕವಾಡ, ಅಭಿಮನ್ಯು ಈಶ್ವರನ್‌, ಆಕಾಶ್‌ದೀಪ್‌ ನಾಥ್‌, ಮನೋಜ್‌ ತಿವಾರಿ, ಸಿದ್ದೇಶ್‌ ಲಾಡ್‌, ಕೆ.ಭರತ್‌ (ವಿಕೆಟ್‌ ಕೀಪರ್‌), ಜಯಂತ್‌ ಯಾದವ್‌, ಧರ್ಮೇಂದ್ರಸಿನ್ಹಾ ಜಡೇಜ, ಹನುಮ ವಿಹಾರಿ, ಸಿದ್ದಾರ್ಥ್‌ ಕೌಲ್‌, ಖಲೀಲ್‌ ಅಹಮದ್‌, ಹರ್ಷಲ್‌ ಪಟೇಲ್‌, ಉಮೇಶ್‌ ಯಾದವ್‌ ಮತ್ತು ರಜತ್‌ ಪಾಟಿದಾರ್‌.

ಆರಂಭ: ಮಧ್ಯಾಹ್ನ 1.30ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.