ಕೋಲ್ಕತ್ತ (ಪಿಟಿಐ): ರಣಜಿ ಮತ್ತು ಇರಾನಿ ಕಪ್‌ನಲ್ಲಿ ಚಾಂಪಿಯನ್ ಆಗಿ ಮೆರೆದಾಡಿದ್ದ ಕರ್ನಾಟಕ ತಂಡ ಇದೇ ಮೊದಲ ಸಲ ವಿಜಯ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲೂ ಪ್ರಶಸ್ತಿ ಗೆದ್ದುಕೊಂಡಿದೆ. ಜೊತೆಗೆ, ದೇಶಿಯ ಕ್ರಿಕೆಟ್‌ನಲ್ಲಿ ತಾನೇ ಸಾಮ್ರಾಟ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.
ಏಳು ಸಲ ರಣಜಿ ಟ್ರೋಫಿ ಗೆದ್ದಿರುವ ಕರ್ನಾಟಕಕ್ಕೆ ಒಮ್ಮೆಯೂ ವಿಜಯ ಹಜಾರೆ ಟ್ರೋಫಿ ಜಯಿಸಲು ಸಾಧ್ಯ ವಾಗಿರಲಿಲ್ಲ. ಆದರೆ, ಈ ಸಲ ವಿನಯ್ ಕುಮಾರ್ ಸಾರಥ್ಯದ ತಂಡ ಹ್ಯಾಟ್ರಿಕ್ ಸಾಧನೆ ಮಾಡಿತು. ಜೊತೆಗೆ ಮೂರೂ ಟೂರ್ನಿಗಳಲ್ಲಿ ತಂಡವನ್ನು ಯಶಸ್ವಿ ಯಾಗಿ ಮುನ್ನಡೆಸಿದ ಕರ್ನಾಟಕದ ಮೊದಲ ನಾಯಕ ಎನ್ನುವ ಕೀರ್ತಿಯೂ ವಿನಯ್ ಪಾಲಾಯಿತು.
ಈಡನ್ ಗಾರ್ಡನ್ಸ್ ಕ್ರೀಡಾಂಗಣ ದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ವಿನಯ್ ಬಳಗವು ನಾಲ್ಕು ವಿಕೆಟ್ ಗೆಲುವು ಸಾಧಿಸುವ ಮೂಲಕ ಟ್ರೋಫಿ ಎತ್ತಿ ಹಿಡಿಯಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕರ್ನಾಟಕ ಎದುರಾಳಿ ರೈಲ್ವೇಸ್ ತಂಡವನ್ನು 47.4 ಓವರ್‌ಗಳಲ್ಲಿ 157 ರನ್‌ಗೆ ಕಟ್ಟಿ ಹಾಕಿತು.
ಅಲ್ಪ ಮೊತ್ತದ ಗುರಿ ಮುಟ್ಟುವ ಹಾದಿಯಲ್ಲಿ ಸಂಕಷ್ಟ ಎದುರಿಸಿದ ಕರ್ನಾಟಕ 43 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗೆಲುವು ಪಡೆ ಯಿತು. ಚೊಚ್ಚಲ ವಿಜಯ ಹಜಾರೆ ಟೂರ್ನಿ ಆಡಿದ ಕರುಣ್ ನಾಯರ್ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಪ ಮೊತ್ತಕ್ಕೆ ಕುಸಿದ ರೈಲ್ವೇಸ್: ದೇಶಿಯ ಟೂರ್ನಿಯ ಪ್ರತಿ ಪಂದ್ಯ ದಲ್ಲೂ ಅಮೋಘ ಬೌಲ್ ಮಾಡಿರುವ ವಿನಯ್ ಆರಂಭದಲ್ಲಿಯೇ ಒಂದು ವಿಕೆಟ್ ಉರುಳಿಸಿದರು. ನಂತರ ಅಭಿಮನ್ಯು ಮಿಥುನ್ (19ಕ್ಕೆ4), ಅಬ್ರಾರ್ ಖಾಜಿ (27ಕ್ಕೆ2) ಮತ್ತು ರಾಬಿನ್ ಉತ್ತಪ್ಪ (19ಕ್ಕೆ2) ಚುರುಕಿನ ದಾಳಿ ನಡೆಸಿ ರೈಲ್ವೇಸ್ ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಕಟ್ಟಿ ಹಾಕಿದರು. ಮಿಥುನ್ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಮಹೇಶ್ ರಾವತ್ ಸಾರಥ್ಯದ ರೈಲ್ವೇಸ್ ತಂಡ ಒಂದು ಹಂತದಲ್ಲಿ 83 ರನ್ ಕಲೆ ಹಾಕುವಷ್ಟರಲ್ಲಿ ಏಳು ವಿಕೆಟ್ ಕಳೆದುಕೊಂಡಿತ್ತು. ಆದರೆ, ರಂಗಸೇನ್ ಜೊನಾಥನ್ (46, 57ಎಸೆತ, 3ಬೌಂಡರಿ) ಆಸರೆಯಾದರು. ಕೊನೆಯ ಎರಡು ರನ್ ಕಲೆ ಹಾಕುವ ಅಂತರದಲ್ಲಿ ಎರಡು ವಿಕೆಟ್ ಉರು ಳಿಸಿದ ಕರ್ನಾಟಕ ಎದುರಾಳಿ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿತು.
ಪರದಾಟ: ಅಲ್ಪ ಮೊತ್ತದ ಗುರಿ ಇದ್ದರೂ ಕರ್ನಾಟಕ ಗೆಲುವಿಗಾಗಿ ಸಾಕಷ್ಟು ಪ್ರಯಾಸ ಪಡಬೇಕಾಯಿತು. ಬೌಲರ್‌ಗಳಿಗೆ ನೆರವು ನೀಡುತ್ತಿದ್ದ ಪಿಚ್‌ನಲ್ಲಿ ರನ್ ಗಳಿಸುವುದು ಸವಾಲಾಗಿತ್ತು. ಹಿಂದಿನ ಎರಡೂ ಪಂದ್ಯಗಳಲ್ಲಿ ಶತಕ ಸಿಡಿಸಿದ್ದ ರಾಬಿನ್ ಉತ್ತಪ್ಪ (8) ಮಹತ್ವದ ಪಂದ್ಯದಲ್ಲಿ ಎರಡಂಕಿಯ ಮೊತ್ತ ಮುಟ್ಟದೇ ಔಟಾದರು.
ಅಪಾಯಕಾರಿ ಪಿಚ್‌ನಲ್ಲಿ ಎಚ್ಚರಿಕೆಯ ಆಟವಾಡಲು ಮಯಂಕ್ ಅಗರವಾಲ್, ಮನೀಷ್ ಪಾಂಡೆ ಮತ್ತು ಗಣೇಶ್ ಸತೀಶ್ ಅವರಿಗೂ ಸಾಧ್ಯವಾಗಲಿಲ್ಲ. ಎರಡನೇ ಕ್ರಮಾಂಕದಲ್ಲಿ ಬ್ಯಾಟ್‌್ ಮಾಡಲು ಬಂದ ವಿನಯ್ ಕುಮಾರ್ (8) ಕೂಡಾ ಬೇಗನೆ ಪೆವಿಲಿಯನ್ ಸೇರಿದರು.
ಆಸರೆಯಾದ ರಾಹುಲ್–ಕರುಣ್: 47 ರನ್ ಗಳಿಸುವಷ್ಟರಲ್ಲಿ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಸೋಲಿನ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ ತಂಡಕ್ಕೆ ಕೆ.ಎಲ್. ರಾಹುಲ್ ಮತ್ತು ಕರುಣ್ ಆಸರೆಯಾದರು. ಈ ಸಲದ ರಣಜಿಯಲ್ಲಿ ಒಟ್ಟು 1033 ರನ್ ಕಲೆ ಹಾಕಿರುವ ರಾಹುಲ್ ವಿಕೆಟ್ ಬೀಳದಂತೆ ಎಚ್ಚರಿಕೆ ವಹಿಸಿದರು. ತಾಳ್ಮೆಯ ಆಟದ ಮೂಲಕ 72 ಎಸೆತಗಳಲ್ಲಿ 38 ರನ್ ಕಲೆ ಹಾಕಿದರು. ರಾಹುಲ್‌ಗೆ ತಕ್ಕ ಬೆಂಬಲ ನೀಡಿದ ಕರುಣ್ (ಅಜೇಯ 53, 126 ನಿಮಿಷ 86ಎಸೆತ, 4ಬೌಂಡರಿ) ತಂಡವನ್ನು ಗೆಲುವಿನ ಹಾದಿಯಲ್ಲಿ ಕೊಂಡೊಯ್ದರು. ಆದರೆ, ಕರ್ನಾಟಕದ ಗೆಲುವಿಗೆ 45 ರನ್ ಅಗತ್ಯವಿದ್ದಾಗ ರಾಹುಲ್ ಔಟ್ ಆದರು.
ಚೊಚ್ಚಲ ‘ಲಿಸ್ಟ್ ಎ’ ಟೂರ್ನಿ ಆಡಿದ ಕುನಾಲ್ ಕಪೂರ್ (ಅಜೇಯ 24, 45ಎಸೆತ, 2ಬೌಂಡರಿ) ತಂಡವನ್ನು ಗೆಲುವಿನ ದಡ ಸೇರಿಸಿದರು. ಕರುಣ್ ಜೊತೆ ಏಳನೇ ವಿಕೆಟ್‌ಗೆ 45 ರನ್ ಹಾಕಿ ಜಯ ತಂದುಕೊಟ್ಟರು.
ವಿಕೆಟ್ ಕೀಪರ್ ರಾಹುಲ್: ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರಾಹುಲ್ ವಿಕೆಟ್ ಕೀಪಿಂಗ್‌ನಲ್ಲಿಯೂ ಮಿಂಚಿದರು. ಕಾಯಂ ವಿಕೆಟ್ ಕೀಪರ್ ಸಿ.ಎಂ. ಗೌತಮ್ ಅಂತಿಮ ಹನ್ನೊಂದರಲ್ಲಿ ಸ್ಥಾನ ಗಳಿಸದ ಕಾರಣ ಜಾರ್ಖಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ವಿಕೆಟ್ ಕೀಪರ್ ಆಗಿದ್ದರು. ಫೈನಲ್‌ನಲ್ಲಿ ಈ ಜವಾಬ್ದಾರಿ ನಿಭಾಯಿಸಿದ ರಾಹುಲ್ ಒಂದು ಸ್ಟಂಪ್ ಔಟ್‌್ ಮಾಡುವ ಜೊತೆಗೆ ನಾಲ್ಕು ಕ್ಯಾಚ್‌ಗಳನ್ನು ಪಡೆದರು.
ಮೂರೂ ಟ್ರೋಫಿ ಗೆದ್ದ ಮೊದಲ ನಾಯಕ
ರಣಜಿ, ಇರಾನಿ ಕಪ್ ಮತ್ತು ವಿಜಯ ಹಜಾರೆ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿ ಯಶಸ್ಸು ಕಂಡ ಕರ್ನಾಟಕ ತಂಡದ ಮೊದಲ ನಾಯಕ ಎನ್ನುವ ಕೀರ್ತಿ ವಿನಯ್‌್ ಕುಮಾರ್ ಪಾಲಾಯಿತು. ವಿಜಯ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ಇದೇ ಮೊದಲ ಸಲ ಫೈನಲ್ ಪ್ರವೇಶಿಸಿತ್ತು. ರಣಜಿಯ ಫೈನಲ್‌ನಲ್ಲಿ ಮಹಾರಾಷ್ಟ್ರ ತಂಡವನ್ನು ಮತ್ತು ಇರಾನಿ ಕಪ್ ಪಂದ್ಯದಲ್ಲಿ ಭಾರತ ಇತರೆ ತಂಡವನ್ನು ಸೋಲಿಸಿ ಕರ್ನಾಟಕ ಚಾಂಪಿಯನ್ ಆಗಿತ್ತು. ಈ ಟೂರ್ನಿಯಲ್ಲಿ ಕರ್ನಾಟಕ ಐದು ಸಲ ಕ್ವಾರ್ಟರ್ ಫೈನಲ್‌ನಲ್ಲಿಯೇ ಸೋಲು ಕಂಡಿತ್ತು. ಒಂದು ವರ್ಷ ಅರ್ಹತೆಯೇ ಗಳಿಸಿರಲಿಲ್ಲ. ಯುವ ಆಟಗಾರರನ್ನು ಹೊಂದಿರುವ ತಂಡ ಇದೇ ಮೊದಲ ಸಲ ಫೈನಲ್ ಪ್ರವೇಶಿಸುವ ಜೊತೆಗೆ ಟ್ರೋಫಿಯನ್ನೂ ಮುಡಿಗೇರಿಸಿಕೊಂಡಿತು.
ಪ್ರಶಸ್ತಿ ಗೆದ್ದ ಹಾದಿ...
ಸುಬ್ಬಯ್ಯ ಪಿಳ್ಳೈ ಟ್ರೋಫಿ ದಕ್ಷಿಣ ವಲಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಪಡೆದಿತ್ತು. ಆಂಧ್ರ, ಗೋವಾ, ಕೇರಳ, ಹೈದರಾಬಾದ್ ಎದುರು ಗೆಲುವು ಸಾಧಿಸಿದ್ದ ರಾಜ್ಯ ತಂಡ ಫೈನಲ್‌ನಲ್ಲಿ ತಮಿಳುನಾಡು ಎದುರು ನಿರಾಸೆ ಕಂಡಿತ್ತು.ವಿಜಯ ಹಜಾರೆ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಗುಜರಾತ್ ಮೇಲೂ, ಸೆಮಿಫೈನಲ್‌ನಲ್ಲಿ ಜಾರ್ಖಂಡ್ ವಿರುದ್ಧವೂ ಜಯ ಸಾಧಿಸಿ ಫೈನಲ್ ತಲುಪಿತ್ತು.
ರೈಲ್ವೇಸ್ 47.4 ಓವರ್‌ಗಳಲ್ಲಿ 157
ಅಮಿತ್ ಪೌಣಿಕರ್ ಸಿ ಗಣೇಶ್ ಸತೀಶ್ ಬಿ ವಿನಯ್ ಕುಮಾರ್ 02
ಶುಕ್ಲಾ ಸಿ ಗಣೇಶ್ ಸತೀಶ್ ಬಿ ಉತ್ತಪ್ಪ 21
ಅರಿಂದಮ್ ಘೋಷ್ ಸ್ಟಂಪ್ಡ್‌್ ಕೆ.ಎಲ್. ರಾಹುಲ್ ಬಿ ಅಬ್ರಾರ್ ಖಾಜಿ 33
ಮಹೇಶ್‌್ ರಾವತ್ ಸಿ ಕೆ.ಎಲ್. ರಾಹುಲ್ ಬಿ ರಾಬಿನ್ ಉತ್ತಪ್ಪ 04
ಆಶಿಶ್ ಯಾದವ್ ಸಿ ಕೆ.ಎಲ್. ರಾಹುಲ್ ಬಿ ಅಭಿಮನ್ಯು ಮಿಥುನ್ 11
ಸೈನಿ ಎಲ್‌ಬಿಡಬ್ಲ್ಯು ಬಿ ಖಾಜಿ 02
ರಂಗಸೇನ್ ಜೊನಾಥನ್ ಸಿ ಮನೀಷ್ ಪಾಂಡೆ ಬಿ ಅಭಿಮನ್ಯು ಮಿಥುನ್ 46
ಕರಣ್ ಶರ್ಮ ಸಿ ಕೆ.ಎಲ್. ರಾಹುಲ್ ಬಿ ಅಭಿಮನ್ಯು ಮಿಥುನ್ 01
ಅಮಿತ್ ಮಿಶ್ರಾ ಸಿ ಕೆ.ಎಲ್. ರಾಹುಲ್ ಬಿ ಅಭಿಮನ್ಯು ಮಿಥುನ್ 17
ಅನುರೀತ್ ರನ್ಔಟ್ (ನಾಯರ್) 11
ಕೃಷ್ಣಕಾಂತ್ ಉಪಾಧ್ಯಾಯ ಔಟಾಗದೆ 01
ಇತರೆ: (ಬೈ–1, ವೈಡ್–7) 08
ವಿಕೆಟ್ ಪತನ: 1–13 (ಪೌಣಿಕರ್; 6.2), 2–39 (ಶುಕ್ಲಾ; 13.6), 3–50 (ರಾವತ್; 15.4), 4–75 (ಘೋಷ್; 25.1), 5–79 (ಆಶಿಶ್; 28.6), 6–79 (ಸೈನಿ; 29.2), 7–83 (ಶರ್ಮ; 30.6), 8–121 (ಮಿಶ್ರಾ; 40.6), 9–155 (ಅನುರೀತ್; 46.5), 10–157 (ಜೊನಾಥನ್; 47.4)
ಬೌಲಿಂಗ್: ಆರ್. ವಿನಯ್ ಕುಮಾರ್ 9–1–35–1, ಅಭಿಮನ್ಯು ಮಿಥುನ್ 9.4–1–19–4, ಎಚ್.ಎಸ್. ಶರತ್ 9–0–45–0, ಅಬ್ರಾರ್ ಖಾಜಿ 12–2–27–2, ರಾಬಿನ್ ಉತ್ತಪ್ಪ 4–0–19–2, ಮನೀಷ್ ಪಾಂಡೆ 4–1–11–0.
ಕರ್ನಾಟಕ 43 ಓವರ್‌ಗಳಲ್ಲಿ
6 ವಿಕೆಟ್‌ಗೆ 158
ರಾಬಿನ್ ಉತ್ತಪ್ಪ ಸಿ ಅರಿಂದಮ್ ಘೋಷ್ ಬಿ ಕೃಷ್ಣಕಾಂತ್ ಉಪಾಧ್ಯಾಯ 08
ಮಯಂಕ್ ಬಿ ಅನುರೀತ್ ಸಿಂಗ್ 19
ಆರ್. ವಿನಯ್ ಕುಮಾರ್ ಸಿ ಮಹೇಶ್ ರಾವತ್ ಬಿ ಕೃಷ್ಣಕಾಂತ್ ಉಪಾಧ್ಯಾಯ 08
ಕೆ.ಎಲ್. ರಾಹುಲ್ ಸಿ ಮತ್ತು ಬಿ ಸೈನಿ 38
ಮನೀಷ್ ಪಾಂಡೆ ಸಿ ಮಹೇಶ್ ರಾವತ್ ಬಿ ಅನುರೀತ್ ಸಿಂಗ್ 01
ಗಣೇಶ್ ಸತೀಶ್ ಸಿ ಮಹೇಶ್ ರಾವತ್ ಬಿ ಕೃಷ್ಣಕಾಂತ್ ಉಪಾಧ್ಯಾಯ 02
ಕರುಣ್ ನಾಯರ್ ಔಟಾಗದೆ 53
ಕುನಾಲ್ ಕಪೂರ್ ಔಟಾಗದೆ 24
ಇತರೆ: (ವೈಡ್–4, ನೋಬಾಲ್–1) 05
ವಿಕೆಟ್ ಪತನ: 1–21 (ಉತ್ತಪ್ಪ; 3.6), 2–36 (ಮಯಂಕ್; 6.5), 3–36 (ವಿನಯ್; 7.1), 4–37 (ಪಾಂಡೆ; 8.1), 5–47 (ಗಣೇಶ್; 11.4), 6–113 (ರಾಹುಲ್; 21.2)
ಬೌಲಿಂಗ್: ಅನುರೀತ್ ಸಿಂಗ್ 9–1–41–2, ಕೃಷ್ಣಕಾಂತ್ ಉಪಾಧ್ಯಾಯ 9–2–30–3, ಕರಣ್ ಶರ್ಮ 12–0–51–0, ಅಮಿತ್್ ಮಿಶ್ರಾ 3–0–6–0, ಆಶಿಶ್ ಯಾದವ್ 5–0–13–0, ನಿತಿನ್ ಸೈನಿ 5–0–17–1.
ಫಲಿತಾಂಶ: ಕರ್ನಾಟಕಕ್ಕೆ 4 ವಿಕೆಟ್ ಜಯ ಹಾಗೂ ವಿಜಯ ಹಜಾರೆ ಟ್ರೋಫಿ
ಪಂದ್ಯ ಶ್ರೇಷ್ಠ: ಅಭಿಮನ್ಯು ಮಿಥುನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.