ADVERTISEMENT

ಕರ್ನಾಟಕ ತಂಡದ ಜಯದ ಓಟ

ಸುಬ್ಬಯ್ಯ ಪಿಳ್ಳೈ ಟ್ರೋಫಿ: ವಿನಯ್‌, ಮನೀಷ್‌ ಮಿಂಚು, ಆಂಧ್ರ 97ಕ್ಕೆ ಆಲ್‌ಔಟ್‌!

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2014, 19:30 IST
Last Updated 27 ಫೆಬ್ರುವರಿ 2014, 19:30 IST
ಬೆಂಗಳೂರಿನಲ್ಲಿ ಗುರುವಾರ ನಡೆದ ಕೆ.ಎಸ್. ಸುಬ್ಬಯ್ಯ ಪಿಳ್ಳೈ ಟ್ರೋಫಿ ದಕ್ಷಿಣ ವಲಯ ಏಕದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ ರಾಬಿನ್‌ ಉತ್ತಪ್ಪ ರಿವರ್ಸ್‌ ಸ್ವೀಪ್‌ ಮಾಡಲು ಮುಂದಾದ ಕ್ಷಣ	–ಪ್ರಜಾವಾಣಿ ಚಿತ್ರ/ಆರ್.ಶ್ರೀಕಂಠ ಶರ್ಮ
ಬೆಂಗಳೂರಿನಲ್ಲಿ ಗುರುವಾರ ನಡೆದ ಕೆ.ಎಸ್. ಸುಬ್ಬಯ್ಯ ಪಿಳ್ಳೈ ಟ್ರೋಫಿ ದಕ್ಷಿಣ ವಲಯ ಏಕದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ ರಾಬಿನ್‌ ಉತ್ತಪ್ಪ ರಿವರ್ಸ್‌ ಸ್ವೀಪ್‌ ಮಾಡಲು ಮುಂದಾದ ಕ್ಷಣ –ಪ್ರಜಾವಾಣಿ ಚಿತ್ರ/ಆರ್.ಶ್ರೀಕಂಠ ಶರ್ಮ   

ಬೆಂಗಳೂರು: ರಣಜಿ ಚಾಂಪಿಯನ್‌ ಕರ್ನಾಟಕ ತಂಡ ದೇಶಿಯ ಟೂರ್ನಿಗಳಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದೆ. ವಿನಯ್‌ ಕುಮಾರ್‌ ಮತ್ತು ಮನೀಷ್‌ ಪಾಂಡೆ ಬಿಗುವಿನ ದಾಳಿಯ ಮುಂದೆ ತತ್ತರಿಸಿ ಹೋದ ಆಂಧ್ರ ತಂಡ ಕೆ.ಎಸ್. ಸುಬ್ಬಯ್ಯ ಪಿಳ್ಳೈ ಟ್ರೋಫಿ ದಕ್ಷಿಣ ವಲಯ ಏಕದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಆತಿಥೇಯರ ಎದುರು ಸುಲಭವಾಗಿ ಶರಣಾಯಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮೊದಲ ಪಂದ್ಯದಲ್ಲಿ ವಿನಯ್‌ ಕುಮಾರ್‌ ಸಾರಥ್ಯದ ಕರ್ನಾಟಕ ತಂಡ ಆರು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಜೊತೆಗೆ, ದೇಶಿಯ ಟೂರ್ನಿಯಲ್ಲಿ ಸತತ ಗೆಲುವಿನ ಓಟವನ್ನು ಮುಂದುವರಿಸಿತು. ರಾಜ್ಯ ತಂಡ ರಣಜಿಯಲ್ಲಿ ಅಜೇಯ ಗೆಲುವಿನ ಮೂಲಕ ಟ್ರೋಫಿ ಗೆದ್ದಿದೆ.

ಟಾಸ್‌ ಗೆದ್ದ ವಿನಯ್‌ ಅಷ್ಟೇನು ಬಲಿಷ್ಠವಲ್ಲದ ಆಂಧ್ರಕ್ಕೆ ಬ್ಯಾಟ್‌ ಮಾಡಲು ಆಹ್ವಾನ ಕೊಟ್ಟರು. ಪ್ರಶಾಂತ್‌ ಕುಮಾರ್‌ ನೇತೃತ್ವದ ಆಂಧ್ರ ತಂಡ 30.3 ಓವರ್‌ಗಳಲ್ಲಿ ಕೇವಲ 97 ರನ್‌ಗೆ ಆಲ್‌ಔಟ್‌ ಆಯಿತು. ಸುಲಭ ಗುರಿಯನ್ನು ಕರ್ನಾಟಕ 23.2 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ತಲುಪಿತು.

ಚುರುಕಿನ ಬೌಲಿಂಗ್: ರನ್‌ ಖಾತೆ ಆರಂಭಿಸುವ ಮುನ್ನವೇ ಆಂಧ್ರ ಮೊದಲ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ತಂಡ ಮೊದಲ 46 ರನ್‌ ಕಲೆ ಹಾಕುವಷ್ಟರಲ್ಲಿ ಐದು ವಿಕೆಟ್‌ ಕಳೆದುಕೊಂಡಿತು. ಕೊನೆಯ 17 ರನ್‌ ಗಳಿಸುವಷ್ಟರಲ್ಲಿ ಮತ್ತೆ ನಾಲ್ಕು ವಿಕೆಟ್‌ಗಳು ಪತನವಾದವು. 6.3 ಓವರ್‌ ಬೌಲಿಂಗ್‌ ಮಾಡಿದ ವಿನಯ್‌ 9 ರನ್‌ಗಳನ್ನಷ್ಟೇ ಬಿಟ್ಟುಕೊಟ್ಟು ಮೂರು ವಿಕೆಟ್‌ ಉರುಳಿಸಿದರು. ಈ ಮೂಲಕ ‘ದಾವಣಗೆರೆ ಎಕ್ಸ್‌ಪ್ರೆಸ್‌’ ಲಿಸ್ಟ್‌್ ‘ಎ’ ಪಂದ್ಯದಲ್ಲಿ ಒಟ್ಟು 150 ವಿಕೆಟ್‌ ಪಡೆದ ಸಾಧನೆ ಮಾಡಿದರು.

ಬ್ಯಾಟ್ಸ್‌ಮನ್‌ ಆಗಿ ಗುರುತಿಸಿಕೊಂಡಿರುವ ಮನೀಷ್‌ ಪಾಂಡೆ ಈ ಪಂದ್ಯದಲ್ಲಿ ಬೌಲಿಂಗ್‌ ಮೂಲಕ ಮಿಂಚಿದರು. ಆಫ್‌ ಸ್ಪಿನ್ನರ್‌ ಪಾಂಡೆ ಮೂರು ವಿಕೆಟ್ ಕಬಳಿಸಿ ಆಂಧ್ರ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಜಯದ ಮುನ್ನುಡಿ ಬರೆದ ಆರಂಭಿಕ ಜೋಡಿ: ರಾಬಿನ್ ಉತ್ತಪ್ಪ (54, 82 ನಿಮಿಷ, 69ಎಸೆತ, 7ಬೌಂಡರಿ, 1 ಸಿಕ್ಸರ್‌) ಅರ್ಧಶತಕ ಗಳಿಸಿದರೆ, ಕೆ.ಎಲ್‌. ರಾಹುಲ್‌ (21, 79ನಿ., 43ಎ.) ನೆರವು ನೀಡಿದರು. ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ 17.5 ಓವರ್‌ಗಳಲ್ಲಿ 81 ರನ್‌ ಕಲೆ ಹಾಕಿ  ಗೆಲುವಿಗೆ ಮುನ್ನುಡಿ ಬರೆಯಿತು.

ಆದರೆ, ಚೊಚ್ಚಲ ಲಿಸ್ಟ್‌ ‘ಎ’ ಪಂದ್ಯವಾಡಿದ ಹರೀಶ್‌ 17.6ನೇ ಓವರ್‌ನಲ್ಲಿ ರಾಹುಲ್‌ ವಿಕೆಟ್ ಉರುಳಿಸಿದರು. ಕರ್ನಾಟಕ 14 ರನ್‌ ಗಳಿಸುವ ಅಂತರದಲ್ಲಿ ಉತ್ತಪ್ಪ, ಪಾಂಡೆ ಮತ್ತು ಗಣೇಶ್‌ ಸತೀಶ್‌ ವಿಕೆಟ್‌ ಕಳೆದುಕೊಂಡಿತು. ಆದರೆ, ಕರುಣ್‌ ನಾಯರ್‌ ಮತ್ತು ಸಿ.ಎಂ. ಗೌತಮ್‌ 24ನೇ ಓವರ್‌ನಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇಂದು ಹೈದರಾಬಾದ್‌ ಎದುರು ಪಂದ್ಯ: ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ತಂಡ ಹೈದರಾಬಾದ್‌ ಎದುರು ಪೈಪೋಟಿ ನಡೆಸಲಿದೆ.

ತಮಿಳುನಾಡು, ಹೈದರಾಬಾದ್‌ ಗೆಲುವು: ಆಲೂರು ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯಗಳಲ್ಲಿ  ತಮಿಳುನಾಡು ತಂಡ ಗೋವಾ ಮೇಲೂ, ಹೈದರಾಬಾದ್‌ ತಂಡ ಕೇರಳ ವಿರುದ್ಧವೂ ಗೆಲುವು ಪಡೆದವು.

ಸಂಕ್ಷಿಪ್ತ ಸ್ಕೋರು: ಆಂಧ್ರ 30.3 ಓವರ್‌ಗಳಲ್ಲಿ 97. (ಕೆ.ಎಸ್‌. ಭರತ್‌್ 25, ಡಿ. ಸ್ವರೂಪ್‌ ಕುಮಾರ್‌್ 26; ವಿನಯ್‌ ಕುಮಾರ್‌ 9ಕ್ಕೆ3, ಅಭಿಮನ್ಯು ಮಿಥುನ್‌ 31ಕ್ಕೆ2, ರೋನಿತ್‌ ಮೋರೆ 12ಕ್ಕೆ1, ಅಬ್ರಾರ್‌ ಖಾಜಿ 16ಕ್ಕೆ1, ಮನೀಷ್‌್ ಪಾಂಡೆ 25ಕ್ಕೆ3). 
ಕರ್ನಾಟಕ 23.2 ಓವರ್‌ಗಳಲ್ಲಿ 4 ವಿಕೆಟ್‌ಗೆ 98. (ರಾಬಿನ್‌ ಉತ್ತಪ್ಪ 54, ಕೆ.ಎಲ್‌. ರಾಹುಲ್‌ 21, ಗಣೇಶ್‌ ಸತೀಶ್‌ 10, ಕರುಣ್‌ ನಾಯರ್‌ ಔಟಾಗದೆ 5; ಕೆ. ಹರೀಶ್‌್ 30ಕ್ಕೆ2, ಬಿ. ಸುಧಾಕರ್‌ 14ಕ್ಕೆ2). ಫಲಿತಾಂಶ: ಕರ್ನಾಟಕಕ್ಕೆ ಆರು ವಿಕೆಟ್‌ ಜಯ ಹಾಗೂ ನಾಲ್ಕು ಅಂಕ.

ಗೋವಾ 36 ಓವರ್‌ಗಳಲ್ಲಿ 122. ತಮಿಳುನಾಡು 33.2 ಓವರ್‌ಗಳಲ್ಲಿ 126ಕ್ಕೆ3. ಫಲಿತಾಂಶ: ತಮಿಳುನಾಡಿಗೆ 7  ವಿಕೆಟ್ ಜಯ.
ಕೇರಳ 33.5 ಓವರ್‌ಗಳಲ್ಲಿ 107. ಹೈದರಾಬಾದ್‌ 30 ಓವರ್‌ಗಳಲ್ಲಿ 1  ವಿಕೆಟ್‌ಗೆ 108. ಫಲಿತಾಂಶ: ಹೈದರಾಬಾದ್‌ಗೆ 9 ವಿಕೆಟ್‌ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.