ADVERTISEMENT

ಕಾನೂನು ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST

ಬೆಂಗಳೂರು: ಚುನಾವಣೆಯನ್ನು ನಿಯಮಾವಳಿಗಳ ಪ್ರಕಾರ ನಡೆಸದೇ ಇದ್ದರೆ ರಾಜ್ಯ ಅಥ್ಲೆಟಿಕ್ ಸಂಸ್ಥೆಯ ವಿರುದ್ಧ ಮತ್ತೊಮ್ಮೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಸಂಸ್ಥೆಯ ಉಪಾಧ್ಯಕ್ಷರಲ್ಲಿ ಒಬ್ಬರಾದ ಅಥ್ಲೀಟ್ ಅಶ್ವಿನ ನಾಚಪ್ಪ ಮತ್ತು ಕೆಲವು ಜಿಲ್ಲಾ ಘಟಕಗಳ ಪ‌ದಾಧಿಕಾರಿಗಳು ಎಚ್ಚರಿಕೆ ನೀಡಿದರು.

ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಶ್ವಿನಿ ‘ಕಳೆದ ವರ್ಷ ಜುಲೈನಲ್ಲಿ ನಿಯಮಾವಳಿಗಳ ಪ್ರಕಾರ ಚುನಾವಣೆ ನಡೆಸಲು ಸಿದ್ಧತೆ ನಡೆದಿದ್ದಾಗ ಸಂಸ್ಥೆಯೊಂದಿಗೆ ನೇರ ಸಂಬಂಧ ಇಲ್ಲದ ವ್ಯಕ್ತಿಯೊಬ್ಬರು ಅದಕ್ಕೆ ಅಡ್ಡಿಪಡಿಸಿದರು. ನಂತರ ಕಾನೂನು ಹೋರಾಟ ನಡೆಸಲಾಯಿತು. ಚುನಾವಣೆ ನಡೆಸಲು ನ್ಯಾಯಾಲಯ ಸೂಚಿಸಿತು. ಆದರೆ ಈಗ ಸಂಸ್ಥೆಯ ಉಪಾಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ನಿಯಮಗಳನ್ನು ಗಾಳಿಗೆ ತೂರಿ ಚುನಾವಣೆಗೆ ಆದೇಶ ಹೊರಡಿಸಿದ್ದಾರೆ. ಈ ಚುನಾವಣೆ ನಡೆಯಲು ಬಿಡುವುದಿಲ್ಲ’ ಎಂದರು.

‘ಚುನಾವಣೆಗೆ ಸಿದ್ಧಗೊಳಿಸಿರುವ ಮತದಾರರ ಪಟ್ಟಿಯಲ್ಲಿ ಅನಧಿಕೃತ ವ್ಯಕ್ತಿಗಳ ಹೆಸರು ಇದೆ. ತಮಗೆ ಆಗದ ಜಿಲ್ಲಾ ಸಂಸ್ಥೆಗಳನ್ನು ಪರಿಗಣಿಸಲೇ ಇಲ್ಲ. ಚುನಾವಣೆಗೆ ಹೆಸರು ನೋಂದಾಯಿಸಲು ಮೂರು ದಿನಗಳ ಹಿಂದೆ ಕೊನೆಯ ದಿನ ಎಂದು ಸೂಚಿಸಲಾಗಿತ್ತು. ಹೀಗಾಗಿ ಜಿಲ್ಲಾ ಸಂಸ್ಥೆಗಳ ಪದಾಧಿಕಾರಿಗಳು ಬೆಂಗಳೂರು ಕಚೇರಿಗೆ ಬಂದಿದ್ದಾರೆ. ಆದರೆ ಇಲ್ಲಿ ಅವರಿಗೆ ಯಾರನ್ನೂ ಭೇಟಿಯಾಗಲು ಸಾಧ್ಯವಾಗಲಿಲ್ಲ. ಆದ್ದರಿಂದ ಕೆಲವು ದಿನಗಳಿಂದ ಅವರು ಇಲ್ಲೇ ಇದ್ದಾರೆ’ ಎಂದು ಅಶ್ವಿನಿ ತಿಳಿಸಿದರು.

ADVERTISEMENT

‘ಚುನಾವಣೆ ನಡೆಸುವಂತೆ ಕಳೆದ ವರ್ಷ ನ್ಯಾಯಾಲಯ ನೀಡಿರುವ ಆದೇಶದ ಬಗ್ಗೆ ಚರ್ಚಿಸಲು ರಾಜ್ಯ ಸಂಸ್ಥೆ ಮುಂದಾಗಲಿಲ್ಲ. ಈಗ ನಿಯಮಾವಳಿಗಳನ್ನೇ ಬದಲಿಸಲು ಹೊರಟಿರುವ ಸಂಸ್ಥೆ ಭಾರತೀಯ ಅಥ್ಲೆಟಿಕ್ ಫೆಡರೇಷನ್‌ ಅನ್ನು ಸಂಪರ್ಕಿಸಿದೆ. ಈ ವಿಷಯದಲ್ಲಿ ನಾನು ಕೂಡ ಫೆಡರೇಷನ್ ಜೊತೆ ಮಾತನಾಡಿದ್ದು ನಿಯಮಾವಳಿಗಳನ್ನು ಸುಲಭವಾಗಿ ಬದಲಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಅಶ್ವಿನಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.