ADVERTISEMENT

ಕಿಂಗ್ಸ್‌ ಇಲೆವನ್‌ಗೆ ರೋಚಕ ಗೆಲುವು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 18:51 IST
Last Updated 23 ಏಪ್ರಿಲ್ 2018, 18:51 IST
ಕಿಂಗ್ಸ್‌ ಇಲೆವನ್‌ಗೆ ರೋಚಕ ಗೆಲುವು
ಕಿಂಗ್ಸ್‌ ಇಲೆವನ್‌ಗೆ ರೋಚಕ ಗೆಲುವು   

ನವದೆಹಲಿ: ಮುಜೀಬ್‌ ಉರ್‌ ರೆಹಮಾನ್‌ (25ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 11ನೇ ಆವೃತ್ತಿಯ ಪಂದ್ಯದಲ್ಲಿ 4ರನ್‌ಗಳ ರೋಚಕ ಗೆಲುವು ದಾಖಲಿಸಿದೆ.

ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಡೆಲ್ಲಿ ಡೇರ್‌ ಡೆವಿಲ್ಸ್‌ ಎದುರಿನ ಪಂದ್ಯದಲ್ಲಿ ಕಿಂಗ್ಸ್ ತಂಡ ಸಾಧಾರಣ ಮೊತ್ತ ಗಳಿಸಿತು. ಗುರಿ ಬೆನ್ನಟ್ಟಿದ ಗೌತಮ್‌ ಗಂಭೀರ್‌ ಸಾರಥ್ಯದ ಡೇರ್‌ ಡೆವಿಲ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 139ರನ್‌ ಕಲೆಹಾಕಲಷ್ಟೇ ಶಕ್ತವಾಯಿತು.

ಈ ತಂಡದ ಗೆಲುವಿಗೆ ಅಂತಿಮ ಓವರ್‌ನಲ್ಲಿ 17ರನ್‌ಗಳು ಬೇಕಿದ್ದವು. ಶ್ರೇಯಸ್‌ ಅಯ್ಯರ್‌ 12ರನ್‌ ಗಳಿಸಲಷ್ಟೇ ಶಕ್ತರಾದರು.

ADVERTISEMENT

ಟಾಸ್‌ ಗೆದ್ದ ಡೇರ್‌ ಡೆವಿಲ್ಸ್‌ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕ್ರಿಸ್‌ ಗೇಲ್‌ಗೆ ವಿಶ್ರಾಂತಿ ನೀಡಿದ ಕಿಂಗ್ಸ್‌ ತಂಡ ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಆ್ಯರನ್‌ ಫಿಂಚ್‌ ಅವರನ್ನು ಕಣಕ್ಕೆ ಇಳಿಸಿತ್ತು.

ಎರಡನೇ ಓವರ್‌ನಲ್ಲಿ ಆ್ಯರನ್ ಫಿಂಚ್‌ ವಿಕೆಟ್ ಕಬಳಿಸಿದ ಆವೇಶ್ ಖಾನ್‌ ಎದುರಾಳಿ ತಂಡಕ್ಕೆ ಮೊದಲ ಆಘಾತ ನೀಡಿದರು. ನಂತರ ರಾಹುಲ್‌ ಮತ್ತು ಮಯಂಕ್ ಅಗರವಾಲ್‌ ತಂಡಕ್ಕೆ ನೆರವಾದರು. ಎರಡನೇ ವಿಕೆಟ್‌ಗೆ ಇವರಿಬ್ಬರು 36 ರನ್‌ ಸೇರಿಸಿದರು.

ಆದರೆ ಐದನೇ ಓವರ್‌ನಲ್ಲಿ ಪ್ಲಂಕೆಟ್‌ಗೆ ರಾಹುಲ್‌ ಬಲಿಯಾದರು. ಅಗರವಾಲ್ ಜೊತೆಗೂಡಿದ ಕರುಣ್‌ ನಾಯರ್‌ ತಂಡದ ಮೊತ್ತ ಹೆಚ್ಚಿಸಲು ಶ್ರಮಿಸಿದರು. 18 ರನ್‌ ಸೇರಿಸುವಷ್ಟರಲ್ಲಿ ಇವರಿಬ್ಬರ ಜೊತೆಯಾಟ ಮುರಿದು ಬಿತ್ತು. 21 ರನ್‌ ಗಳಿಸಿ ಅಗರವಾಲ್ ವಾಪಸಾದರು.

ಯುವರಾಜ್ ಸಿಂಗ್‌ ಕೇವಲ 14 ರನ್‌ ಗಳಿಸಿ ಮರಳಿದರು. ನಾಯರ್‌ ಮತ್ತು ಡೇವಿಡ್ ಮಿಲ್ಲರ್‌ ಅವರ ಉತ್ತಮ ಜೊತೆಯಾಟದ ನಿರೀಕ್ಷೆಯಲ್ಲಿದ್ದ ಪ್ರೇಕ್ಷಕರು ನಿರಾಸೆಗೊಂಡರು. ಎಂಟು ಎಸೆತಗಳ ಅಂತರದಲ್ಲಿ ಇವರಿಬ್ಬರೂ ಔಟಾದರು. ಅಂತಿಮ ಓವರ್‌ಗಳಲ್ಲಿ ನಾಯಕ ರವಿಚಂದ್ರನ್ ಅಶ್ವಿನ್‌ ಮತ್ತು ಆ್ಯಂಡ್ರ್ಯೂ ಟೈ ಅವರಿಗೆ ಮಿಂಚಲು ಆಗಲಿಲ್ಲ.

ಮೊದಲ ಐದು ವಿಕೆಟ್‌ಗಳನ್ನು ಆವೇಶ್ ಖಾನ್‌ ಮತ್ತು ಪ್ಲಂಕೆಟ್ ಹಂಚಿಕೊಂಡರೆ, ಮೂರು ವಿಕೆಟ್‌ಗಳನ್ನು ಟ್ರೆಂಟ್ ಬೌಲ್ಟ್ ಮತ್ತು ಡ್ಯಾನಿಯೆಲ್ ಕ್ರಿಶ್ಚಿಯನ್ ಹಂಚಿಕೊಂಡರು.

ಸಂಕ್ಷಿಪ್ತ ಸ್ಕೋರ್‌: ಕಿಂಗ್ಸ್ ಇಲೆವನ್ ಪಂಜಾಬ್‌: 20 ಓವರ್‌ಗಳಲ್ಲಿ 8ಕ್ಕೆ 143 (ಕೆ.ಎಲ್‌.ರಾಹುಲ್‌ 23, ಮಯಂಕ್‌ ಅಗರವಾಲ್‌ 21, ಕರುಣ್ ನಾಯರ್‌ 34, ಯು ವರಾಜ್ ಸಿಂಗ್‌ 14, ಡೇವಿಡ್ ಮಿಲ್ಲರ್‌ 26; ಟ್ರೆಂಟ್‌ ಬೌಲ್ಟ್‌ 21ಕ್ಕೆ2, ಆವೇಶ್ ಖಾನ್‌ 36ಕ್ಕೆ2, ಲಿಯಾನ್ ಪ್ಲಂಕೆಟ್‌ 17ಕ್ಕೆ3, ಡ್ಯಾನಿಯೆಲ್‌ ಕ್ರಿಶ್ಚಿಯನ್‌ 17ಕ್ಕೆ1); ಡೆಲ್ಲಿ ಡೇರ್‌ಡೆವಿಲ್ಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 139 (ಪೃಥ್ವಿ ಶಾ 22, ಗ್ಲೆನ್‌ ಮ್ಯಾಕ್ಸ್‌ವೆಲ್‌ 12, ಶ್ರೇಯಸ್‌ ಅಯ್ಯರ್‌ 57, ರಾಹುಲ್‌ ತೆವಾಟಿಯಾ 24; ಅಂಕಿತ್‌ ರಜಪೂತ್‌ 23ಕ್ಕೆ2, ಬರಿಂದರ್‌ ಸರನ್‌ 45ಕ್ಕೆ1, ಆ್ಯಂಡ್ರ್ಯೂ ಟೈ 25ಕ್ಕೆ2, ಮುಜೀಬ್‌ ಉರ್‌ ರೆಹಮಾನ್‌ 25ಕ್ಕೆ2).

ಫಲಿತಾಂಶ: ಕಿಂಗ್ಸ್‌ ಇಲೆವನ್‌ಗೆ 4ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.