ADVERTISEMENT

ಕಿಂಗ್ಸ್ ಇಲೆವೆನ್‌ಗೆ ಕಠಿಣ ಹಾದಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2011, 19:30 IST
Last Updated 12 ಏಪ್ರಿಲ್ 2011, 19:30 IST
ಕಿಂಗ್ಸ್ ಇಲೆವೆನ್‌ಗೆ ಕಠಿಣ ಹಾದಿ
ಕಿಂಗ್ಸ್ ಇಲೆವೆನ್‌ಗೆ ಕಠಿಣ ಹಾದಿ   

ಮೊಹಾಲಿ (ಪಿಟಿಐ): ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಇದೀಗ ಕಠಿಣ ಸವಾಲು ಎದುರಾಗಿದೆ.  ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಆ್ಯಡಮ್ ಗಿಲ್‌ಕ್ರಿಸ್ಟ್ ನೇತೃತ್ವದ ತಂಡವು ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪೈಪೋಟಿ ನಡೆಸಲಿದೆ.ಮಹೇಂದ್ರ ಸಿಂಗ್ ನಾಯಕತ್ವದ ಸೂಪರ್ ಕಿಂಗ್ಸ್ ತಂಡ ಗೆಲ್ಲುವ ‘ಫೇವರಿಟ್’ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ. ಏಕೆಂದರೆ ಈ ತಂಡ ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಜಯ ಸಾಧಿಸಿತ್ತು.
 

ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಗೆಲುವು ಪಡೆಯಬೇಕಾದರೆ  ಕಿಂಗ್ಸ್ ಇಲೆವೆನ್ ತಂಡಕ್ಕೆ ಅಸಾಮಾನ್ಯ ಪ್ರದರ್ಶನ ನೀಡುವುದು ಅನಿವಾರ್ಯ.
ಗಿಲ್‌ಕ್ರಿಸ್ಟ್ ಬಳಗ ಮೊದಲ ಪಂದ್ಯದಲ್ಲಿ ಪುಣೆ ವಾರಿಯರ್ಸ್ ಕೈಯಲ್ಲಿ ಸೋಲು ಅನುಭವಿಸಿತ್ತು. ಮಾತ್ರವಲ್ಲ ಈ ಪಂದ್ಯದಲ್ಲಿ ತಂಡ ಎಲ್ಲ ವಿಭಾಗಗಳಲ್ಲೂ ನೀರಸ ಪ್ರದರ್ಶನ ನೀಡಿತ್ತು. ಕಿಂಗ್ಸ್ ಇಲೆವೆನ್ ತಂಡ ಇದೀಗ ನಾಯಕ ಗಿಲ್‌ಕ್ರಿಸ್ಟ್ ಅವರನ್ನು ನೆಚ್ಚಿಕೊಂಡಿದೆ. 2009 ರಲ್ಲಿ ಗಿಲ್ ಕ್ರಿಸ್ಟ್ ನೇತೃತ್ವದಲ್ಲಿ ಡೆಕ್ಕನ್‌ಚಾರ್ಜರ್ಸ್ ತಂಡ ಚಾಂಪಿಯನ್ ಆಗಿತ್ತು.

ಆದರೆ ಈ ಬಾರಿ ಅವರು ಪಂಜಾಬ್ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ. ಪಂಜಾಬ್ ತಂಡ ಯಶ ಪಡೆಯಬೇಕಾದರೆ, ಗಿಲ್‌ಕ್ರಿಸ್ಟ್ ಮಿಂಚುವುದು ಅಗತ್ಯ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಪಂದ್ಯದಲ್ಲಿ ನೈಟ್ ರೈಡರ್ಸ್ ಎದುರು ಎರಡು ರನ್‌ಗಳ ರೋಚಕ ಗೆಲುವು ಪಡೆದಿತ್ತು. ದೋನಿ ಅಲ್ಲದೆ ಸುರೇಶ್ ರೈನಾ ಮತ್ತು ಮುರಳಿ ವಿಜಯ್ ಅವರಂತಹ ಪ್ರಮುಖ ಆಟಗಾರರನ್ನು ಹೊಂದಿರುವ ತಂಡ ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ.

ADVERTISEMENT

ತಂಡಗಳು

ಚೆನ್ನೈ ಸೂಪರ್ ಕಿಂಗ್ಸ್

ಮಹೇಂದ್ರ ಸಿಂಗ್ ದೋನಿ (ನಾಯಕ), ಸುರೇಶ್ ರೈನಾ, ಮುರಳಿ ವಿಜಯ್, ಮೈಕ್ ಹಸ್ಸಿ, ಶ್ರೀಕಾಂತ್ ಅನಿರುದ್ಧ್, ಎಸ್. ಬದರೀನಾಥ್, ಫಾಫ್ ಡು ಪ್ಲೆಸಿ, ವೃದ್ದಿಮನ್ ಸಹಾ, ಅಭಿನವ್ ಮುಕುಂದ್, ಜಾರ್ಜ್ ಬೈಲಿ, ಅಲ್ಬಿ ಮಾರ್ಕೆಲ್, ಸ್ಕಾಟ್ ಸ್ಟೈರಿಸ್, ಟಿಮ್ ಸೌಥಿ, ಆರ್. ಅಶ್ವಿನ್, ಬೆನ್ ಹಿಲ್ಫೆನಾಸ್, ಜೋಗಿಂದರ್ ಶರ್ಮ, ನುವಾನ್ ಕುಲಶೇಖರ, ಸುದೀಪ್ ತ್ಯಾಗಿ, ಸೂರಜ್ ರಂದೀವ್, ಶಾದಾಬ್ ಜಕಾತಿ.
 

ಕಿಂಗ್ಸ್ ಇಲೆವೆನ್ ಪಂಜಾಬ್

ಆ್ಯಡಮ್ ಗಿಲ್‌ಕ್ರಿಸ್ಟ್ (ನಾಯಕ), ಡೇವಿಡ್ ಹಸ್ಸಿ, ದಿನೇಶ್ ಕಾರ್ತಿಕ್, ಅಭಿಷೇಕ್ ನಾಯರ್, ರ್ಯಾನ್ ಮೆಕ್‌ಲಾರೆನ್, ಪ್ರವೀಣ್ ಕುಮಾರ್, ಪಿಯೂಷ್ ಚಾವ್ಲಾ, ಭಾರ್ಗವ್ ಭಟ್, ಬಿಪುಲ್ ಶರ್ಮ, ಲೊವ್ ಅಬ್ಲಿಶ್, ಮನ್‌ದೀಪ್ ಸಿಂಗ್, ನಿತಿನ್ ಸೈನಿ, ಪಾರಸ್ ದೋಗ್ರಾ, ಪಾಲ್ ವ್ಯಾಲಟಿ, ಶಲಭ್ ಶ್ರೀವಾಸ್ತವ, ಸಿದ್ಧಾರ್ಥ್ ಚಿಟ್ನಿಸ್, ಸನ್ನಿ ಸಿಂಗ್, ವಿಕ್ರಮ್‌ಜೀತ್ ಮಲಿಕ್, ಅಮಿತ್ ಯಾದವ್, ಶಾನ್ ಮಾರ್ಷ್, ಡೇವಿಡ್ ಹಸ್ಸಿ, ನಥಾನ್ ರಿಮಂಗ್ಟನ್, ರ್ಯಾನ್ ಹಾರಿಸ್.

ಪಂದ್ಯದ ಆರಂಭ: ಸಂಜೆ 4.00ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.