ADVERTISEMENT

ಕಿವೀಸ್ ಪಡೆಗೆ ಗೆಲುವಿನ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 18:30 IST
Last Updated 19 ಫೆಬ್ರುವರಿ 2011, 18:30 IST
ಕಿವೀಸ್ ಪಡೆಗೆ ಗೆಲುವಿನ ನಿರೀಕ್ಷೆ
ಕಿವೀಸ್ ಪಡೆಗೆ ಗೆಲುವಿನ ನಿರೀಕ್ಷೆ   

ಚೆನ್ನೈ (ಪಿಟಿಐ):  ವಿಶ್ವಕಪ್ ಟೂರ್ನಿ ಯೆಡೆಗಿನ ಸಿದ್ಧತೆಯ ಹಾದಿಯಲ್ಲಿ ಅಲ್ಪ ಹಿನ್ನಡೆ ಅನುಭವಿಸಿರುವ ನ್ಯೂಜಿಲೆಂಡ್ ತಂಡ ಭಾನುವಾರ ನಡೆಯುವ ‘ಎ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಕೀನ್ಯಾ ಜೊತೆ ಪೈಪೋಟಿ ನಡೆಸಲಿದೆ.ತಂಡದ ಆತ್ಮವಿಶ್ವಾಸ ಅಲ್ಪ ಕುಗ್ಗಿದೆ ಯಾದರೂ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಕೀನ್ಯಾ ವಿರುದ್ಧ ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ.

ಡೇನಿಯಲ್ ವೆಟೋರಿ ನೇತೃತ್ವದ ಕಿವೀಸ್ ಫೆಬ್ರುವರಿ 10 ರಂದು ಭಾರತಕ್ಕೆ ಆಗಮಿಸಿತ್ತು.ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ತಂಡಕ್ಕೆ ಇನ್ನೂ ಸಾಧ್ಯವಾಗಿಲ್ಲ.ಸ್ಪಿನ್ನರ್‌ಗಳಿಗೆ ನೆರವು ನೀಡುವ ಪಿಚ್‌ನಲ್ಲಿ ಆಡಲು ಕಿವೀಸ್ ಬ್ಯಾಟ್ಸ್‌ಮನ್‌ಗಳು ಎಡವುತ್ತಿದ್ದಾರೆ.ಭಾರತದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಇದು ಸಾಬೀತಾಗಿತ್ತು.ತಂಡಕ್ಕೆ 117 ರನ್‌ಗಳ ಸೋಲು ಎದುರಾಗಿತ್ತು.

ಆಟಗಾರರಲ್ಲಿ ಆತ್ಮವಿಶ್ವಾಸದ ಕೊರತೆ ಇದೆ ಎಂಬುದನ್ನು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕ್ಲಮ್ ಶನಿವಾರ ಒಪ್ಪಿಕೊಂಡಿದ್ದಾರೆ.ಮಾತ್ರವಲ್ಲ ನ್ಯೂಜಿಲೆಂಡ್ ತಂಡ ತಾನಾಡಿದ ಕೊನೆಯ 17 ಏಕದಿನ ಪಂದ್ಯಗಳಲ್ಲಿ 14 ರಲ್ಲೂ ಸೋಲು ಅನುಭವಿಸಿದೆ.ಆದರೆ ಎದುರಾಳಿ ಕೀನ್ಯಾ ಒಂದು ರೀತಿಯಲ್ಲಿ ದುರ್ಬಲ ತಂಡ ಎನಿಸಿರುವ ಕಾರಣ ನ್ಯೂಜಿ ಲೆಂಡ್ ಯಾವುದೇ ಅಚ್ಚರಿಯ ಫಲಿ ತಾಂಶಕ್ಕೆ ಅವಕಾಶ ನೀಡುವ ಸಾಧ್ಯತೆ ಕಡಿಮೆ.‘ತಂಡ ವಿಶ್ವಕಪ್ ಟೂರ್ನಿ ಯಲ್ಲಿ ಪುಟಿದೇಳಲಿದೆ’ ಎಂದು ಮಾರ್ಟಿನ್ ಗುಪ್ಟಿಲ್ ಹೇಳಿದ್ದಾರೆ.

ಹೊಸ ಕೋಚ್ ಜಾನ್ ರೈಟ್ ಅವರ ಮಾರ್ಗದರ್ಶನದಲ್ಲಿ ಕಿವೀಸ್ ಶುಭಾರಂಭದ ನಿರೀಕ್ಷೆಯಲ್ಲಿದೆ.ಈ ಹಿಂದೆ ಭಾರತ ತಂಡದ ಕೋಚ್ ಆಗಿದ್ದ ರೈಟ್ ಅವರು ಉಪಭೂಖಂಡದ ಪರಿಸ್ಥಿತಿಯ ಕುರಿತು ಚೆನ್ನಾಗಿ ತಿಳಿದಿದ್ದಾರೆ.ಇದು ಕೂಡಾ ವೆಟೋರಿ ಬಳಗಕ್ಕೆ ನೆರವಾಗಲಿದೆ.

ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ವೆಟೋರಿ ಮತ್ತು ನಥಾನ್ ಮೆಕ್ಲಮ್ ಭಾನುವಾರ ಕಣಕ್ಕಿಳಿಯಲಿದ್ದಾರೆ.ಅನಾರೋಗ್ಯದಿಂದ ಬಳಲಿದ್ದ ಮೆಕ್ಲಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.ಶನಿವಾರ ಅವರು ಸಹ ಆಟಗಾರರ ಜೊತೆ ಅಭ್ಯಾಸದಲ್ಲಿ ಪಾಲ್ಗೊಂಡರು.

ಕೀನ್ಯಾ ಈ ಹಿಂದಿನ ವಿಶ್ವಕಪ್ ಟೂರ್ನಿಗಳಲ್ಲಿ ಕೆಲವೊಂದು ಅಚ್ಚರಿಯ ಫಲಿತಾಂಶ ನೀಡಿತ್ತು.1996 ರಲ್ಲಿ ತನ್ನ ಮೊದಲ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್‌ಗೆ ‘ಶಾಕ್’ ನೀಡಿತ್ತು.ಅದೇ ರೀತಿ 2003 ರಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು.ಆ ಬಳಿಕ ಕೀನ್ಯಾ ತಂಡದಿಂದ ಸುಧಾರಿತ ಪ್ರದರ್ಶನ ಕಂಡಬಂದಿಲ್ಲ.39ರ ಹರೆಯದ ಆಲ್‌ರೌಂಡರ್ ಸ್ಟೀವ್ ಟಿಕೊಲೊ ಮತ್ತು ಥಾಮಸ್ ಒಡೆಯೊ ಅವರ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ನ್ಯೂಜಿಲೆಂಡ್
 ಡೇನಿಯಲ್ ವೆಟೋರಿ (ನಾಯಕ), ಹಾಮಿಷ್ ಬೆನೆಟ್, ಜೇಮ್ಸ್ ಫ್ರಾಂಕ್ಲಿನ್, ಮಾರ್ಟಿನ್ ಗುಪ್ಟಿಲ್, ಜೇಮಿ ಹೌ, ಬ್ರೆಂಡನ್ ಮೆಕ್ಲಮ್, ನಥಾನ್ ಮೆಕ್ಲಮ್, ಕೈಲ್ ಮಿಲ್ಸ್, ಜೇಕಬ್ ಓರಮ್, ಜೆಸ್ಸಿ ರೈಡರ್, ಟಿಮ್ ಸೌಥಿ, ಸ್ಕಾಟ್ ಸ್ಟೈರಿಸ್, ರಾಸ್ ಟೇಲರ್, ಕೇನ್ ವಿಲಿಯಮ್ಸನ್, ಲೂಕ್ ವುಡ್‌ಕಾಕ್.

ಕೀನ್ಯಾ
 ಜಿಮ್ಮಿ ಕಮಾಂಡೆ (ನಾಯಕ), ಸೆರೆನ್ ವಾಟರ್ಸ್‌, ಅಲೆಕ್ಸ್ ಒಬಾಂಡ, ಡೇವಿಡ್ ಒಬುಯಾ, ಕಾಲಿನ್ಸ್ ಒಬುಯಾ, ಸ್ಟೀವ್ ಟಿಕೋಲೊ, ತನ್ಮಯ್ ಮಿಶ್ರಾ, ರಾಕೆಪ್ ಪಟೇಲ್, ಮೌರಿಸ್ ಔಮಾ, ಥಾಮಸ್ ಒಡೊಯೊ, ನೆಹೆಮಿಯಾ ಒದಿಯಾಂಬೊ, ಎಲಿಜಾ ಒಟೀನೊ, ಪೀಟರ್ ಒಂಗೊಂಡೊ, ಶೆಮ್ ನೋಚೆ, ಜೇಮ್ಸ್ ನೋಚೆ.
ಅಂಪೈರ್: ರಾಟ್ ಟಕರ್ ಮತ್ತು ಮರಾಯ್ಸ ಎರಾಸ್ಮಸ್. ಮೂರನೇ ಅಂಪೈರ್: ಅಲೀಮ್ ದಾರ್.
ಮ್ಯಾಚ್ ರೆಫರಿ: ರೋಶನ್ ಮಹಾನಾಮ.
ಪಂದ್ಯದ ಆರಂಭ: ಬೆಳಿಗ್ಗೆ 9.30ಕ್ಕೆ
ನೇರ ಪ್ರಸಾರ: ಇಎಸ್‌ಪಿಎನ್/ಸ್ಟಾರ್ ಕ್ರಿಕೆಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.