ADVERTISEMENT

ಕಿವೀಸ್ ವೇಗಿ ಮಾರ್ಟಿನ್ ನಿವೃತ್ತಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 19:59 IST
Last Updated 3 ಜುಲೈ 2013, 19:59 IST

ವೆಲಿಂಗ್ಟನ್ (ಎಎಫ್‌ಪಿ/ ರಾಯಿಟ ರ್ಸ್‌): ಒಟ್ಟು ಹೆಚ್ಚು ವಿಕೆಟ್ ಪಡೆದ ನ್ಯೂಜಿಲೆಂಡ್‌ನ ಮೂರನೇ ಬೌಲರ್ ಎನ್ನುವ ಕೀರ್ತಿ ಹೊಂದಿರುವ ಕ್ರಿಸ್ ಮಾರ್ಟಿನ್ ಮಂಗಳವಾರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದರು.

2001ರಲ್ಲಿ ದಕ್ಷಿಣ ಆಫ್ರಿಕಾ ಎದುರು ಟೆಸ್ಟ್ ಪಂದ್ಯವನ್ನಾಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಬಲಗೈ ವೇಗಿ ಮಾರ್ಟಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 33.81ರ ಸರಾಸರಿಯಲ್ಲಿ 233 ವಿಕೆಟ್ ಪಡೆದಿದ್ದಾರೆ. ರಿಚರ್ಡ್ ಹೆಡ್ಲೆ (431) ಹಾಗೂ ಡೇನಿಯಲ್ ವೆಟೋರಿ (360) ಹೆಚ್ಚು ವಿಕೆಟ್ ಗಳಿಸಿದ ನ್ಯೂಜಿಲೆಂಡ್‌ನ ಇನ್ನಿಬ್ಬ ಬೌಲರ್‌ಗಳು.

ಇದೇ ವರ್ಷದ ಜನವರಿಯಲ್ಲಿ ಕೇಪ್‌ಟೌನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯವೇ ಮಾರ್ಟಿನ್ ಕೊನೆಯ ಟೆಸ್ಟ್ ಪಂದ್ಯವಾಗಿತ್ತು. `ಯುವ ಆಟಗಾರರಿಗೆ ಅವಕಾಶ ಮಾಡಿಕೊಡಬೇಕು. ನಾನು ಸೂಕ್ತ ಸಮಯದಲ್ಲಿಯೇ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದೇನೆ. ಕ್ರೀಡಾಂಗಣದಲ್ಲಿ ಪ್ರತಿ ಕ್ಷಣವನ್ನು ಖುಷಿಯಿಂದಲೇ ಕಳೆದಿದ್ದೇನೆ' ಎಂದು 38 ವರ್ಷದ ಮಾರ್ಟಿನ್ ತಿಳಿಸಿದರು.

ಟೆಸ್ಟ್ ಕ್ರಿಕೆಟ್‌ನಲ್ಲಿ 12 ರನ್ ಈ ಆಟಗಾರನ ವೈಯಕ್ತಿಕ ಗರಿಷ್ಠ ಸ್ಕೋರು ಎನಿಸಿದೆ. 71 ಟೆಸ್ಟ್ ಪಂದ್ಯಗಳಲ್ಲಿ ಮಾರ್ಟಿನ್ `ಸೊನ್ನೆ' ಸುತ್ತಿದ್ದು 36 ಸಲ. 20 ಏಕದಿನ ಪಂದ್ಯಗಳಿಂದ 18 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

2004ರಲ್ಲಿ ಆಕ್ಲೆಂಡ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಈ ವೇಗಿ 11 ವಿಕೆಟ್‌ಗಳನ್ನು ಪಡೆದು ಪಂದ್ಯ ಶ್ರೇಷ್ಠ ಗೌರವ ಪಡೆದಿದ್ದರು. ಇದು ಮಾರ್ಟಿನ್ ಅವರ ಟೆಸ್ಟ್ ಕ್ರಿಕೆಟ್‌ನ ಅತ್ಯುತ್ತಮ ಸಾಧನೆ ಎನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.