ADVERTISEMENT

ಕುಟುಂಬ ಸಾಕಬೇಕು: ಸನತ್

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 19:30 IST
Last Updated 19 ಜೂನ್ 2011, 19:30 IST

ಬೆಂಗಳೂರು: `ನನಗೆ ಕೋಚಿಂಗ್ ಬಿಟ್ಟರೆ ಮತ್ತೊಂದು ಗೊತ್ತಿಲ್ಲ. ಅದರಿಂದ ಬರುವ ಹಣದಿಂದಲೇ ನಾನು ಬದುಕಬೇಕು ಹಾಗೂ ನನ್ನ ಕುಟುಂಬ ಸಾಕಬೇಕು. ಹಾಗಾಗಿ ನನಗೆ ಈ ಸಮಯದಲ್ಲಿ ಲಭಿಸಿದ ಅವಕಾಶವನ್ನು ಉಪಯೋಗಿಸಿಕೊಂಡೆ. ಇನ್ನು ಎರಡು ವರ್ಷ ಹೋದರೆ ಇದೇ ರೀತಿಯ ಬೇಡಿಕೆ ಇರುತ್ತೆ ಎಂಬ ಗ್ಯಾರಂಟಿ ಏನು~ ಎಂದು ಕರ್ನಾಟಕ ರಣಜಿ ಕ್ರಿಕೆಟ್ ತಂಡದ ಮಾಜಿ ಕೋಚ್ ಸನತ್ ಕುಮಾರ್ ಪ್ರಶ್ನಿಸಿದ್ದಾರೆ.

`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, `ಬರೋಡಾ ಕ್ರಿಕೆಟ್ ಸಂಸ್ಥೆಯಿಂದ ನನಗೆ ಬಂದಿರುವ ಬೇಡಿಕೆಯ ಬಗ್ಗೆ ಎರಡು ತಿಂಗಳ ಹಿಂದೆಯೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ತಿಳಿಸಿದ್ದೆ. ಆದರೆ ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದರು. ನಾನು ಕೂಡ ಕೊಂಚ ಕಡಿಮೆಯೇ ಬೇಡಿಕೆ ಇಟ್ಟಿದ್ದೆ. ಅದಕ್ಕೂ ಅವರು ಒಪ್ಪಲಿಲ್ಲ. ನಾನೇನು ಮಾಡುವುದು~ ಎಂದು ಸನತ್ `ಪ್ರಜಾವಾಣಿ~ ತಿಳಿಸಿದ್ದಾರೆ.

`ಈ ವಿಷಯದಲ್ಲಿ ನಾನು ಯಾವುದೇ ವಿವಾದ ಹುಟ್ಟಿಹಾಕಲು ಬಯಸುವುದಿಲ್ಲ. ಕರ್ನಾಟಕ ರಣಜಿ ತಂಡ ಬಿಟ್ಟು ಹೋಗಲು ನನಗೂ ಬೇಸರವಿದೆ. ಆದರೆ ಬೇರೆ ವಿಧಿ ಇಲ್ಲ. ತುಂಬಾ ಆಲೋಚನೆ ಮಾಡಿಯೇ ಈ ನಿರ್ಧಾರಕ್ಕೆ ಬಂದಿದ್ದೇನೆ~ ಎಂದರು.

`ಕೆಎಸ್‌ಸಿಎಗೆ ಒಂದು ಬಜೆಟ್ ಎನ್ನುವುದು ಇದೆ. ಅದರಡಿಯಲ್ಲಿ ಅವರು ಕೋಚ್‌ಗಳಿಗೆ ಹಣ ನೀಡಬೇಕು. ಆದರೆ ನನಗೆ ಬರೋಡಾ ತಂಡದಿಂದ ಹೆಚ್ಚಿನ ಬೇಡಿಕೆ ಇತ್ತು. ಇದನ್ನು ಕೆಎಸ್‌ಸಿಎ ಆಡಳಿತ ಸಮಿತಿಗೆ ತಿಳಿಸಿದೆ. ಅಷ್ಟಕ್ಕೆ ಅವರು ಒಪ್ಪಲಿಲ್ಲ. ಆದರೆ ಜೀವನ ಸಾಗಿಸಲು ನನಗೂ ಹಣದ ಅಗತ್ಯವಿದೆ. ಹಾಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ~ ಎಂದು ಸನತ್ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.