ADVERTISEMENT

ಕುಸ್ತಿ: ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ಸುಶೀಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2012, 19:30 IST
Last Updated 27 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಭಾರತದ ಸುಶೀಲ್ ಕುಮಾರ್ ಜುಲೈ-ಆಗಸ್ಟ್‌ನಲ್ಲಿ ನಡೆಯಲಿರುವ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಸುಶೀಲ್ ಚೀನಾದ ತಾಯ್‌ಯುವಾನದಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಕುಸ್ತಿ ಚಾಂಪಿಯನ್‌ಷಿಪ್‌ನ 66 ಕೆ.ಜಿ.ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಅವರು ಫೈನಲ್‌ನಲ್ಲಿ 3-0 ಪಾಯಿಂಟ್‌ಗಳಿಂದ ಜಾರ್ಜಿಯಾದ ಒಟಾರ್ ತುಶಿವಿಲ್ಲಿ ಅವರನ್ನು ಪರಾಭವಗೊಳಿಸಿ ಈ ಸಾಧನೆ ಮಾಡಿದರು. ಈ ಮೂಲಕ ಮೂರನೇ ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಸುಶೀಲ್ ಎದುರು ನೋಡುತ್ತಿದ್ದಾರೆ.

ಈ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲಿ ಅವರು ಬೈ ಪಡೆದಿದ್ದರು. ಬಳಿಕದ ಸುತ್ತಿನಲ್ಲಿ ರಾಡ್ಲೆ ಮಾಂಗ್ ಅವರನ್ನು ಸೋಲಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಜೇಡನ್ ಅಲೆಕ್ಸಾಂಡರ್ ಲಾರೆನ್ಸ್ ವಿರುದ್ಧ ಗೆದ್ದಿದ್ದರು. ಸೆಮಿಫೈನಲ್‌ನಲ್ಲಿ 3-1 ಪಾಯಿಂಟ್‌ಗಳಿಂದ ಉಕ್ರೇನ್‌ನ ಆ್ಯಂಡ್ರಿ ಕ್ವಿಯಾಟ್ಕೊವ್‌ಸ್ಕಿ ಎದುರು ಜಯ ಗಳಿಸಿದ್ದರು. ಆಗಲೇ ಸುಶೀಲ್ ಅವರ ಒಲಿಂಪಿಕ್ಸ್ ಹಾದಿ ಸುಗಮವಾಗಿತ್ತು.

ಸುಶೀಲ್ 2008ರಲ್ಲಿ ನಡೆದ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಅವರು 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲೂ ಪಾಲ್ಗೊಂಡಿದ್ದರು. ಆದರೆ ಈ ಬಾರಿ ಮೂರನೇ ಪ್ರಯತ್ನದಲ್ಲಿ ಸುಶೀಲ್ ಯಶಸ್ವಿಯಾಗಿದ್ದಾರೆ. ಈ ಮೊದಲು ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೇಗನೇ ಹೊರಬಿದ್ದಿದ್ದರು. ಏಷ್ಯನ್ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸುತ್ತಿನಲ್ಲಿ ಸೋಲು ಕಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.