ADVERTISEMENT

ಕುಸ್ತಿ: ಗೀತಾ, ಪೂಜಾಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST
ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ನರಸಿಂಗ್‌ ಯಾದವ್‌ ಹಾಗೂ ಅಜರ್‌ಬೈಜಾನ್‌ವಿನ ಜಬ್ರಿಲ್‌ ಹಸನೋವ್‌ (ನೀಲಿ ಸಮವಸ್ತ್ರ) ಅವರು ಪೈಪೋಟಿ ನಡೆಸಿದ ಕ್ಷಣ. ಈ ವಿಭಾಗದಲ್ಲಿ ನರಸಿಂಗ್‌ ನಿರಾಸೆ ಅನುಭವಿಸಿದರು	–ಎಎಫ್‌ಪಿ ಚಿತ್ರ
ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ನರಸಿಂಗ್‌ ಯಾದವ್‌ ಹಾಗೂ ಅಜರ್‌ಬೈಜಾನ್‌ವಿನ ಜಬ್ರಿಲ್‌ ಹಸನೋವ್‌ (ನೀಲಿ ಸಮವಸ್ತ್ರ) ಅವರು ಪೈಪೋಟಿ ನಡೆಸಿದ ಕ್ಷಣ. ಈ ವಿಭಾಗದಲ್ಲಿ ನರಸಿಂಗ್‌ ನಿರಾಸೆ ಅನುಭವಿಸಿದರು –ಎಎಫ್‌ಪಿ ಚಿತ್ರ   

ಬುಡಾಪೆಸ್ಟ್‌ (ಪಿಟಿಐ): ಭಾರತದ ಮಹಿಳಾ ಕುಸ್ತಿಪಟುಗಳು ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ನಿರಾಸೆ ಅನುಭವಿಸಿದರು.

ಗೀತಾ ಫೊಗಟ್‌ (59 ಕೆ.ಜಿ. ವಿಭಾಗ), ಪೂಜಾ ದಂಡಾ (55 ಕೆ.ಜಿ) ಮತ್ತು ಗೀತಿಕಾ ಜಖಾರ್‌ (63 ಕೆ.ಜಿ) ಅವರು ಗುರುವಾರ ಮೊದಲ ಸುತ್ತಿನಲ್ಲೇ ಹೊರಬಿದ್ದರು.

ಹೋದ ವರ್ಷ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಗೀತಾ ಅಜರ್‌ಬೈಜಾನ್‌ನ ಯೂಲಿಯಾ ರಟ್ಕೆವಿಚ್‌ ಎದುರು ಪರಾಭವಗೊಂಡರು. ಪ್ರಬಲ ಹೋರಾಟ ಕಂಡುಬಂದ ಸ್ಪರ್ಧೆಯ ಆರಂಭದಲ್ಲಿ ಗೀತಾ ಅಲ್ಪ ಮೇಲುಗೈ ಪಡೆದಿದ್ದರು. ಆದರೆ ಮರುಹೋರಾಟ ನಡೆಸಿದ ಯೂಲಿಯಾ ಸತತ ಪಾಯಿಂಟ್‌ಗಳನ್ನು ಕಲೆಹಾಕಿ ಗೆಲುವು ತಮ್ಮದಾಗಿಸಿಕೊಂಡರು.

ಪೂಜಾ 55 ಕೆ.ಜಿ. ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ 0-8 ರಲ್ಲಿ ಉಕ್ರೇನ್‌ನ ಇರ್ಯಾನಾ ಹಸಿಯಾಕ್‌ ಎದುರು ಸೋಲು ಅನುಭವಿಸಿದರು. ಪೂಜಾ ಆಯ್ಕೆ ಟ್ರಯಲ್ಸ್‌ನಲ್ಲಿ ಹೋದ ವರ್ಷದ ಕಂಚಿನ ಪದಕ ವಿಜೇತೆ ಬಬಿತಾ ಕುಮಾರಿ ಅವರನ್ನು ಮಣಿಸಿ ಈ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಆದರೆ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ದಾರೆ.

ಗೀತಿಕಾ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಬೆಲಾರಸ್‌ನ ಮರಿಯಾ ಮಮಾಶುಕ್‌ ಕೈಯಲ್ಲಿ ಪರಾಭವಗೊಂಡರು.

ಭಾರತದ ಫ್ರೀಸ್ಟೈಲ್‌ ಸ್ಪರ್ಧಿಗಳು ಗಮನಾರ್ಹ ಪ್ರದರ್ಶನ ನೀಡಿ ಆರನೇ ಸ್ಥಾನ ಪಡೆದರು. ಒಟ್ಟು 72 ದೇಶಗಳ ತಂಡಗಳು ಸ್ಪರ್ಧೆಯಲ್ಲಿದ್ದವು. ಭಾರತದ ಕುಸ್ತಿಪಟುಗಳು 23 ಪಾಯಿಂಟ್‌ಗಳನ್ನು ಕಲೆಹಾಕಿದರು.

46 ಪಾಯಿಂಟ್‌ಗಳನ್ನು ಕಲೆಹಾಕಿದ ಇರಾನ್‌ ಅಗ್ರಸ್ಥಾನ ತನ್ನದಾಗಿಸಿಕೊಂಡರೆ, ರಷ್ಯಾ (44) ಹಾಗೂ ಜಾರ್ಜಿಯ (29) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದುಕೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.