ADVERTISEMENT

ಕೊಡವ ಹಾಕಿ ಉತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 19:30 IST
Last Updated 21 ಏಪ್ರಿಲ್ 2012, 19:30 IST

ಅಮ್ಮತ್ತಿ (ಕೊಡಗು): ಹದಿನಾರನೇ ವಾರ್ಷಿಕ ಕೊಡವ ಕೌಟುಂಬಿಕ ಹಾಕಿ ಉತ್ಸವ `ಐಚೆಟ್ಟಿರ ಕಪ್~ಗೆ ಶನಿವಾರ  ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ  ಚಾಲನೆ ನೀಡಿದರು. 

ಹಾಕಿ ರಂಗಕ್ಕೆ ಉತ್ತಮ ಆಟಗಾರರನ್ನು ನೀಡಿದ ಹೆಮ್ಮೆ ಕೊಡಗು ಜಿಲ್ಲೆಗಿದ್ದು, ಕ್ರೀಡೆಗಳ ತವರೂರು ಎನ್ನುವ ಖ್ಯಾತಿ ಶಾಶ್ವತವಾಗಿರಲಿ ಎಂದು ಅವರು ಹಾರೈಸಿದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತ ಹಾಕಿ ತಂಡದ ತರಬೇತುದಾರ ಮೈಕೆಲ್ ನಾಬ್ಸ್ ಮಾತನಾಡಿ, ಕೊಡವ ಕುಟುಂಬಗಳ ಹಾಕಿ ಉತ್ಸವದ ಬಗ್ಗೆ ಬಹಳಷ್ಟು ಕೇಳಿದ್ದೆ. ಇದನ್ನು ನೋಡಬೇಕೆನ್ನುವ ಬಯಕೆ ಇಂದು ನನಸಾಯಿತು ಎಂದರು.

ಐಚೆಟ್ಟಿರ ಕುಟುಂಬದ ಮುಖ್ಯಸ್ಥ ಐ.ಪಿ. ಕುಟ್ಟಪ್ಪ, ಸಂಘಟನಾ ಸಮಿತಿಯ ಅಧ್ಯಕ್ಷ ಐ. ಕೆ. ಅನಿಲ್, ಕೊಡವ ಹಾಕಿ ಉತ್ಸವದ ಜನಕ ಪಾಂಡಂಡ ಕುಟ್ಟಪ್ಪ, ಹಾಕಿ ಇಂಡಿಯಾ ಅಧ್ಯಕ್ಷೆ ಮರಿಯಮ್ಮ ಕೋಷಿ ಇತರರು ಭಾಗವಹಿಸಿದ್ದರು. 

ಸಮಾರಂಭದಲ್ಲಿ ಸಂಸದ        ಎಚ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಪತ್ರಕರ್ತ ಎಂ.ಎ. ಪೊನ್ನಪ್ಪ ಇತರರು ಉಪಸ್ಥಿತರಿದ್ದರು.

ರಂಜಿಸಿದ ಪಂದ್ಯ: ಉದ್ಘಾಟನಾ ಸಮಾರಂಭದ ನಿಮಿತ್ತ ಇಂಡಿಯಾ ಇಲೆವೆನ್ ತಂಡ ಹಾಗೂ ಕೂರ್ಗ್ ಇಲೆವೆನ್ ತಂಡಗಳ ನಡುವೆ ಆಯೋಜಿಸಲಾಗಿದ್ದ ಪ್ರದರ್ಶನ ಪಂದ್ಯವು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು.

ಇಂಡಿಯಾ ಇಲೆವನ್ ತಂಡದಲ್ಲಿ ಒಲಿಂಪಿಕ್‌ಗೆ ಆಯ್ಕೆಯಾಗಿರುವ ತಂಡದ ಸದಸ್ಯರು ಆಟವಾಡಿದರೆ ಕೂರ್ಗ್ ಇಲೆವನ್ ತಂಡದಲ್ಲಿ ಕೊಡಗು ಜಿಲ್ಲೆಯ  ಆಟಗಾರರು ಭಾಗವಹಿಸಿದ್ದರು.

ಪಂದ್ಯದ ಮೊದಲಾರ್ಧದಲ್ಲಿ ಕೂರ್ಗ್ ಇಲೆವನ್ ತಂಡದ ಪಾಂಡಂಡ ಎ. ಅಪ್ಪಯ್ಯ ಅವರು ಮೊದಲ ಗೋಲು ದಾಖಲಿಸಿದರು. ಮುಂದಿನ ಕ್ಷಣದಲ್ಲಿಯೇ ಇಂಡಿಯಾ ಇಲೆವನ್ ತಂಡದ ಗುಣಶೇಖರ್ ಗೋಲು ಬಾರಿಸುವ ಮೂಲಕ ಸಮಬಲ ಸಾಧಿಸಿದರು.

ದ್ವಿತೀಯಾರ್ಧದಲ್ಲಿ ಇಂಡಿಯಾ ಇಲೆವನ್ ತಂಡವು ಮೇಲುಗೈ ಸಾಧಿಸಿತು. ಎಸ್.ಕೆ. ಉತ್ತಪ್ಪ ಹಾಗೂ ಶಂಕರ್ ಪಾಟೀಲ ತಲಾ ಒಂದು ಗೋಲು ಗಳಿಸಿದರು. ಈ ಮೂಲಕ ಪಂದ್ಯವನ್ನು 3-1 ಗೋಲುಗಳಿಂದ ಇಂಡಿಯಾ ಇಲೆವನ್ ತನ್ನದಾಗಿಸಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.