ADVERTISEMENT

ಕೊನೆಗೂ ಅಭ್ಯಾಸಕ್ಕಿಳಿದ ಆಟಗಾರರು

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

ಪರ್ತ್ (ಪಿಟಿಐ): ಆಸ್ಟ್ರೇಲಿಯಾ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುವ ನಿಟ್ಟಿನಲ್ಲಿ ಭಾರತ ತಂಡದ ಆಟಗಾರರು ಮಂಗಳವಾರ ಪೂರ್ಣ ಪ್ರಮಾಣದ ಅಭ್ಯಾಸದಲ್ಲಿ ಪಾಲ್ಗೊಂಡರು. ಈ ಮೂಲಕ    ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ಕ್ರೀಡಾಂಗಣದ (ಡಬ್ಲ್ಯುಎಸಿಎ) ಪರಿಸ್ಥಿತಿಗೆ ಹೊಂದಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಸಿಡ್ನಿಯಲ್ಲಿ ನಡೆದ ಎರಡನೇ ಟೆಸ್ಟ್ ಬಳಿಕ ಮಹೇಂದ್ರ ಸಿಂಗ್ ದೋನಿ ಬಳಗ ನೆಟ್ ಪ್ರಾಕ್ಟೀಸ್ ನಡೆಸಿದ್ದು ಇದೇ ಮೊದಲು. ಕಳೆದ ಕೆಲ ದಿನಗಳಿಂದ ಆಟಗಾರರು ಅಂಗಳದಿಂದ ದೂರವುಳಿದಿದ್ದರು. ಇದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಮೂರನೇ ಟೆಸ್ಟ್ ಶುಕ್ರವಾರ ಆರಂಭವಾಗಲಿದೆ. ಸರಣಿಯಲ್ಲಿ 0-2 ರಲ್ಲಿ ಹಿನ್ನಡೆ ಅನುಭವಿಸಿರುವ ಪ್ರವಾಸಿ ತಂಡ ಮರುಹೋರಾಟದ ಕನಸಿನಲ್ಲಿದೆ.

ಭಾರತ ತಂಡದ ಆಟಗಾರರನ್ನು ಡಬ್ಲ್ಯುಎಸಿಎ ಕ್ರೀಡಾಂಗಣದ ಹಸಿರು ಹಾಸಿನ ಪಿಚ್ ಸ್ವಾಗತಿಸಿದೆ. ವಿಶ್ವದ `ಅತ್ಯಂತ ವೇಗ~ದ ಪಿಚ್ ಎಂಬ ಹಿರಿಮೆಯನ್ನು ಇದು ಹೊಂದಿದೆ. ಪಿಚ್ ವೇಗ ಮತ್ತು ಬೌನ್ಸ್‌ಗೆ ನೆರವು ನೀಡಲಿದೆ ಎಂದು ಕ್ಯುರೇಟರ್ ಕ್ಯಾಮರನ್ ಸದರ್ಲೆಂಡ್ ಈಗಾಗಲೇ ಹೇಳಿದ್ದಾರೆ.

ಸಹ ಆಟಗಾರರ ಜೊತೆ ಮಂಗಳವಾರ ಕ್ರೀಡಾಂಗಣಕ್ಕೆ ಆಗಮಿಸಿದ ರಾಹುಲ್ ದ್ರಾವಿಡ್, ಕ್ಯುರೇಟರ್ ಅವರನ್ನುದ್ದೇಶಿಸಿ ಹಾಸ್ಯದ ಧಾಟಿಯಲ್ಲಿ `ಪಿಚ್ ಮೇಲಿರುವ ಹುಲ್ಲನ್ನು ಕತ್ತರಿಸುವಂತೆ ಯಾವುದೇ ಸೂಚನೆ ಬಂದಿಲ್ಲವೇ?~ ಎಂದು ಪ್ರಶ್ನಿಸಿದ್ದಾರೆ. ಈ ಪಂದ್ಯಕ್ಕಾಗಿ ಸಜ್ಜುಗೊಳಿಸಿರುವ ಪಿಚ್ ಪರಿಶೀಲಿಸಿದ ಬಳಿಕ ದ್ರಾವಿಡ್ ಹೀಗೆ ಕೇಳಿದ್ದಾರೆ.

 ಅಭ್ಯಾಸದ ಸಂದರ್ಭ ಭಾರತದ ಬೌಲರ್‌ಗಳು ಹಾಗೂ ನೆಟ್ ಬೌಲರ್‌ಗಳು ಹೊಸ ಚೆಂಡುಗಳನ್ನೇ ಬಳಸಿದರು. ಪ್ರಸಕ್ತ ಸರಣಿಯಲ್ಲಿ ಭಾರತ ಇದೇ ಮೊದಲ ಬಾರಿಗೆ ಇಂತಹ ಹೆಜ್ಜೆಯಿಟ್ಟಿದೆ. ಮೊದಲ ಎರಡು ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳು ಹೊಸ ಚೆಂಡಿನ ದಾಳಿಯಲ್ಲಿ ಭಾರತದ ಬ್ಯಾಟಿಂಗ್‌ನ ಬೆನ್ನೆಲುಬು ಮುರಿ         ದಿದ್ದರು. ಡಬ್ಲ್ಯುಎಸಿಎ ಪಿಚ್‌ನಲ್ಲಿ ಹೊಸ ಚೆಂಡಿನ ದಾಳಿಯನ್ನು ಎದುರಿಸುವುದು ಇನ್ನಷ್ಟು ಕಷ್ಟ. ಈ ಕಾರಣ ಎಲ್ಲ    ಬ್ಯಾಟ್ಸ್‌ಮನ್‌ಗಳು ನೆಟ್ಸ್‌ನಲ್ಲಿ ಹೊಸ ಚೆಂಡನ್ನು ಬಳಸಿ ತಾಲೀಮು ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.