ADVERTISEMENT

ಕೋಚ್ ಆಗುವ ಅಭಿಲಾಷೆಯಿಲ್ಲ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 18:35 IST
Last Updated 16 ಫೆಬ್ರುವರಿ 2011, 18:35 IST

ಕೋಲ್ಕತ್ತ (ಐಎಎನ್‌ಎಸ್): ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆಯಿಂದ ವಿಶ್ವಕಪ್ ಟೂರ್ನಿ ನಂತರ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಒಂದೊಮ್ಮೆ ನಿರ್ಗಮಿಸಿದ ಮೇಲೆ ಆ ಹುದ್ದೆಯನ್ನು ಅಲಂಕರಿಸುವ ಯಾವುದೇ ಯೋಚನೆ ತಮ್ಮ ಮುಂದೆ ಇಲ್ಲ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವಾ ತಿಳಿಸಿದ್ದಾರೆ.

‘ಮಾಧ್ಯಮದ ಗಮನಕ್ಕೆ ಅಷ್ಟಾಗಿ ಬೀಳದಿದ್ದ ಗ್ಯಾರಿ ಕರ್ಸ್ಟನ್ ಕೋಚ್ ಹುದ್ದೆಗೆ ತಕ್ಕ ವ್ಯಕ್ತಿ. ಕೋಚ್ ಮಾಡುವ ವ್ಯಕ್ತಿ ಮತ್ತೆ ಮತ್ತೆ ಸಂದರ್ಶನ ನೀಡುವ ಅನಿವಾರ್ಯತೆ ಒದಗಿದರೆ ಆತನ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಕೋಚ್ ಮಾಡುವುದೂ ತೊಂದರೆದಾಯಕ ಆಗುತ್ತದೆ. ಹಿನ್ನೆಲೆಯಲ್ಲಿ ಇದ್ದುಕೊಂಡು ಕೆಲಸ ಮಾಡುವುದು ಕೋಚ್ ಕೆಲಸ. ಗ್ಯಾರಿ ತಮ್ಮ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ’ ಎಂದು ಸ್ಟೀವಾ ಮೆಚ್ಚುಗೆ ಮಾತುಗಳನ್ನಾಡಿದರು.

‘ಕೆಲವೊಂದು ಆಟಗಾರರಿಗಷ್ಟೇ ಮಾರ್ಗದರ್ಶನ ಮಾಡುವ ಅಭಿಲಾಷೆ ನನ್ನದು. ಆಸ್ಟ್ರೇಲಿಯಾ ಒಲಿಂಪಿಕ್ ತಂಡದ ಕೆಲ ಆಟಗಾರರಿಗೆ ನಾನು ಮಾರ್ಗದರ್ಶನ ಮಾಡುತ್ತಿದ್ದೇನೆ. ಈ ಕೆಲಸ ನನಗೆ ಆನಂದ ನೀಡುತ್ತದೆ. ಭಾರತ ತಂಡದ ಕೋಚ್ ಆಗುವುದು ಸವಾಲಿನ ಕೆಲಸ’ ಎಂದು ಅವರು ಹೇಳಿದರು.

‘ಒಳ್ಳೆಯ ಆಯ್ಕೆಗಳು ಸದಾ ಇರುತ್ತವೆ ಎಂಬುದು ನನ್ನ ಅಭಿಮತ. ಭಾರತದಲ್ಲಿಯೇ ಹಲವು ಜನ ಹಿರಿಯ ಆಟಗಾರರು ಈ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುವ ಅರ್ಹತೆ ಹೊಂದಿದ್ದಾರೆ. ಮಾಧ್ಯಮದಿಂದ ದೂರ ಇರುವ ವ್ಯಕ್ತಿಯೇ ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬಲ್ಲ ಎಂಬುದು ನನ್ನ ಅನಿಸಿಕೆ. ಸೌರವ್ ಗಂಗೂಲಿ ಅಥವಾ ಸ್ಟೀ ವಾ ತರಹದ ಮಾಧ್ಯಮ ಕೇಂದ್ರಿತ ವ್ಯಕ್ತಿಗಳಿಗೆ ಈ ಹುದ್ದೆ ಹೊಂದುವುದಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.