ADVERTISEMENT

ಕೋಲ್ಕತ್ತ ನೈಟ್‌ರೈಡರ್ಸ್‌ಗೆ ಗೆಲುವಿನ ವಿಶ್ವಾಸ

ಇಂದು ಸನ್‌ರೈಸರ್ಸ್ ಹೈದರಾಬಾದ್ ಜೊತೆ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 19:59 IST
Last Updated 13 ಏಪ್ರಿಲ್ 2013, 19:59 IST

ಕೋಲ್ಕತ್ತ (ಪಿಟಿಐ): ಸತತ ಎರಡು ಸೋಲಿನ ನಿರಾಸೆಯೊಂದಿಗೆ ತವರಿನ ಅಂಗಳಕ್ಕೆ ಮರಳಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಐಪಿಎಲ್ ಟ್ವೆಂಟಿ-20 ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಸವಾಲನ್ನು ಎದುರಿಸಲಿದೆ.

ಗೌತಮ್ ಗಂಭೀರ್ ನೇತೃತ್ವದ ರೈಡರ್ಸ್ ತಂಡ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಎದುರು ಜಯ ಸಾಧಿಸಿತ್ತು. ಆ ಬಳಿಕ ಜೈಪುರ ಮತ್ತು ಬೆಂಗಳೂರಿನಲ್ಲಿ ನಡೆದ ಪಂದ್ಯಗಳಲ್ಲಿ ಕ್ರಮವಾಗಿ ರಾಜಸ್ತಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಎದುರು ಪರಾಭವಗೊಂಡಿತ್ತು.

ಇದೀಗ ಮತ್ತೆ ಈಡನ್ ಗಾರ್ಡನ್ಸ್‌ನಲ್ಲಿ ಆಡುವ ಅವಕಾಶ ಪಡೆದ ತಂಡ ಗೆಲುವಿನ ಹಾದಿಗೆ ಮರಳುವ ಪ್ರಯತ್ನದಲ್ಲಿದೆ. ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಶುಕ್ರವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಎದುರು ಗೆಲುವು ಪಡೆದ ಆತ್ಮವಿಶ್ವಾಸದಲ್ಲಿದೆ.

ರೈಡರ್ಸ್ ತಂಡ ಅಂತಿಮ ಇಲೆವೆನ್‌ನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ. ರ‌್ಯಾನ್ ಮೆಕ್‌ಲಾರೆನ್ ಬದಲು ಬ್ರೆಟ್ ಲೀ ಮತ್ತೆ ಆಡುವ ಅವಕಾಶ ಪಡೆಯಬಹುದು. ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಲಮ್ ತಮ್ಮ ಮೊದಲ ಪಂದ್ಯವನ್ನಾಡುವರೇ ಎಂಬುದನ್ನು ನೋಡಬೇಕು.

ಸ್ನಾಯು ಸೆಳೆತದಿಂದ ಬಳಲಿದ್ದ ಮೆಕ್ಲಮ್ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಆದರೆ ಅಂತಿಮ ಇಲೆವೆನ್‌ನಲ್ಲಿ ವಿದೇಶದ ನಾಲ್ಕು ಆಟಗಾರರಿಗೆ ಮಾತ್ರ ಅವಕಾಶವಿರುವ ಕಾರಣ ತಂಡದ ಆಯ್ಕೆ ಗಂಭೀರ್‌ಗೆ ಸವಾಲಾಗಿ ಪರಿಣಮಿಸಲಿದೆ. ವೆಸ್ಟ್ ಇಂಡೀಸ್‌ನ ಸ್ಪಿನ್ನರ್ ಸುನಿಲ್ ನಾರಾಯಣ್ ಆಡುವುದು ಖಚಿತ.

ಹಾಗಾದಲ್ಲಿ ಮೆಕ್ಲಮ್‌ಗೆ ಅವಕಾಶ ನೀಡಬೇಕಾದರೆ ಅನುಭವಿ ಜಾಕ್ ಕಾಲಿಸ್ ಮತ್ತು ಎಯೊನ್ ಮಾರ್ಗನ್ ಅವರಲ್ಲಿ ಒಬ್ಬರನ್ನು ಕೈಬಿಡುವುದು ಅನಿವಾರ್ಯ. ಆಲ್‌ರೌಂಡರ್ ಕಾಲಿಸ್ ಅವರನ್ನು ಕೈಬಿಟ್ಟರೆ, ತಂಡದ ಸಮತೋಲನ ತಪ್ಪಲಿದೆ.

ಡೇಲ್ ಸ್ಟೇನ್, ಇಶಾಂತ್ ಶರ್ಮ ಮತ್ತು ಅಮಿತ್ ಮಿಶ್ರಾ ಅವರನ್ನೊಳಗೊಂಡ ಸನ್‌ರೈಸರ್ಸ್ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಸ್ಟೇನ್ ಅವರಂತೂ ಆಡಿದ ಎಲ್ಲ ಪಂದ್ಯಗಳಲ್ಲೂ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದಾರೆ.

ಆದರೆ ಸನ್‌ರೈಸರ್ಸ್ ತಂಡ ಬ್ಯಾಟಿಂಗ್‌ನಲ್ಲಿ ಇದುವರೆಗೆ ಸುಧಾರಿತ ಪ್ರದರ್ಶನ ನೀಡಿಲ್ಲ. ಈ ಹಿಂದಿನ ಪಂದ್ಯದಲ್ಲಿ ಡೇರ್‌ಡೆವಿಲ್ಸ್ ನೀಡಿದ್ದ 115 ರನ್‌ಗಳ ಗುರಿಯನ್ನು ಬೆನ್ನಟ್ಟಲು ಸಾಕಷ್ಟು ಪರಿಶ್ರಮಪಟ್ಟಿತ್ತು. ನಾಯಕ ಕುಮಾರ ಸಂಗಕ್ಕಾರ ಒಳಗೊಂಡಂತೆ ಯಾವುದೇ ಬ್ಯಾಟ್ಸ್‌ಮನ್ ದೊಡ್ಡ ಮೊತ್ತ ಪೇರಿಸಿಲ್ಲ.

ಕೋಲ್ಕತ್ತ ನೈಟ್‌ರೈಡರ್ಸ್- ಸನ್‌ರೈಸರ್ಸ್ ಹೈದರಾಬಾದ್
ಸ್ಥಳ: ಕೋಲ್ಕತ್ತ,
ಪಂದ್ಯದ ಆರಂಭ: ಸಂಜೆ 4.00ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.