ADVERTISEMENT

ಕೌಂಟಿ ಪಂದ್ಯಗಳಲ್ಲಿ ಮೋಸದಾಟ; ತನಿಖೆಗೆ ಮುಂದಾದ ಐಸಿಸಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ಲಂಡನ್ (ಪಿಟಿಐ): ಅಂತರರಾಷ್ಟ್ರೀಯ ಹಾಗೂ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ಪಂದ್ಯಗಳಲ್ಲಿ ಭಾರತದ ಬುಕ್ಕಿಗಳು ಮೋಸದಾಟದಲ್ಲಿ ತೊಡಗಿದ್ದಾರೆ ಎಂದು ಪತ್ರಿಕೆಯೊಂದು ಮಾಡಿರುವ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ತನಿಖೆಗೆ ಮುಂದಾಗಿದೆ.

`ಸಂಡೇ ಟೈಮ್ಸ~ ತನ್ನ ತನಿಖಾ ವರದಿಯಲ್ಲಿ ಮೋಸದಾಟಕ್ಕೆ ಸಂಬಂಧಿಸಿದ ಕೆಲವು ವಿವರಗಳನ್ನು ಬಹಿರಂಗಪಡಿಸಿತ್ತು. `ಬುಕ್ಕಿಗಳು ಆಟಗಾರರಿಗೆ ದೊಡ್ಡ ಮೊತ್ತದ ಹಣ ನೀಡುತ್ತಿದ್ದಾರೆ. ನಿಧಾನಗತಿಯಲ್ಲಿ ರನ್ ಗಳಿಸಿದರೆ ಬ್ಯಾಟ್ಸ್‌ಮನ್‌ಗೆ 44,000ಕ್ಕೂ ಅಧಿಕ ಪೌಂಡ್, ತನ್ನ ಓವರ್‌ನಲ್ಲಿ ಅಧಿಕ ರನ್ ಬಿಟ್ಟುಕೊಟ್ಟ ಬೌಲರ್‌ಗೆ 50,000 ಪೌಂಡ್, ಪಂದ್ಯದ ಫಲಿತಾಂಶವನ್ನು ಮೊದಲೇ ನಿರ್ಧರಿಸುವ ಆಟಗಾರ ಅಥವಾ ತಂಡದ ಅಧಿಕಾರಿಗೆ 7,50,000 ಪೌಂಡ್ ಮೊತ್ತವನ್ನು ನೀಡಲಾಗುತ್ತದೆ~ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಕಳೆದ ವರ್ಷ ನಡೆದ ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯವೂ ಸಹ ಫಿಕ್ಸ್ ಆಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. `ಫಿಕ್ಸಿಂಗ್ ವ್ಯವಹಾರ ನಡೆಸಲು ಕೌಂಟಿ ಕ್ರಿಕೆಟ್ ಅತ್ಯುತ್ತಮ ಮಾರುಕಟ್ಟೆ ಎಂದು ದೆಹಲಿ ಮೂಲದ ಬುಕ್ಕಿಯೊಬ್ಬರು ಹೇಳಿದ್ದಾರೆ.
 
ಕೌಂಟಿ ಪಂದ್ಯಗಳನ್ನು ಯಾರೂ ಅಷ್ಟೊಂದು ಸೂಕ್ಷ್ಮವಾಗಿ ಗಮನಿಸುವುದಿಲ್ಲ. ಈ ಕಾರಣ ಯಾವುದೇ ಸಮಸ್ಯೆ ಇಲ್ಲದ ಹಾಗೆ ವ್ಯವಹಾರ ನಡೆಸಬಹುದು. ಇಲ್ಲಿ ಹೆಚ್ಚಿನ ರಿಸ್ಕ್ ಇಲ್ಲದೆ ಹಣ ಸಂಪಾದಿಸಬಹುದೆಂಬುದು ಬುಕ್ಕಿಯ ಹೇಳಿಕೆ~ ಎಂದು ವರದಿಯಲ್ಲಿ ಬರೆಯಲಾಗಿತ್ತು.

ತನಿಖಾ ವರದಿಯ ವೇಳೆ ತನಗೆ ಲಭಿಸಿದ ಎಲ್ಲಾ ಮಾಹಿತಿಗಳನ್ನು ಪತ್ರಿಕೆಯು ಐಸಿಸಿಗೆ ಕಳುಹಿಸಿ ಕೊಟ್ಟಿದೆ. ಆದ್ದರಿಂದ ಐಸಿಸಿ ಈಗ ತನಿಖೆಗೆ ಮುಂದಾಗಿದೆ. `ಮಾಹಿತಿ ನೀಡಿದ್ದಕ್ಕೆ ಪತ್ರಿಕೆಗೆ ಅಭಿನಂದನೆಗಳು. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ತನಿಖೆ ಕೂಡಾ ನಡೆಸುತ್ತೇವೆ. ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ತನಿಖೆ ನಡೆಸಿದರೆ ಸತ್ಯ ಹೊರಬೀಳಲಿದೆ~ ಎಂದು ಐಸಿಸಿ ವಕ್ತಾರರೊಬ್ಬರು ತಿಳಿಸಿದ್ದಾರೆ.

ಎಸೆಕ್ಸ್ ತಂಡದ ಬೌಲರ್ ಮೆರ್ವಿನ್ ವೆಸ್ಟ್‌ಫೀಲ್ಡ್ ಇತ್ತೀಚೆಗೆ ಮೋಸದಾಟ ಪ್ರಕರಣದಲ್ಲಿ ಜೈಲು ಸೇರಿದ್ದರು. ಅವರು 2009ರಲ್ಲಿ ನಡೆದ ಪಂದ್ಯವೊಂದರಲ್ಲಿ ಹಣ ಪಡೆದು ಮೋಸದಾಟ ನಡೆಸಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.