ಡರ್ಬನ್ (ಎಎಫ್‌ಪಿ): ಕೊನೆಯ ಓವರ್‌ನಲ್ಲಿ ಎರಡು ಸಿಕ್ಸರ್ ಸಿಡಿಸಿದ ಬ್ರಾಡ್ ಹಾಡ್ಜ್ (ಔಟಾಗದೆ 21, 8ಎ., 1ಬೌಂ., 2 ಸಿ.,) ಅವರ ಅಬ್ಬರದ ಬ್ಯಾಟಿಂಗ್‌್ ಬಲದಿಂದ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟ್ವೆಂಟಿ–20 ಕ್ರಿಕೆಟ್ ಪಂದ್ಯದಲ್ಲಿ ಐದು ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತು.
ಕಿಂಗ್ಸ್‌ಮೇಡ್‌್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಆದ್ದರಿಂದ 20 ಓವರ್‌ಗಳ ಪಂದ್ಯವನ್ನು 7 ಓವರ್‌ಗೆ ಕಡಿತಗೊಳಿಸಲಾಯಿತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 7 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 80 ರನ್ ಕಲೆ ಹಾಕಿತು. ಆಸೀಸ್ ಎರಡು ಎಸೆತಗಳು ಬಾಕಿ ಇರುವಂತೆಯೇ ಐದು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ರೋಚಕ ಕೊನೆಯ ಓವರ್: ಜಾರ್ಜ್ ಬೇಲಿ ಸಾರಥ್ಯದ ಆಸೀಸ್‌್ ತಂಡಕ್ಕೆ ಗೆಲುವು ಪಡೆಯಲು ಕೊನೆಯ ಓವರ್‌ನಲ್ಲಿ 15 ರನ್ ಅಗತ್ಯವಿತ್ತು. ಹಾಡ್ಜ್ ಎರಡು ಸಿಕ್ಸರ್‌್ ಸೇರಿದಂತೆ 13ರನ್ ಕಲೆ ಹಾಕಿದರೆ, ಬ್ರಾಡ್ ಹಡಿನ್ ಒಂದು ರನ್ ಗಳಿಸಿದರು. ಎರಡು ಎಸೆತಗಳು ಬಾಕಿ ಇದ್ದಾಗ ಆಸೀಸ್ ಜಯಕ್ಕೆ ಒಂದು ರನ್ ಅಗತ್ಯವಿತ್ತು. ವೇಯ್ನ್ ಪಾರ್ನೆಲ್ ಐದನೇ ಎಸೆತವನ್ನು ವೈಡ್ ಹಾಕಿದರು. ಇದರಿಂದ ಆಫ್ರಿಕಾ ನಿರಾಸೆಗೆ ಒಳಗಾದರೆ, ಆಸೀಸ್‌್ ಜಯದ ನಗೆ ಚೆಲ್ಲಿತು.
ಸ್ಕೋರು ವಿವರ: ದಕ್ಷಿಣ ಆಫ್ರಿಕಾ 7 ಓವರ್‌ಗಳಲ್ಲಿ 1 ವಿಕೆಟ್‌ಗೆ 80. (ಹಾಶಿಮ್ ಆಮ್ಲಾ 4, ಕ್ವಿಂಟನ್ ಡಿ. ಕ್ಲಾಕ್ ಔಟಾಗದೆ 41, ಫಾಫ್ ಡು ಪ್ಲೆಸಿಸ್ ಔಟಾಗದೆ 27). ಆಸ್ಟ್ರೇಲಿಯಾ 6.4 ಓವರ್‌ಗಳಲ್ಲಿ 5 ವಿಕೆಟ್‌ಗೆ 81. (ಡೇವಿಡ್ ವಾರ್ನರ್ 40, ಬ್ರಾಡ್ ಹಾಡ್ಜ್ ಔಟಾಗದೆ 21; ವೇಯ್ನ್ ಪಾರ್ನೆಲ್ 17ಕ್ಕೆ1, ಜೆ.ಪಿ. ಡುಮಿನಿ 5ಕ್ಕೆ2). ಫಲಿತಾಂಶ: ಆಸ್ಟ್ರೇಲಿಯಾಕ್ಕೆ 5 ವಿಕೆಟ್ ಜಯ ಹಾಗೂ ಮೂರು ಪಂದ್ಯಗಳ ಸರಣಿಯಲ್ಲಿ 1–0ರಲ್ಲಿ ಮುನ್ನಡೆ. ಪಂದ್ಯ ಶ್ರೇಷ್ಠ: ಬ್ರಾಡ್ ಹಾಡ್ಜ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.