ADVERTISEMENT

ಕ್ರಿಕೆಟ್: ಏರ್ ಇಂಡಿಯಾ ಗೆಲುವಿನ ಫೇವರಿಟ್

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಏರ್ ಇಂಡಿಯಾ ತಂಡದವರು ಮಂಗಳವಾರ ಇಲ್ಲಿ ನಡೆಯಲಿರುವ ಬಿಸಿಸಿಐ ಕಾರ್ಪೊರೇಟ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ತಂಡವನ್ನು ಎದುರಿಸಲಿದ್ದಾರೆ.

ಈ ಪಂದ್ಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ವಿ.ವಿ.ಎಸ್.ಲಕ್ಷ್ಮಣ್ ಆಡುವ ನಿರೀಕ್ಷೆ ಇದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಬಳಿಕ ಸ್ವದೇಶಕ್ಕೆ ಹಿಂತಿರುಗಿರುವ ಅವರು ಸೋಮವಾರ ಇಲ್ಲಿ ಅಭ್ಯಾಸ ನಡೆಸಿದರು. ಈ ಪಂದ್ಯ ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದೆ.

ಈ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯಬೇಕಿತ್ತು. ಆದರೆ ಮಳೆ ಕಾರಣ ಇಲ್ಲಿಗೆ ಸ್ಥಳಾಂತರಿಸಲಾಗಿದೆ. ನಾಯಕ ಹೃಷಿಕೇಶ್ ಕಾನಿಟ್ಕರ್ ಸಾರಥ್ಯದ ಏರ್ ಇಂಡಿಯಾ ಗೆಲುವಿನ ಫೇವರಿಟ್ ಎನಿಸಿದೆ.

ಈ ತಂಡದಲ್ಲಿ ರಾಬಿನ್ ಉತ್ತಪ್ಪ, ಪಾಲ್ ವಲ್ತಾಟಿ, ಮೊಹಮ್ಮದ್ ಕೈಫ್ ಇದ್ದಾರೆ. ಲಕ್ಷ್ಮಣ್ ಆಗಮನ ಮತ್ತಷ್ಟು ಬಲ ನೀಡಿದೆ. ಐಒಸಿ ತಂಡದಲ್ಲಿ ಅಂತಹ ದೊಡ್ಡ ಹೆಸರುಗಳು ಇಲ್ಲ. ವಾಸೀಮ್ ಜಾಫರ್, ಪಿನಾಲ್ ಷಾ ಹಾಗೂ ರವಿಕಾಂತ್ ಶುಕ್ಲಾ ಅವರ ಮೇಲೆ ಈ ತಂಡ ನಂಬಿಕೆ ಇಟ್ಟಿದೆ.

ಈ ಪಂದ್ಯದಲ್ಲಿ ಗೆದ್ದವರು ಫೈನಲ್‌ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೈದರಾಬಾದ್ ತಂಡವನ್ನು ಎದುರಿಸಲಿದ್ದಾರೆ. ಈ ತಂಡದವರು ಸೋಮವಾರ ಚೆನ್ನೈನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ 108 ರನ್‌ಗಳಿಂದ ಸಿಎಜಿ ಎದುರು ಗೆಲುವು ಸಾಧಿಸಿದ್ದಾರೆ.

ಆಲ್‌ರೌಂಡ್ ಪ್ರದರ್ಶನ ನೀಡಿದ ಟಿ. ಸುಮನ್ (109 ರನ್ ಹಾಗೂ 37ಕ್ಕೆ 3) ಅವರು ಎಸ್‌ಬಿಐ, ಹೈದರಾಬಾದ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.