ADVERTISEMENT

ಕ್ರಿಕೆಟ್: ಕುಸಿದ ಭಾರತಕ್ಕೆ ಮಹಿ ಆಸರೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2010, 7:25 IST
Last Updated 18 ಡಿಸೆಂಬರ್ 2010, 7:25 IST
ಕ್ರಿಕೆಟ್: ಕುಸಿದ ಭಾರತಕ್ಕೆ ಮಹಿ ಆಸರೆ
ಕ್ರಿಕೆಟ್: ಕುಸಿದ ಭಾರತಕ್ಕೆ ಮಹಿ ಆಸರೆ   

ಸೆಂಚೂರಿಯನ್: ಮಾತಿನಲ್ಲಿ ಮಾತ್ರ ‘ಮಹಾವೀರ’ರಾಗಿದ್ದ ಭಾರತದವರ ಬಣ್ಣವು ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಟೆಸ್ಟ್‌ನ ಮೊದಲ ದಿನವೇ ಬಯಲಾಯಿತು. ‘ಶಾರ್ಟ್ ಬಾಲ್’ಗೆ ಅಂಜುವುದಿಲ್ಲ ಎಂದು ಹೇಳಿದವರೆಲ್ಲ ಹೀಗೆ ಬಂದು ಹಾಗೆ ಹೋದರು!

ಆತಿಥೇಯ ವೇಗಿಗಳಿಗೆ ಆಕ್ರಮಣಕಾರಿ ಆಟದ ಉತ್ತರ ನೀಡುವ ಉತ್ಸಾಹದ ನುಡಿಮುತ್ತುಗಳನ್ನು ಪೋಣಿಸಿದ್ದ ನಾಯಕ ಮಹೇಂದ್ರ ಸಿಂಗ್ ದೋನಿ (ಬ್ಯಾಟಿಂಗ್ 33; 47 ಎ., 2 ಬೌಂಡರಿ, 2 ಸಿಕ್ಸರ್ ) ಹಾಗೂ ಸಚಿನ್ ತೆಂಡೂಲ್ಕರ್ (36; 61 ನಿ., 34 ಎ., 8 ಬೌಂಡರಿ) ಅವರದ್ದು ಮಾತ್ರ ಸ್ವಲ್ಪ ಉತ್ತಮ ಎನ್ನುವಂಥ ಆಟ. ಹರಭಜನ್ ಸಿಂಗ್ ಮತ್ತು ದ್ರಾವಿಡ್ ಅವರದ್ದು ತಂಡಕ್ಕೆ ಅಳಿಲು ಸೇವೆ.


ಗ್ರೇಮ್ ಸ್ಮಿತ್ ನಾಯಕತ್ವದ ಪಡೆಯನ್ನು ಅದರದೇ ನೆಲದಲ್ಲಿ ಎದುರಿಸಿ, ದಿಟ್ಟ ಆಟವಾಡುವುದು ಕಷ್ಟವೆನ್ನುವ ಕ್ರಿಕೆಟ್ ಪಂಡಿತರ ಭವಿಷ್ಯವಾಣಿಯನ್ನು ಸುಳ್ಳಾಗಿಸುವ ‘ಛಲ’ ಭಾರತಕ್ಕಿದೆ ಎನ್ನುವ ಆಸೆಯ ಹಕ್ಕಿಯು ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ಗುರುವಾರವೇ ರೆಕ್ಕೆ ಮುರಿದುಕೊಂಡು ಬಿತ್ತು.


‘ಟಾಸ್’ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತದವರು ಇಲ್ಲಿನ ಅಂಗಳದಲ್ಲಿ ಕಂಗಳಿಗೆ ಹಿತವಾಗುವಂತೆ ಬ್ಯಾಟ್ ಬೀಸಲೇ ಇಲ್ಲ. ಯುವಕರು ಮಾತ್ರವಲ್ಲ ಅನುಭವಿಗಳೂ ಡ್ರೆಸಿಂಗ್ ಕೋಣೆಗೆ ಹಿಂದಿರುಗಲು ಅವಸರ ತೋರಿದರು. ಮಳೆಯ ಕಾರಣ ತಡವಾಗಿ ಆರಂಭವಾದ ಮೊದಲ ದಿನದ ಆಟಕ್ಕೆ ಮಂದ ಬೆಳಕಿನ ಕಾರಣ ಬೇಗ ತೆರೆ  ಬಿತ್ತು. ಆ ಹೊತ್ತಿಗೆ 38.1 ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡು ಭಾರತ ಗಳಿಸಿದ್ದು 136 ರನ್ ಮಾತ್ರ.

ADVERTISEMENT


ದಕ್ಷಿಣ ಆಫ್ರಿಕಾ ಪರ ಹೊಸ ಚೆಂಡಿನೊಂದಿಗೆ ದಾಳಿ ನಡೆಸಿದ ಡೆಲ್ ಸ್ಟೇನ್ ಹಾಗೂ ಮಾರ್ನ್ ಮಾರ್ಕೆಲ್ ಅವರು ಪ್ರವಾಸಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ದುಸ್ವಪ್ನವಾದರು. ಪುಟಿದೇಳುವ ಚೆಂಡನ್ನು ದಂಡಿಸುವ ಧೈರ್ಯವನ್ನು ‘ಮಹಿ’ ಕೂಡ ಮಾಡಲಿಲ್ಲ!


ಭಾರತಕ್ಕೆ ಮೊದಲ ದಿನದ ಸಂತಸವೆಂದರೆ 148ನೇ ಟೆಸ್ಟ್ ಆಡುತ್ತಿರುವ ದ್ರಾವಿಡ್ ತಮ್ಮ ಈ 254 ಇನಿಂಗ್ಸ್‌ನಲ್ಲಿ 14 ರನ್ ಗಳಿಸುವುದರೊಂದಿಗೆ ಟೆಸ್ಟ್ ಕ್ರಿಕೆಟ್ ಜೀವನದ ಒಟ್ಟು ರನ್ ಗಳಿಕೆಯನ್ನು 11957 ಆಗಿಸಿಕೊಂಡಿದ್ದು. ಅದರೊಂದಿಗೆ ಅವರು ಟೆಸ್ಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರು. ಈ ಪಂದ್ಯದಲ್ಲಿ ಹನ್ನೊಂದನೇ ರನ್ ಗಳಿಸುತ್ತಿದ್ದಂತೆಯೇ ‘ಗೋಡೆ’ ಖ್ಯಾತಿಯ ಬ್ಯಾಟ್ಸ್‌ಮನ್ ಮಹತ್ವದ ಮೈಲಿಗಲ್ಲೊಂದನ್ನು ದಾಟಿ ನಿಂತರು.


ವೆಸ್ಟ್ ಇಂಡೀಸ್ ತಂಡದ ಬ್ರಯನ್ ಲಾರಾ (11953 ರನ್) ಅವರನ್ನು ಹಿಂದೆ ಹಾಕಿದ ಶ್ರೇಯಕ್ಕೆ ಡ್ರಾವಿಡ್ ಪಾತ್ರರಾದರು. ಸಚಿನ್ ತೆಂಡೂಲ್ಕರ್ (14402) ಹಾಗೂ ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಂಟಿಂಗ್ (12332) ಅವರು ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿದ್ದಾರೆ.

  ಸ್ಕೋರು ವಿವರ
ಭಾರತ: ಮೊದಲ ಇನಿಂಗ್ಸ್ 38.1 ಓವರುಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 136
ಗೌತಮ್ ಗಂಭೀರ್ ಸಿ ಪಾಲ್ ಹ್ಯಾರಿಸ್ ಬಿ ಮಾರ್ನ್ ಮಾರ್ಕೆಲ್  05
ವೀರೇಂದ್ರ ಸೆಹ್ವಾಗ್ ಸಿ ಹಾಶೀಮ್ ಆಮ್ಲಾ ಬಿ ಡೆಲ್ ಸ್ಟೇನ್  00
ರಾಹುಲ್ ದ್ರಾವಿಡ್ ಎಲ್‌ಬಿಡಬ್ಲ್ಯು ಬಿ ಮಾನ್ ಮಾರ್ಕೆಲ್  14
ಸಚಿನ್ ತೆಂಡೂಲ್ಕರ್ ಎಲ್‌ಬಿಡಬ್ಲ್ಯು ಬಿ ಡೆಲ್ ಸ್ಟೇನ್  36
ವಿ.ವಿ.ಎಸ್.ಲಕ್ಷ್ಮಣ್ ಬಿ ಡೆಲ್ ಸ್ಟೇನ್  07
ಸುರೇಶ್ ರೈನಾ ಸಿ ಪ್ರಿನ್ಸ್ ಬಿ ಜಾಕ್ ಕಾಲಿಸ್  01
ಮಹೇಂದ್ರ ಸಿಂಗ್ ದೋನಿ ಬ್ಯಾಟಿಂಗ್  33
ಹರಭಜನ್ ಸಿಂಗ್ ರನ್‌ಔಟ್ (ಅಲ್ವಿರೊ ಪೀಟರ್ಸನ್/ಬೌಷರ್)  27
ಇಶಾಂತ್ ಶರ್ಮ ಸಿ ಜಾಕ್ ಕಾಲಿಸ್ ಬಿ ಮಾರ್ನ್ ಮಾರ್ಕೆಲ್  00
ಎಸ್.ಶ್ರೀಶಾಂತ್ ಸಿ ಡೆಲ್ ಸ್ಟೇನ್ ಬಿ ಮಾರ್ನ್ ಮಾರ್ಕೆಲ್  00
ಜೈದೇವ್ ಉನದ್ಕಟ್ ಬ್ಯಾಟಿಂಗ್  01
ಇತರೆ: (ಲೆಗ್‌ಬೈ-6, ವೈಡ್-3, ನೋಬಾಲ್-3) 12
ವಿಕೆಟ್ ಪತನ: 1-1 (ವೀರೇಂದ್ರ ಸೆಹ್ವಾಗ್; 2.1); 2-24 (ಗೌತಮ್ ಗಂಭೀರ್; 12.6); 3-27 (ರಾಹುಲ್ ದ್ರಾವಿಡ್; 14.4); 4-66 (ವಿ.ವಿ.ಎಸ್.ಲಕ್ಷ್ಮಣ್; 22.2); 5-67 (ಸುರೇಶ್ ರೈನಾ; 23.1); 6-71 (ಸಚಿನ್ ತೆಂಡೂಲ್ಕರ್; 24.4); 7-110 (ಹರಭಜನ್ ಸಿಂಗ್; 32.1); 8-110 (ಇಶಾಂತ್ ಶರ್ಮ; 32.3); 9-116 (ಎಸ್.ಶ್ರೀಶಾಂತ್; 34.5).
ಬೌಲಿಂಗ್: ಡೆಲ್ ಸ್ಟೇನ್ 10-1-34-3 (ವೈಡ್-1), ಮಾರ್ನ್ ಮಾರ್ಕೆಲ್ 12.1-5-20-4 (ನೋಬಾಲ್-3), ಲಾನ್‌ವಾಬೊ ತ್ಸೊತ್ಸೊಬೆ 9-2-50-0 (ವೈಡ್-1), ಜಾಕ್ ಕಾಲಿಸ್ 6-1-20-1 (ವೈಡ್-1), ಪಾಲ್ ಹ್ಯಾರಿಸ್ 1-0-6-0   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.