ADVERTISEMENT

ಕ್ರಿಕೆಟ್‌ ದಂತಕತೆ ಬ್ರಾಡ್ಮನ್‌ ದಾಖಲೆ ಮುರಿದು ‘ಡಾನ್‌’ ಆಗಲಿದ್ದಾರೆ ಸ್ಟೀವ್‌ ಸ್ಮಿತ್‌!

ಏಜೆನ್ಸೀಸ್
Published 19 ಜನವರಿ 2018, 16:22 IST
Last Updated 19 ಜನವರಿ 2018, 16:22 IST
ಇಂಗ್ಲೆಂಡ್ ವಿರುದ್ಧದ ಮೂರನೇ ಆ್ಯಷಸ್ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ದಾಖಲಿಸಿದ ಬಳಿಕ ಸ್ಟೀವ್ ಸ್ಮಿತ್‌  ಸಂಭ್ರಮಿಸಿದ ಪರಿ– ರಾಯಿಟರ್ಸ್‌ ಚಿತ್ರ
ಇಂಗ್ಲೆಂಡ್ ವಿರುದ್ಧದ ಮೂರನೇ ಆ್ಯಷಸ್ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ದಾಖಲಿಸಿದ ಬಳಿಕ ಸ್ಟೀವ್ ಸ್ಮಿತ್‌ ಸಂಭ್ರಮಿಸಿದ ಪರಿ– ರಾಯಿಟರ್ಸ್‌ ಚಿತ್ರ   

ಪರ್ತ್‌: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಸ್ಟೀವ್‌ ಸ್ಮಿತ್‌ ಅವರು ಕ್ರಿಕೆಟ್‌ ದಂತಕತೆ ಸರ್‌ ಡಾನ್‌ ಬ್ರಾಡ್ಮನ್‌ ಅವರ ವಿಶ್ವದಾಖಲೆಯನ್ನು ಮುರಿಯುವತ್ತ ಮುನ್ನಡೆದಿದ್ದಾರೆ.

ವಿಶ್ವ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಅತಿಹೆಚ್ಚು ರೇಟಿಂಗ್‌ ಪಾಯಿಂಟ್ಸ್‌ ಕಲೆಹಾಕಿದ ದಾಖಲೆ ಬ್ಯಾಟಿಂಗ್‌ ದಿಗ್ಗಜ ಆಸ್ಟ್ರೇಲಿಯಾದ ಬ್ರಾಡ್ಮನ್‌ ಹೆಸರಿನಲ್ಲಿದೆ. ಅವರು 961 ರೇಟಿಂಗ್‌ ಪಾಯಿಂಟ್‌ ಕಲೆ ಹಾಕಿದ್ದರು. ಈ ದಾಖಲೆಗೆ ಸನಿಹದಲ್ಲಿರುವ ಸ್ಟೀವ್‌ ಸ್ಮಿತ್‌ ಕೇವಲ 16 ಪಾಯಿಂಟ್‌ಗಳಿಂದ ಹಿಂದಿದ್ದಾರೆ.

(ಸರ್‌ ಡಾನ್‌ ಬ್ರಾಡ್ಮನ್‌, ರಾಯಿಟರ್ಸ್‌ ಚಿತ್ರ)

ADVERTISEMENT

ಇಂಗ್ಲೆಂಡ್‌ ವಿರುದ್ಧದ ಆ್ಯಷಸ್‌ ಟೆಸ್ಟ್‌ ಸರಣಿಯಲ್ಲೂ ತಮ್ಮ ಅದ್ಭುತ ಪ್ರದರ್ಶನ ಮುಂದುವರಿಸಿರುವ ಸ್ಮಿತ್‌ ಮೂರನೇ ಟೆಸ್ಟ್‌ನಲ್ಲಿ 239ರನ್‌ ಗಳಿಸಿದ್ದರು. ಇದರ ನೆರವಿನಿಂದ ಅವರು 945 ರೇಟಿಂಗ್‌ ಪಾಯಿಂಟ್ಸ್‌ ಕಲೆ ಹಾಕಿದ್ದು, ಸಾರ್ವಕಾಲಿಕ ಅತಿಹೆಚ್ಚು ರೇಟಿಂಗ್‌ ಪಾಯಿಂಟ್ಸ್‌ ಕಲೆಹಾಕಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಸರ್‌ ಲಿಯೋನಾರ್ಡ್‌ ಹಟನ್‌ ಜತೆ ಎರಡನೇ ಸ್ಥಾನದ ಹಂಚಿಕೊಂಡಿದ್ದಾರೆ.

ಕಳೆದ ಹನ್ನೆರಡು ತಿಂಗಳಿನಲ್ಲಿ ಸ್ಮಿತ್‌ ಅವರ ಕನಿಷ್ಠ ರೇಟಿಂಗ್‌ ಪಾಯಿಂಟ್ಸ್‌ 918. ಇದು ಪ್ರಸ್ತುತ ಎರಡನೇ ಸ್ಥಾನದಲ್ಲಿರುವ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಇದಕ್ಕಿಂತಲೂ 25 ಪಾಯಿಂಟ್ಸ್‌ ಹಿಂದಿದ್ದಾರೆ. ಕೊಹ್ಲಿಗಿಂತ ಒಟ್ಟು 52 ಪಾಯಿಂಟ್ಸ್‌ನಿಂದ ಮುಂದಿರುವ ಸ್ಮಿತ್‌ ಟೆಸ್ಟ್‌ ಕ್ರಿಕೆಟ್‌ನ ಅಗ್ರಸ್ಥಾನದಲ್ಲಿ ವಿರಾಜಮಾನವಾಗಿ ಮುಂದುವರಿದಿದ್ದಾರೆ.

ಉಳಿದಂತೆ ಭಾರತದ ಚೇತೇಶ್ವರ ಪೂಜಾರ(873), ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸ್‌(855), ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್‌(852) ಕ್ರಮವಾಗಿ 3, 4, 5ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ನವೆಂಬರ್‌ 30, 1928 ರಂದು ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಬ್ರಾಡ್ಮನ್‌ ಆಗಸ್ಟ್‌ 14, 1948ರಲ್ಲಿ ನಿವೃತ್ತಿ ಹೊಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.