ADVERTISEMENT

ಕ್ರಿಕೆಟ್: ಮೈಕಲ್ ಕ್ಲಾರ್ಕ್ ಆಸೀಸ್ ನಾಯಕ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2011, 19:00 IST
Last Updated 30 ಮಾರ್ಚ್ 2011, 19:00 IST
ಕ್ರಿಕೆಟ್: ಮೈಕಲ್ ಕ್ಲಾರ್ಕ್ ಆಸೀಸ್ ನಾಯಕ
ಕ್ರಿಕೆಟ್: ಮೈಕಲ್ ಕ್ಲಾರ್ಕ್ ಆಸೀಸ್ ನಾಯಕ   

ಸಿಡ್ನಿ (ಐಎಎನ್‌ಎಸ್): ಮೈಕಲ್ ಕ್ಲಾರ್ಕ್ ಅವರು ಆಸ್ಟ್ರೇಲಿಯಾದ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡದ ನೂತನ ನಾಯಕರಾಗಿ ನೇಮಕಗೊಂಡಿದ್ದಾರೆ. ರಿಕಿ ಪಾಂಟಿಂಗ್ ಅವರ ಉತ್ತರಾಧಿಕಾರಿಯಾಗಿ ಕ್ಲಾರ್ಕ್ ಆಯ್ಕೆ ನಡೆದಿದೆ. ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಅವರನ್ನು ಟೆಸ್ಟ್ ಹಾಗೂ ಏಕದಿನ ತಂಡದ ಉಪನಾಯಕನಾಗಿ ನೇಮಕ ಮಾಡಲಾಗಿದೆ. ಕ್ಯಾಮರೂನ್ ವೈಟ್ ಅವರು ಟ್ವೆಂಟಿ-20 ತಂಡದ ನಾಯಕರಾಗಿ ಮುಂದುವರಿಯುವರು. ವ್ಯಾಟ್ಸನ್ ಈ ತಂಡಕ್ಕೂ ಉಪನಾಯಕರಾಗಿದ್ದಾರೆ.

ಶನಿವಾರ 30ನೇ ಹುಟ್ಟುಹಬ್ಬ ಆಚರಿಸಲಿರುವ ಕ್ಲಾರ್ಕ್ ಅವರ ಮುಂದಿರುವ ಮೊದಲ ಸವಾಲು ಬಾಂಗ್ಲಾದೇಶ ಪ್ರವಾಸ. ಆಸೀಸ್ ತಂಡ ಮೂರು ಏಕದಿನ ಪಂದ್ಯಗಳನ್ನಾಡಲು ಇದೇ ವಾರ ಬಾಂಗ್ಲಾ ಪ್ರವಾಸ ಕೈಗೊಳ್ಳಲಿದೆ.300ಕ್ಕೂ ಅಧಿಕ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಆಸೀಸ್ ತಂಡವನ್ನು ಮುನ್ನಡೆಸಿದ್ದ ಪಾಂಟಿಂಗ್ ಮಂಗಳವಾರ ನಾಯಕಸ್ಥಾನ ತ್ಯಜಿಸಿದ್ದರು. ಆದರೆ ಬಾಂಗ್ಲಾ ಪ್ರವಾಸ ಕೈಗೊಳ್ಳುವ    ತಂಡದಲ್ಲಿ ಅವರು ಇದ್ದಾರೆ.

ತಂಡದಲ್ಲಿ ಪಾಂಟಿಂಗ್ ಅವರ ಅನುಪಸ್ಥಿತಿ ತನ್ನ ಮೇಲೆ ಯಾವುದೇ ಒತ್ತಡ ಹೇರದು ಎಂದು ಕ್ಲಾರ್ಕ್ ತಿಳಿಸಿದ್ದಾರೆ. ‘ಆಸೀಸ್ ತಂಡವನ್ನು ಮುನ್ನಡೆಸುವ ಅವಕಾಶ ಲಭಿಸಿದ್ದ ಹೆಮ್ಮೆಯ ವಿಚಾರ. ರಿಕಿ ಅವರು ನಾಯಕತ್ವ ತ್ಯಜಿಸಿದ್ದು ಅಚ್ಚರಿ ಉಂಟುಮಾಡಿದೆ. ನಾಯಕನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ರಿಕಿ ನನಗೆ ಅನುವು ಮಾಡಿಕೊಡುವ ವಿಶ್ವಾಸವಿದೆ. ಬಾಂಗ್ಲಾ ಪ್ರವಾಸ ನನಗೆ ಎದುರಾಗುವ ಮೊದಲ ಪರೀಕ್ಷೆ’ ಎಂದು ಅವರ ನುಡಿದಿದ್ದಾರೆ.

‘ನಾನು ಯಾವ ರೀತಿಯಲ್ಲಿ ಕೆಲಸ ನಿರ್ವಹಿಸುತ್ತೇನೆ ಹಾಗೂ ಏನನ್ನು ನಿರೀಕ್ಷಿಸುವೆ ಎಂಬುದರ ಅರಿವು ತಂಡದ ಎಲ್ಲ ಆಟಗಾರರಿಗೆ ಇದೆ’ ಎಂದು ಕ್ಲಾರ್ಕ್ ತಿಳಿಸಿದರು.
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ 26 ರಷ್ಟು ಮಂದಿ ಮಾತ್ರ ಕ್ಲಾರ್ಕ್ ಅವರು ಆಸೀಸ್ ತಂಡದ ನಾಯಕನಾಗಬೇಕು ಎಂದಿದ್ದರು. ವ್ಯಾಟ್ಸನ್‌ಗೆ ನಾಯಕತ್ವ ನೀಡಬೇಕೆಂದು ಹೆಚ್ಚಿನವರು ಒಲವು ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.