ADVERTISEMENT

ಕ್ರೀಡಾ ಪ್ರಾಧಿಕಾರಕ್ಕೆ ಅಗ್ರಸ್ಥಾನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2013, 19:59 IST
Last Updated 10 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಭಾರತ ಕ್ರೀಡಾ ಪ್ರಾಧಿಕಾರ ‘ಎ’ ತಂಡ ಕೆಎಸ್‌ಎಚ್‌ಎ ಮಹಿಳಾ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ನ ‘ಬಿ’ ಗುಂಪಿಯಲ್ಲಿ ಅಗ್ರಸ್ಥಾನ ಪಡೆದು ಎರಡನೇ ಹಂತಕ್ಕೆ ಪ್ರವೇಶ ಗಿಟ್ಟಿಸಿತು.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ಈ ಟೂರ್ನಿ ನಡೆಯುತ್ತಿದೆ. ನಾಲ್ಕು ಪಂದ್ಯಗಳನ್ನಾಡಿರುವ ಕ್ರೀಡಾ ಪ್ರಾಧಿಕಾರ 9 ಪಾಯಿಂಟ್‌ ಕಲೆ ಹಾಕಿ ಅಗ್ರಸ್ಥಾನ ಗಳಿಸಿತು. ಹುಬ್ಬಳ್ಳಿಯ ವಾಸು ಕ್ಲಬ್‌ ಮತ್ತು ಆರ್‌ಡಿಟಿ ಕ್ಲಬ್‌ ಕೂಡಾ ತಲಾ 9 ಪಾಯಿಂಟ್‌ಗಳನ್ನು ಹೊಂದಿವೆ. ಆದರೆ, ಗೋಲು ಗಳಿಕೆಯ ಆಧಾರದ ಮೇಲೆ ಅಗ್ರಸ್ಥಾನ ಕ್ರೀಡಾ ಪ್ರಾಧಿಕಾರದ ಪಾಲಾಯಿತು.

ವೈಇಎಸ್‌ಡಿ ‘ಎ’ ತಂಡ ‘ಎ‘ ಗುಂಪಿನಲ್ಲಿ ಏಳು ಪಾಯಿಂಟ್‌ಗಳಿಂದ ಮೊದಲ ಸ್ಥಾನ ಪಡೆದಿದೆ. ಭಾರತ ಕ್ರೀಡಾ ಪ್ರಾಧಿಕಾರ ‘ಬಿ’ ತಂಡ ಎರಡನೇ ಸ್ಥಾನ ಗಳಿಸಿ ಎರಡನೇ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿತು. ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ಎರಡನೇ ಹಂತದಲ್ಲಿ ಆಡಲಿವೆ.

ಡಿವೈಎಸ್‌ಎಸ್‌ ‘ಎ’, ಭಾರತ ಕ್ರೀಡಾ ಪ್ರಾಧಿಕಾರ ‘ಎ’ ಮತ್ತು ‘ಬಿ’ ತಂಡಗಳು, ವಾಸು ಕ್ಲಬ್‌ ಮುಂದಿನ ಹಂತ ಪ್ರವೇಶಿಸಿವೆ. ಈ ಹಂತದ ಪಂದ್ಯಗಳು ಬುಧವಾರದಿಂದ ಆರಂಭವಾಗಲಿವೆ.

ಡಿವೈಎಸ್‌ಸಿ ತಂಡಕ್ಕೆ ಜಯ: ಮಂಗಳವಾರ ನಡೆದ ಕೊನೆಯ ಲೀಗ್‌ ಪಂದ್ಯದಲ್ಲಿ ಡಿವೈಎಸ್‌ಸಿ ‘ಬಿ’ ತಂಡ 17–0 ಗೋಲುಗಳಿಂದ ಬಿಸಿವೈಎ ಎದುರು ಗೆಲುವು ಪಡೆದು ತನ್ನ ಹೋರಾಟವನ್ನು ಕೊನೆಗೊಳಿಸಿತು.

ಐಎಸ್‌ಆರ್‌ಒಗೆ ಗೆಲುವು: ಪುರುಷರ ‘ಸಿ’ ಡಿವಿಷನ್‌ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಐಎಸ್‌ಆರ್ಒ ತಂಡ 7–1 ಗೋಲುಗಳಿಂದ ಅಶೋಕ ಕ್ಲಬ್‌ ಎದುರು ಗೆಲುವಿನ ನಗೆ ಚೆಲ್ಲಿತು.

ವಿಜಯೀ ತಂಡದ ಪ್ರವೀಣ್‌ 6ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಈ ಆಟಗಾರ 11, 40 ಮತ್ತು 45ನೇ ನಿಮಿಷದಲ್ಲಿ ಮೂರು ಗೋಲು ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು. ಉಳಿದ ಗೋಲುಗಳನ್ನು ಸೋಮು (34ನೇ ನಿ.), ಆ್ಯಂಬರ್‌ಸನ್‌ (42ನೇ ನಿ.) ಗಳಿಸಿದರೆ, 49ನೇ ನಿಮಿಷದಲ್ಲಿ ಏಳನೇ ಗೋಲು ‘ಉಡುಗೊರೆ’ಯಾಗಿ ಲಭಿಸಿತು. ಬುಧವಾರ ‘ಸಿ’ ಡಿವಿಷನ್ ್ ಪಂದ್ಯಗಳು ನಡೆಯುವುದಿಲ್ಲ.

ಮಹಿಳಾ ಹಾಕಿ ಲೀಗ್‌ನ ಬುಧವಾರದ ಪಂದ್ಯಗಳು: ವಾಸು ಕ್ಲಬ್‌– ಡಿವೈಇಎಸ್‌ ‘ಎ’ (ಬೆಳಿಗ್ಗೆ 9.30) ಮತ್ತು ಭಾರತ ಕ್ರೀಡಾ ಪ್ರಾಧಿಕಾರ ‘ಎ– ಕ್ರೀಡಾ ಪ್ರಾಧಿಕಾರ ‘ಬಿ’ (10.30ಕ್ಕೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.