ADVERTISEMENT

ಕ್ವಾರ್ಟರ್‌ಗೆ ಮರ್ರೆ–ನಿಶಿಕೋರಿ

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ; ಸಿಮೊನಾ ಹಲೆಪ್‌, ಎಲಿನಾ ಗೆಲುವಿನ ಓಟ

ಏಜೆನ್ಸೀಸ್
Published 5 ಜೂನ್ 2017, 19:30 IST
Last Updated 5 ಜೂನ್ 2017, 19:30 IST
ಜಪಾನಿನ ಕೀ ನಿಶಿಕೋರಿ
ಜಪಾನಿನ ಕೀ ನಿಶಿಕೋರಿ   

ಪ್ಯಾರಿಸ್‌ (ರಾಯಿಟರ್ಸ್‌/ಎಎಫ್‌ಪಿ): ಬ್ರಿಟನ್‌ನ ಆಟಗಾರ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಆ್ಯಂಡಿ ಮರ್ರೆ ಮತ್ತು ಜಪಾನ್‌ನ ಕೀ ನಿಶಿಕೋರಿ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.

ಸೋಮವಾರ ನಡೆದ ನಾಲ್ಕನೇ ಸುತ್ತಿನ ಹಣಾಹಣಿಯಲ್ಲಿ ಮರ್ರೆ 6–3, 6–4, 6–4ರಲ್ಲಿ ರಷ್ಯಾದ ಕರೆನ್‌ ಕಚಾನೊವ್‌ ಅವರನ್ನು ಪರಾಭವಗೊಳಿಸಿದರು. ಈ ಮೂಲಕ ಫ್ರೆಂಚ್‌ ಓಪನ್‌ನಲ್ಲಿ ಏಳನೇ ಬಾರಿ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟ ಸಾಧನೆ ಮಾಡಿದರು.

ಮೊದಲ ಮೂರು ಸುತ್ತಿನ ಪಂದ್ಯಗಳಲ್ಲಿ ಬಲಿಷ್ಠ ಆಟಗಾರರನ್ನು ಮಣಿಸಿ ವಿಶ್ವಾಸ ಹೆಚ್ಚಿಸಿಕೊಂಡಿದ್ದ ಮರ್ರೆ ಅವರು ಕಚಾನೊವ್‌ ವಿರುದ್ಧವೂ ಮಿಂಚಿನ ಆಟದ ಮೂಲಕ ಗಮನ ಸೆಳೆದರು.

ADVERTISEMENT

ಮೊದಲ ಸೆಟ್‌ನ ಆರು ಗೇಮ್‌ಗಳಲ್ಲಿ ಮರ್ರೆ, ರಷ್ಯಾದ ಆಟಗಾರನಿಂದ ಪ್ರಬಲ ಪೈಪೋಟಿ ಎದುರಿಸಿದರು. ಆ ನಂತರ ಬ್ರಿಟನ್‌ನ ಆಟಗಾರ ಅಂಗಳಲ್ಲಿ ಮಿಂಚು ಹರಿಸಿದರು.

ಏಳನೇ ಗೇಮ್‌ನಲ್ಲಿ ಮರ್ರೆ ತಮ್ಮ ಸರ್ವ್‌ ಉಳಿಸಿಕೊಂಡು ಮುನ್ನಡೆ ಪಡೆದರು. ಈ ಹಂತದಲ್ಲಿ ಒತ್ತಡಕ್ಕೆ ಒಳಗಾದಂತೆ ಕಂಡ ಕರೆನ್‌ ಎಂಟನೇ ಗೇಮ್‌ನಲ್ಲಿ ಸರ್ವ್‌ ಕೈಚೆಲ್ಲಿದರು. ಒಂಬತ್ತನೇ ಗೇಮ್‌ನಲ್ಲಿ ಮತ್ತೆ ಪಾರಮ್ಯ ಮೆರೆದ ಮರ್ರೆ ನಿರಾಯಾಸವಾಗಿ ಸೆಟ್‌ ಗೆದ್ದುಕೊಂಡರು.

ಆರಂಭಿಕ ನಿರಾಸೆಯಿಂದ ಕಚಾನೊವ್‌ ಎಳ್ಳಷ್ಟೂ ಅಂಜಲಿಲ್ಲ. ಎರಡನೇ ಸೆಟ್‌ನಲ್ಲಿ ದಿಟ್ಟ ಆಟ ಆಡಿದ ಅವರು ಎದುರಾಳಿಗೆ ತಿರುಗೇಟು ನೀಡುವ ಮುನ್ಸೂಚನೆ ನೀಡಿದ್ದರು. ಆದರೆ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ದಲ್ಲಿರುವ ಮರ್ರೆ ಆಕ್ರಮಣಕಾರಿ ಆಟ ಆಡಿ ಎದುರಾಳಿಯ ಗೆಲುವಿನ ಕನಸಿಗೆ ತಣ್ಣೀರು ಸುರಿದರು.

ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲೂ ಮರ್ರೆ ಆಟ ರಂಗೇರಿತು. ಬ್ರಿಟನ್‌ನ ಆಟಗಾರ ಶರವೇಗದ ಸರ್ವ್‌ ಹಾಗೂ ಬಲಿಷ್ಠ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಅಭಿಮಾನಿ ಗಳನ್ನು ರಂಜಿಸಿದರು.

ಇನ್ನೊಂದೆಡೆ ರಷ್ಯಾದ ಕರೆನ್‌ ಕೂಡ ಗರ್ಜಿಸಿದರು. ಹೀಗಾಗಿ ಎಂಟನೇ ಗೇಮ್‌ ಗಳವರೆಗೂ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತು. ಆ ನಂತರ ಮರ್ರೆ ಇನ್ನಷ್ಟು ಚುರುಕಿನ ಆಟಕ್ಕೆ ಒತ್ತು ನೀಡಿದರು. ಅವರ ರ್‍ಯಾಕೆಟ್‌ನಿಂದ ಸಿಡಿಯುತ್ತಿದ್ದ ಸರ್ವ್‌ಗಳನ್ನು ಹಿಂತಿರುಗಿಸಲು ಪ್ರಯಾಸ ಪಟ್ಟ ಕಚಾನೊಚ್‌ ಗೇಮ್‌ ಕೈಚೆಲ್ಲಿ ಸೋಲಿಗೆ ಶರಣಾದರು.

ನಿಶಿಕೋರಿ ಮಿಂಚು: ನಾಲ್ಕನೇ ಸುತ್ತಿನ ಇನ್ನೊಂದು ಹೋರಾಟದಲ್ಲಿ ಜಪಾನ್‌ನ ಕೀ ನಿಶಿಕೋರಿ ಮಿಂಚಿದರು. ಅವರು 0–6, 6–4, 6–4, 60ರಲ್ಲಿ ಸ್ಪೇನ್‌ನ ಅನುಭವಿ ಆಟಗಾರ ಫರ್ನಾಂಡೊ ವರ್ಡಾಸ್ಕೊ ಅವರನ್ನು ಮಣಿಸಿದರು.

ಈ ಮೂಲಕ ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗಳಲ್ಲಿ ಏಳನೇ ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು. ಇಲ್ಲಿ ಎಂಟನೇ ಶ್ರೇಯಾಂಕ ಹೊಂದಿರುವ ನಿಶಿಕೋರಿ ಆರಂಭಿಕ ಸೆಟ್‌ನಲ್ಲಿ ನಿರಾಸೆ ಕಂಡರು. ಇದರಿಂದ ಅಂಜದ ಅವರು ನಂತರದ ಮೂರೂ ಸೆಟ್‌ಗಳಲ್ಲಿ ಛಲದಿಂದ ಹೋರಾಡಿ ಗೆಲುವಿನ ತೋರಣ ಕಟ್ಟಿದರು.

ಕ್ವಾರ್ಟರ್ ಫೈನಲ್‌ಗೆ ಹಲೆಪ್: ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ರುಮೇನಿಯಾದ ಸಿಮೊನಾ ಹಲೆಪ್‌ ಅವರು ಎಂಟರ ಘಟ್ಟ ಪ್ರವೇಶಿಸಿದರು.
ನಾಲ್ಕನೇ ಸುತ್ತಿನ ಹಣಾಹಣಿಯಲ್ಲಿ ಮೂರನೇ ಶ್ರೇಯಾಂಕಿತೆ ಹಲೆಪ್‌ 6–1, 6–1ರ ನೇರ ಸೆಟ್‌ಗಳಿಂದ ಸ್ಪೇನ್‌ನ ಕಾರ್ಲಾ ಸ್ವಾರೆಜ್‌ ನವಾರೊ ಅವರನ್ನು ಸೋಲಿಸಿದರು. ಇನ್ನೊಂದು ಪಂದ್ಯದಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ 4–6, 6–3, 7–5ರಲ್ಲಿ ಕ್ರೊವೇಷ್ಯಾದ ಪೆಟ್ರಾ ಮಾರ್ಟಿಕ್‌ ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.