ಬಾಸೆಲ್ (ಪಿಟಿಐ): ಭಾರತದ ಪಿ.ಕಶ್ಯಪ್ ಇಲ್ಲಿ ನಡೆಯುತ್ತಿರುವ ₨ 77.5 ಲಕ್ಷ ಬಹುಮಾನ ಮೊತ್ತದ ಸ್ವಿಟ್ಜರ್‌ಲೆಂಡ್ ಗ್ರ್ಯಾನ್ ಪ್ರಿ ಗೋಲ್ಡ್ ಟೂರ್ನಿಯ ಪುರುಷರ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು. ಮೂರನೇ ಶ್ರೇಯಾಂಕದ ಆಟಗಾರ ಕಶ್ಯಪ್ ತಮ್ಮ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 21–23, 21–9, 21–14ರಲ್ಲಿ ಮಲೇಷ್ಯಾದ ಬರಿನೊ ಜಿಯಾನ್ ಜೆ ವಾಂಗ್ ಎದುರು ಗೆಲುವು ಸಾಧಿಸಿದರು. ಈ ಹೋರಾಟ 57 ನಿಮಿಷ ನಡೆಯಿತು.
19ನೇ ರ್‍ಯಾಂಕ್‌ನ ಕಶ್ಯಪ್ ಮೊದಲ ಗೇಮ್‌ನಲ್ಲಿ ಮುಗ್ಗರಿಸಿದರು. ರೋಚಕ ಹೋರಾಟಕ್ಕೆ ಕಾರಣವಾದ ಈ ಗೇಮ್‌ನಲ್ಲಿ ಮಲೇಷ್ಯಾದ ಆಟಗಾರ ಅಂತಿಮ ಕ್ಷಣದಲ್ಲಿ ಹಿಡಿತ ಸಾಧಿಸಿದರು. ಆದರೆ ನಂತರದ ಗೇಮ್‌ನಲ್ಲಿ ಪಾರಮ್ಯ ಸಾಧಿಸಿದ್ದು ಕಶ್ಯಪ್. ಆರಂಭದಿಂದಲೇ ಅವರು ಮುನ್ನಡೆ ಕಾಯ್ದುಕೊಂಡರು.
ನಿರ್ಣಾಯಕ ಗೇಮ್‌ನಲ್ಲಿ ವಾಂಗ್ ಒಂದು ಹಂತದಲ್ಲಿ 10–5ರಲ್ಲಿ ಮುನ್ನಡೆ ಸಾಧಿಸಿದ್ದರು. ಆಗ ತಿರುಗೇಟು ನೀಡಿದ 27 ವರ್ಷ ವಯಸ್ಸಿನ ಕಶ್ಯಪ್ 11–11 ಸಮಬಲ ಸಾಧಿಸಿದರು. ಆ ಬಳಿಕ 14–13ರಲ್ಲಿ ಮುನ್ನಡೆ ಗಳಿಸಿದರು. ಈ ಹಂತದಲ್ಲಿ ಹೈದರಾಬಾದ್‌ನ ಆಟಗಾರ ಸತತ ಆರು ಪಾಯಿಂಟ್ ತಮ್ಮದಾಗಿಸಿ ಕೊಂಡರು. ಹಾಗಾಗಿ 20–13ರಲ್ಲಿ ಮುನ್ನಡೆ ಕಾಯ್ದುಕೊಂಡರು. ನಂತರ ಮತ್ತೊಂದು ಪಾಯಿಂಟ್ ಗೆದ್ದು ಎಂಟರ ಘಟ್ಟದಲ್ಲಿ ಆಡಲು ಅರ್ಹತೆ ಗಿಟ್ಟಿಸಿದರು.
ಕಶ್ಯಪ್ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವ ರ್‍ಯಾಂಕ್‌ನಲ್ಲಿ 22ನೇ ಸ್ಥಾನದಲ್ಲಿರುವ ಟಿಯಾನ್ ಚೆನ್ ಚೌ ಅವರನ್ನು ಎದುರಿಸಲಿದ್ದಾರೆ. ಕಶ್ಯಪ್ 2011ರ ಮಕಾವು ಓಪನ್‌ನಲ್ಲಿ ಚೀನಾ ತೈಪೆಯ ಟಿಯಾನ್ ಅವರನ್ನು ಮಣಿಸಿದ್ದರು.
ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಈಗಾಗಲೇ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಸೈನಾ ನಾಲ್ಕರ ಘಟ್ಟದ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ಚೀನಾದ ಯಿಹಾನ್ ವಾಂಗ್ ಅವರ ಸವಾಲು ಎದುರಿಸಲಿದ್ದಾರೆ. ಸಿಂಧು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿಚೀನಾದ ಶಿಕ್ಸಿಯಾನ್ ವಾಂಗ್ ಎದುರು ಆಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.