ADVERTISEMENT

ಕ್ವಾರ್ಟರ್ ಫೈನಲ್‌ಗೆ ಸೈನಾ

ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಗುರುಸಾಯಿದತ್, ಸೌರವ್‌ಗೆ ಸೋಲು

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 19:59 IST
Last Updated 13 ಜೂನ್ 2013, 19:59 IST

ಜಕಾರ್ತ (ಪಿಟಿಐ/ಐಎಎನ್‌ಎಸ್): ಹಾಲಿ ಚಾಂಪಿಯನ್ ಕೂಡ ಆಗಿರುವ ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಇಂಡೊನೇಷ್ಯಾ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಇಸ್ಟೋರಾ ಗೆಲೋರಾ ಬಂಗ್ ಕರ್ನೊ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಸೈನಾ 21-13, 21-19ರಲ್ಲಿ ಜಪಾನ್‌ನ ಸಯಾಕಾ ತಕಾಹಾಶಿ ಅವರನ್ನು ಪರಾಭವಗೊಳಿಸಿದರು. ಈ ಹೋರಾಟ 39 ನಿಮಿಷ ನಡೆಯಿತು.

ಮೊದಲ ಗೇಮ್‌ನ ಆರಂಭದಲ್ಲಿ ಸೈನಾ ಅವರಿಗೆ ಸಾಕಷ್ಟು ಪೈಪೋಟಿ ಎದುರಾಯಿತು. ಇದರಲ್ಲಿ ಸೈನಾ 14-13ರಲ್ಲಿ ಮುನ್ನಡೆ ಹೊಂದಿದ್ದರು. ಆದರೆ ನಂತರ ಸತತ ಏಳು ಪಾಯಿಂಟ್ ಗೆದ್ದು ಗೇಮ್ ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನಲ್ಲಿ ವಿಶ್ವ ಎರಡನೇ ರ‍್ಯಾಂಕ್‌ನ ಸೈನಾ ಅವರಿಗೆ ಸಾಕಷ್ಟು ಪ್ರತಿರೋಧ ವ್ಯಕ್ತವಾಯಿತು. ಈ ಗೇಮ್ ಒಂದು ಹಂತದಲ್ಲಿ 12-12ರಲ್ಲಿ ಸಮಬಲವಾಗಿತ್ತು. ಅಷ್ಟು ಮಾತ್ರವಲ್ಲದೇ ಸತತ ಮೂರು ಪಾಯಿಂಟ್ ಗೆದ್ದ ಜಪಾನ್ ಆಟಗಾರ್ತಿ 15-12ರಲ್ಲಿ ಮುನ್ನಡೆದಿದ್ದರು.

ಆಗ ತಿರುಗೇಟು ನೀಡಿದ ಸೈನಾ 18-18 ಸಮಬಲಕ್ಕೆ ಕಾರಣರಾದರು. ಆ ಬಳಿಕ ಮೂರು ಪಾಯಿಂಟ್ ಗೆದ್ದು ಪಂದ್ಯ ಜಯಿಸಿದರು. ಸೈನಾ ಮುಂದಿನ ಪಂದ್ಯದಲ್ಲಿ ಸ್ಪೇನ್‌ನ ಕರೊಲಿನಾ ಮರಿನ್ ಅವರನ್ನು ಎದುರಿಸಲಿದ್ದಾರೆ.

ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಗುರುಸಾಯಿದತ್ 21-12, 9-21, 21-19ರಲ್ಲಿ ಜಪಾನ್‌ನ ಕಜುಮಸಾ ಸಕಾಯ್ ಎದುರು ಗೆಲುವು ಸಾಧಿಸಿ ಎಂಟರ ಘಟ್ಟ ತಲುಪಿದರು. ಮೊದಲ ಗೇಮ್‌ನಲ್ಲಿ ಸುಲಭವಾಗಿ ಗೆಲುವು ಸಾಧಿಸಿದ್ದ ಅವರು ಎರಡನೇ ಗೇಮ್‌ನಲ್ಲಿ ಆಘಾತ ಅನುಭವಿಸಿದರು. ಆದರೆ ತಕ್ಷಣವೇ ಚೇತರಿಸಿಕೊಂಡ ಭಾರತದ ಆಟಗಾರ ನಿರ್ಣಾಯಕ ಗೇಮ್‌ನ ಮೇಲೆ ಹಿಡಿತ ಸಾಧಿಸಿದರು.

ಆದರೆ ಸೌರವ್ ವರ್ಮ ಎರಡನೇ ಸುತ್ತಿನ ಪಂದ್ಯದಲ್ಲಿ 16-21, 6-21ರಲ್ಲಿ ಇಂಡೊನೇಷ್ಯಾದ ಪೆಂಗ್ಯೂ ಡು ಎದುರು ಸೋಲು ಕಂಡರು.

ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಪರಾಭವಗೊಂಡರು. ಮಿಶ್ರ     ಡಬಲ್ಸ್‌ನಲ್ಲಿ ತರುಣ್ ಕೋನಾ ಜೊತೆಗೂಡಿ ಆಡುತ್ತಿರುವ ಅವರು 14-21, 21-17, 13-21ರಲ್ಲಿ ಪೋಲೆಂಡ್‌ನ ರಾಬರ್ಟ್ ಮೆಟುಸಿಯಾಕ್ ಹಾಗೂ ನದಿಡಾ ಜಿಯೆಬಾ ಎದುರು ಸೋಲು ಕಂಡರು. ಡಬಲ್ಸ್‌ನಲ್ಲಿ ಪ್ರದ್ಯಾ ಗಾದ್ರೆ ಜೊತೆಗೂಡಿ ಆಡಿದ ಅಶ್ವಿನಿ 13-21, 19-21ರಲ್ಲಿ ಇಂಡೊನೇಷ್ಯಾದ ಅನೆಕಾ ಫಿನ್ಯಾ-ಡೆಲ್ಲಾ ಡೆಸ್ಟಿಯಾರ ಹ್ಯಾರಿಸ್ ಎದುರು ಆಘಾತ ಅನುಭವಿಸಿದರು.

ರ‍್ಯಾಂಕಿಂಗ್‌ನಲ್ಲಿ ಮೇಲೇರಿಕೆ: ಅಜಯ್ ಜಯರಾಮ್ (25ನೇ ರ‍್ಯಾಂಕ್) ಹಾಗೂ ಗುರುಸಾಯಿದತ್ (23) ರ‍್ಯಾಂಕಿಂಗ್‌ನಲ್ಲಿ ಮೇಲೇರಿದ್ದಾರೆ. ಆದರೆ ಸೈನಾ (2ನೇ ರ‍್ಯಾಂಕ್), ಪಿ.ವಿ.ಸಿಂಧು (11ನೇ ರ‍್ಯಾಂಕ್) ಹಾಗೂ ಪಿ.ಕಶ್ಯಪ್ (10ನೇ ರ‍್ಯಾಂಕ್) ಅವರು ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.