ADVERTISEMENT

ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ ಭಾರತ

ಪಿಟಿಐ
Published 6 ಏಪ್ರಿಲ್ 2018, 19:30 IST
Last Updated 6 ಏಪ್ರಿಲ್ 2018, 19:30 IST
ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ ಭಾರತ
ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ ಭಾರತ   

ಗೋಲ್ಡ್‌ ಕೋಸ್ಟ್‌ (ಪಿಟಿಐ): ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಗುರಿ ಹೊಂದಿರುವ ಭಾರತ ಬ್ಯಾಡ್ಮಿಂಟನ್‌ ತಂಡ ಈ ಹಾದಿಯಲ್ಲಿ ಭರವಸೆಯ ಹೆಜ್ಜೆ ಇಟ್ಟಿದೆ.

ಮಿಶ್ರ ತಂಡ ವಿಭಾಗದಲ್ಲಿ ಭಾರತ ‘ಹ್ಯಾಟ್ರಿಕ್‌’ ಜಯದೊಂದಿಗೆ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಕ್ಯಾರರಾ ಕ್ರೀಡಾ ಸಂಕೀರ್ಣದ ಎರಡನೆ ಅಂಗಳದಲ್ಲಿ ಶುಕ್ರವಾರ ನಡೆದ ‘ಎ’ ಗುಂಪಿನ ಹಣಾಹಣಿಯಲ್ಲಿ ಭಾರತ 5–0ರಿಂದ ಸ್ಕಾಟ್ಲೆಂಡ್‌ ತಂಡವನ್ನು ಸೋಲಿಸಿತು.

ADVERTISEMENT

ಗುರುವಾರ ನಡೆದಿದ್ದ ಹೋರಾಟಗಳಲ್ಲಿ ಭಾರತ ತಂಡ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ಸವಾಲು ಮೀರಿ ನಿಂತಿತ್ತು.

ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿದ್ದ ಸೈನಾ ನೆಹ್ವಾಲ್‌ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಗೆದ್ದು ಭಾರತಕ್ಕೆ 1–0ರ ಮುನ್ನಡೆ ತಂದುಕೊಟ್ಟರು.

ಸೈನಾ 21–14, 21–12ರಲ್ಲಿ ಸ್ಕಾಟ್ಲೆಂಡ್‌ನ ಜೂಲಿ ಮ್ಯಾಕ್‌ಫೆರ್ಸನ್‌ ಅವರನ್ನು ಪರಾಭವಗೊಳಿಸಿದರು.

ಹಿಂದಿನ ಎರಡು ಪಂದ್ಯಗಳಲ್ಲಿ ಗೆದ್ದು ವಿಶ್ವಾಸ ಹೆಚ್ಚಿಸಿಕೊಂಡಿದ್ದ ಸೈನಾ, ಆರಂಭಿಕ ಗೇಮ್‌ನಲ್ಲಿ ಎದುರಾಳಿಯಿಂದ ಅಲ್ಪ ‍ಪ್ರತಿರೋಧ ಎದುರಿಸಿದರು. ಹೀಗಾಗಿ 14–14ರ ಸಮಬಲ ಕಂಡುಬಂತು. ನಂತರ ಚುರುಕಿನ ಡ್ರಾಪ್‌ ಮತ್ತು ಆಕರ್ಷಕ ಸರ್ವ್‌ಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿದ ಅವರು ಸುಲಭವಾಗಿ ಮ್ಯಾಕ್‌ಫೆರ್ಸನ್‌ ಸವಾಲು ಮೀರಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ ಸೈನಾ, ಎರಡನೇ ಗೇಮ್‌ನಲ್ಲಿ ಪರಾಕ್ರಮ ಮೆರೆದರು. ಚುರುಕಿನ ಡ್ರಾಪ್‌ಗಳ ಮೂಲಕ ಪಾಯಿಂಟ್ಸ್‌ ಸಂಗ್ರಹಿಸಿದ ಅವರು 11–5ರ ಮುನ್ನಡೆ ಪಡೆದರು. ನಂತರ ಸತತ ಐದು ಪಾಯಿಂಟ್ಸ್‌ ಗಳಿಸಿ ಮುನ್ನಡೆಯನ್ನು 16–5ಕ್ಕೆ ಹೆಚ್ಚಿಸಿಕೊಂಡರು.

ಬಳಿಕ ಬಲಿಷ್ಠ ಹಿಂಗೈ ಮತ್ತು ಮುಂಗೈ ಹೊಡೆತಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದ ಅವರು ನಿರಾಯಾಸವಾಗಿ ಜಯದ ತೋರಣ ಕಟ್ಟಿದರು.

ಪುರುಷರ ಸಿಂಗಲ್ಸ್‌ನಲ್ಲಿ ಕಣಕ್ಕಿಳಿದಿದ್ದ ಶ್ರೀಕಾಂತ್‌ ಕೂಡ ಮೋಡಿ ಮಾಡಿದರು. ಕೂಟದಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಶ್ರೀಕಾಂತ್‌ 21–18, 21–2ರಲ್ಲಿ ಕೀರನ್‌ ಮೆರಿಲೀಸ್‌ ವಿರುದ್ಧ ಗೆದ್ದರು.

ಮೊದಲ ಗೇಮ್‌ನಲ್ಲಿ ಉಭಯ ಆಟಗಾರರು ತುರುಸಿನ ಪೈಪೋಟಿ ನಡೆಸಿದರು. ಕೀರನ್‌ 4–1ರ ಮುನ್ನಡೆ ಪಡೆದರು. ನಂತರ ಅವರು ಚುರುಕಿನ ಆಟ ಆಡಿ ಮುನ್ನಡೆಯನ್ನು 8–5ಕ್ಕೆ ಹೆಚ್ಚಿಸಿಕೊಂಡರು. ಈ ಹಂತದಲ್ಲಿ ಕೆಚ್ಚೆದೆಯಿಂದ ಹೋರಾಡಿದ ಶ್ರೀಕಾಂತ್‌ ಚುರುಕಾಗಿ ಪಾಯಿಂಟ್ಸ್‌ ಗಳಿಸಿ 21ನೇ ನಿಮಿಷದಲ್ಲಿ ಗೇಮ್‌ ಜಯಿಸಿದರು.

ಎರಡನೇ ಗೇಮ್‌ನಲ್ಲಿ ಶ್ರೀಕಾಂತ್‌ ಆಕ್ರಮಣಕಾರಿ ಆಟ ಆಡಿದರು. ಶುರುವಿನಿಂದಲೇ ಪಾಯಿಂಟ್ಸ್‌ ಸಂಗ್ರಹಿಸುತ್ತಾ ಸಾಗಿದ ಅವರು ಏಕಪಕ್ಷೀಯವಾಗಿ ಪಂದ್ಯ ಗೆದ್ದರು. ಶ್ರೀಕಾಂತ್‌ 10 ನಿಮಿಷಗಳಲ್ಲಿ ಎರಡನೇ ಗೇಮ್‌ ಜಯಿಸಿದರು.

ಮಹಿಳೆಯರ ಡಬಲ್ಸ್‌ನಲ್ಲಿ ಅಂಗಳಕ್ಕಿಳಿದಿದ್ದ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ 21–8, 21–12ರಲ್ಲಿ ಕರ್ಸ್ಟಿ ಗಿಲ್‌ಮೌರ್‌ ಮತ್ತು ಎಲೀನರ್‌ ಒ ಡೊನೆಲ್‌ ವಿರುದ್ಧ ವಿಜಯಿಯಾದರು.

ಇದರೊಂದಿಗೆ 3–0ರ ಮುನ್ನಡೆ ಗಳಿಸಿದ ಭಾರತ ತಂಡ ಗೆಲುವಿನ ಹಾದಿ ಸುಗಮ ಮಾಡಿಕೊಂಡಿತು.

ಪುರುಷರ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗಗಳಲ್ಲೂ ಭಾರತ ಮೇಲುಗೈ ಸಾಧಿಸಿತು.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ 21–16, 21–19ರಲ್ಲಿ ಪ್ಯಾಟ್ರಿಕ್‌ ಮಾಚುಂಗ್‌ ಮತ್ತು ಆ್ಯಡಮ್‌ ಹಾಲ್‌ ಅವರನ್ನು ಸೋಲಿಸಿದರು.

ಮಿಶ್ರ ಡಬಲ್ಸ್‌ನಲ್ಲಿ ಆಡಿದ ಪ್ರಣವ್‌ ಜೆರಿ ಚೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ 21–17, 21–15ರಲ್ಲಿ ಮಾರ್ಟಿನ್‌ ಕ್ಯಾಂಪ್‌ಬೆಲ್‌ ಮತ್ತು ಜೂಲಿ ಮ್ಯಾಕ್‌ಫೆರ್ಸನ್‌ ಅವರ ಸವಾಲು ಮೀರಿ ನಿಂತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.