ADVERTISEMENT

ಗಲ್ಲಿಗಲ್ಲಿಯಲ್ಲೂ ಮೃತ ಆಟಗಾರನಿಗೆ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 19:30 IST
Last Updated 22 ಮಾರ್ಚ್ 2012, 19:30 IST
ಗಲ್ಲಿಗಲ್ಲಿಯಲ್ಲೂ ಮೃತ ಆಟಗಾರನಿಗೆ ಶ್ರದ್ಧಾಂಜಲಿ
ಗಲ್ಲಿಗಲ್ಲಿಯಲ್ಲೂ ಮೃತ ಆಟಗಾರನಿಗೆ ಶ್ರದ್ಧಾಂಜಲಿ   

ಬೆಂಗಳೂರು: ನಗರದ ಗೌತಮಪುರದಲ್ಲಿ ಫುಟ್‌ಬಾಲ್ ಆಟವೆಂದರೆ ಹುಚ್ಚು ಪ್ರೀತಿ. ಆದರೆ ಗುರುವಾರ ಅಲ್ಲಿ ಅಸಹನೀಯ ಮೌನ. ಅದನ್ನು ಸೀಳಿಕೊಂಡು ಬಂದ ಆಕ್ರಂದನ. ಗಲ್ಲಿಗಲ್ಲಿಗಳಲ್ಲಿಯೂ ಶೋಕತಪ್ತ ಮನಗಳು ಅರ್ಪಿಸಿದವು ಮೃತ ಯುವ ಫುಟ್‌ಬಾಲ್ ಆಟಗಾರ ಡಿ.ವೆಂಕಟೇಶ್‌ಗೆ ಅಂತಿಮ ನಮನ.

ಆಟದ ಸೊಬಗಿನಿಂದಲೇ ಮನಗೆದ್ದು ಅಂಗಳದಲ್ಲಿಯೇ ಮರೆಯಾಗಿ ಹೋದ ಆಟಗಾರನ ದೊಡ್ಡ ದೊಡ್ಡ ಭಾವಚಿತ್ರಗಳು ಫಲಕಗಳಾಗಿ ಎದ್ದು ನಿಂತಿದ್ದವು ವಿವಿಧ ರಸ್ತೆಗಳ ಮೂಲೆ ಮೂಲೆಯಲ್ಲಿ. ಕೊನೆಯ ದರ್ಶನಕ್ಕೆ ಅಭಿಮಾನಿಗಳ ಸಾಲು ಸಾಲು. ಸ್ಲಮ್ ಮೂಲೆಯಲ್ಲಿನ ಆ ಪುಟ್ಟ ಮನೆಯಲ್ಲಿಯಂತೂ ದುಃಖದ ಮಹಾಪೂರ.
ಇದ್ದ ಒಬ್ಬ ಮಗನನ್ನೂ ಕಳೆದುಕೊಂಡಿರುವ ತಾಯಿ ಸುಶೀಲಾ ವೇದನೆಯ ರೋದನ ಮುಗಿಲು ಮುಟ್ಟಿತ್ತು.

ಶವಪೆಟ್ಟಿಗೆಯನ್ನು ತಬ್ಬಿಕೊಂಡು ಬಿಕ್ಕಳಿಸಿ ಅತ್ತ ಹೆತ್ತಮ್ಮ ಕೊನೆಗೂ ಮುದ್ದಿನ ಮಗನಿಗೆ ಅಂತಿಮ ವಿದಾಯ ಹೇಳಿದ ಚಿತ್ರವು ಕಲ್ಲೆದೆಯೂ ಕಣ್ಣೀರು ಸುರಿಸುವಂಥ ಕರುಣಾಜನಕ ಕ್ಷಣ. ತಂದೆ ಆರ್.ಧನರಾಜ್ ಅವರಿಗೆ ಸಂತಾಪ ಹೇಳಿ, ಸಮಾಧಾನ ಪಡಿಸಲು ಮುಂದಾದರು ನೂರಾರು ಜನ. ಆದರೂ ತಡೆಯದ ಕಣ್ಣೀರು ಕಟ್ಟೆಯೊಡೆದು ಹರಿಯಿತು. ಅಂಗಳದಲ್ಲಿ ಆಡುತ್ತಿದ್ದ ರೀತಿಯನ್ನು ಪದೇಪದೇ ನೆನಪಿಸಿಕೊಂಡಾಗಲೆಲ್ಲಾ , ಮತ್ತೆ ಕಣ್ಣಂಚಿನಲ್ಲಿ ನೀರಧಾರೆ.

ಬುಧವಾರ ಆಡುತ್ತಲೇ ಮೃತಪಟ್ಟ ಪ್ರತಿಭಾವಂತ ಆಟಗಾರ ವೆಂಕಟೇಶ್‌ಗೆ ಶ್ರದ್ಧಾಂಜಲಿ ಅರ್ಪಿಸಲು ಸಾವಿರಾರು ಮಂದಿ ಫುಟ್‌ಬಾಲ್ ಆಟಗಾರರು ಸೇರಿದ್ದರು. `ಪುಟ್ಟ ಬ್ರೆಜಿಲ್~ನಂತಿರುವ ಇಡೀ ಗೌತಮಪುರ ಶೋಕ ಸಾಗರದಲ್ಲಿ ಮುಳುಗಿತ್ತು. ಇಲ್ಲಿ ಸುಮಾರು ಮೂರು ಸಾವಿರ ಮನೆಗಳಿವೆ.  ಪ್ರತಿ ಮನೆಯಲ್ಲೊಬ್ಬ ಫುಟ್‌ಬಾಲ್ ಆಟಗಾರ ಇದ್ದಾನೆ. ಲೀಗ್, ರಾಜ್ಯ ಹಾಗೂ ರಾಷ್ಟ್ರ ಮಟ್ಟ ಪ್ರತಿನಿಧಿಸುತ್ತಿರುವ 300ಕ್ಕೂ ಹೆಚ್ಚು ಮಂದಿ ವೃತ್ತಿಪರ ಆಟಗಾರರಿದ್ದಾರೆ. ಒಲಿಂಪಿಕ್ಸ್‌ನಲ್ಲೂ  ಭಾರತ ತಂಡವನ್ನು ಪ್ರತಿನಿಧಿಸಿದವರಿದ್ದಾರೆ.

`ವೆಂಕಟೇಶ್ ತನ್ನ ಕನಸು, ಮನಸ್ಸಿನಲ್ಲಿ ಯೋಚಿಸುತ್ತಿದ್ದದ್ದು ಫುಟ್‌ಬಾಲ್. ಆತ ಮ್ಯಾಂಚೆಸ್ಟರ್ ಫುಟ್‌ಬಾಲ್‌ನ ಕ್ಲಬ್‌ನ ಅಭಿಮಾನಿ. ಹಾಗಾಗಿಯೇ  ಬೆನ್ನ ಹಿಂದೆ ಆ ಕ್ಲಬ್‌ನ ಚಿಹ್ನೆಯ ಟ್ಯಾಟೂ ಹಾಕಿಸಿಕೊಂಡಿದ್ದ~ ಎಂದು ಬೆಂಗಳೂರು ರಾಯಲ್ಸ್ ತಂಡದ ರಾಜು ಹೇಳಿದರು.

ಫುಟ್‌ಬಾಲ್ ಸಂಸ್ಥೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅವರ ಮೇಲೆ ಹಲ್ಲೆ ನಡೆಸಲು ಕೆಲವರು ಮುಂದಾದರು. `ಕ್ರೀಡಾಂಗಣದಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯ ನೀಡದ ಕಾರಣ ವೆಂಕಟೇಶ್ ಸಾವನ್ನಪ್ಪಿದ್ದಾನೆ. ಇದಕ್ಕೆ ಕಾರಣರಾದವರು ಆಡಳಿತದಲ್ಲಿರಬಾರದು~ ಎಂದು ಘೋಷಣೆ ಕೂಗಿದರು. ಕೆಎಸ್‌ಎಫ್‌ಎ ಪ್ರಕಟಿಸಿರುವ ಒಂದು ಲಕ್ಷ ರೂಪಾಯಿ ಪರಿಹಾರ ನಮಗೆ ಬೇಡ ಎಂದು ಧನರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಅಂತ್ಯಕ್ರಿಯೆ: ವೆಂಕಟೇಶ್ ಅವರ ಅಂತ್ಯಕ್ರಿಯೆ ಹಲಸೂರಿನಲ್ಲಿರುವ ಲಕ್ಷೀಪುರದಲ್ಲಿ ಸಂಜೆ 6 ಗಂಟೆ ನಡೆಯಿತು. ಈ ಸಂದರ್ಭದಲ್ಲಿ ಗೌತಮಪುರದ ಜನರು, ಫುಟ್‌ಬಾಲ್ ಆಟಗಾರರು, ಸ್ನೇಹಿತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.