ADVERTISEMENT

ಗಾಲ್ಫ್: ಮುನ್ನಡೆಯಲ್ಲಿ ಭಾರತ ಬಿ ತಂಡ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 17:20 IST
Last Updated 1 ಫೆಬ್ರುವರಿ 2011, 17:20 IST

ಬೆಂಗಳೂರು: ಆಕರ್ಷಕ ಆಟದ ಪ್ರದರ್ಶನ ನೀಡಿದ ಖಲಿನ್ ಜೋಶಿ ಅವರು ಮಂಗಳವಾರ ಇಲ್ಲಿ ಆರಂಭವಾದ 110ನೇ ಅಖಿಲ ಭಾರತ ಅಮೆಚೂರ್ ಗಾಲ್ಫ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ‘ಬಿ’ ತಂಡವು ಮುನ್ನಡೆ ಸಾಧಿಸಲು ಕಾರಣರಾದರು.

ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್‌ನಲ್ಲಿ ನಡೆದ ಮೊದಲ ದಿನದ ಪೈಪೋಟಿಯಲ್ಲಿ ಜೋಶಿ ಹಾಗೂ ಗಗನ್ ವರ್ಮ ಅವರನ್ನೊಳಗೊಂಡ ‘ಬಿ’ ತಂಡವು ಮೂರು ಸ್ಟ್ರೋಕ್‌ಗಳ ಅಂತರದಿಂದ ಮುನ್ನಡೆ ಸಾಧಿಸಿತು. ನಿಖರವಾದ ಆಟವಾಡಿದ ಜೋಶಿ ಪುರುಷರ ವಿಭಾಗದಲ್ಲಿ ವೈಯಕ್ತಿಕವಾಗಿ 68 ಸ್ಟ್ರೋಕ್‌ಗಳಲ್ಲಿ 18 ಹೋಲ್‌ಗಳನ್ನು ಪೂರ್ಣಗೊಳಿಸಿದರು. ವರ್ಮ ಅವರು 75 ಸ್ಟ್ರೋಕ್ ತೆಗೆದುಕೊಂಡರು. ಆದರೂ ಭಾರತ ‘ಬಿ’ ತಂಡವು (143) ಮುನ್ನಡೆ ಪಡೆಯಲು ತೊಡಕೇನು ಆಗಲಿಲ್ಲ.

ಅಭಿಜಿತ್ ಚಢಾ (71) ಹಾಗೂ ಅಭಿನವ್ ಲೊಹನ್ (75) ಅವರಿರುವ ಭಾರತ ‘ಎ’ ತಂಡವು ಒಟ್ಟಾರೆ 146 ಸ್ಟ್ರೋಕ್‌ಗಳನ್ನು ಪ್ರಯೋಗಿಸಿ ಹದಿನೆಂಟು ಹೋಲ್‌ಗಳ ಮೊದಲ ದಿನದ ಯಾತ್ರೆಯನ್ನು ಪೂರ್ಣಗೊಳಿಸಿತು. ‘ಸಿ’ ತಂಡವು (151) ಮೂರನೇ ಸ್ಥಾನದಲ್ಲಿ ಉಳಿಯಿತು. ಈ ತಂಡದಲ್ಲಿ ಎಸ್.ಚಿಕ್ಕರಂಗಪ್ಪ (74) ಹಾಗೂ ತ್ರಿಶೂಲ್ ಚಿನ್ನಪ್ಪ (77) ಅವರಿದ್ದಾರೆ.

ಬಾಂಗ್ಲಾದೇಶ ತಂಡದವರು (ಮೊಹಮ್ಮದ್ ದುಲಾಲ್ ಹುಸೇನ್-ಮೊಹಮ್ಮದ್ ನಜೀಮ್) 151 ಸ್ಟ್ರೋಕ್‌ಗಳನ್ನು ಪ್ರಯೋಗಿಸಿದ್ದರಿಂದ ನಾಲ್ಕನೇ ಸ್ಥಾನದಲ್ಲಿ ದಿನದ ಹೋರಾಟವನ್ನು ಕೊನೆಗೊಳಿಸಿದರು. ಭಾರತ ‘ಡಿ’ (ರಾಹುಲ್ ರವಿ-ಸಕೀಬ್ ಅಹ್ಮದ್) ಹಾಗೂ ಶ್ರೀಲಂಕಾ (ಎನ್.ತಂಗರಾಜಾ-ಎಂ.ಅರ್ಮುಗಮ್) ಕ್ರಮವಾಗಿ 153 ಹಾಗೂ 157 ಸ್ಟ್ರೋಕ್‌ಗಳೊಂದಿಗೆ ಮೊದಲ ಹದಿನೆಂಟು ಹೋಲ್‌ಗಳ ಕಾರ್ಯಾಚರಣೆ ಪೂರ್ಣಗೊಳಿಸಿದರು.
 
ಮಹಿಳೆಯರ ವಿಭಾಗದಲ್ಲಿ ಅಧಿತಿ ಅಶೋಕ್ (72) ಅವರು ್ನಡೆಯಲ್ಲಿದ್ದಾರೆ. ಅವರಿಗೆ ನಿಕಟ ಪೈಪೋಟಿ ನೀಡಿದ್ದು ಶ್ರೇಯಾ ಗೈ (74). ಆದರೂ ಎರಡು ಸ್ಟ್ರೋಕ್‌ಗಳ ಅಂತರವನ್ನು ಅಧಿತಿ ಉಳಿಸಿಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಗುರ್ಬಾನಿ ಸಿಂಗ್ (75), ಶ್ರದ್ಧಾಂಜಲಿ ಸಿಂಗ್ (77), ವಿನಿ ಕಪೂರ್ (77), ಮಿಲಿ ಸರೊಹಾ (78), ತಲ್ವೀನ್ ಬತ್ರಾ (79) ಹಾಗೂ ರಾಬಿಯಾ ಗಿಲ್ (80) ಅವರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.