ADVERTISEMENT

ಗುಜರಾತ್‌ಗೆ ಜಯದ ನಿರೀಕ್ಷೆ

ಟೈಟನ್ಸ್‌ಗೆ ತಮಿಳ್ ತಲೈವಾಸ್‌ ಸವಾಲು

ಪಿಟಿಐ
Published 2 ಅಕ್ಟೋಬರ್ 2017, 20:10 IST
Last Updated 2 ಅಕ್ಟೋಬರ್ 2017, 20:10 IST
ಗುಜರಾತ್‌ಗೆ ಜಯದ ನಿರೀಕ್ಷೆ
ಗುಜರಾತ್‌ಗೆ ಜಯದ ನಿರೀಕ್ಷೆ   

ಚೆನ್ನೈ: ‘ಎ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿರುವ ಕನ್ನಡಿಗ ಸುಕೇಶ್ ಹೆಗಡೆ ಸಾರಥ್ಯದ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡ ಮಂಗಳವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ದಬಂಗ್ ದೆಹಲಿ ತಂಡದ ಸವಾಲು ಎದುರಿಸಲಿದೆ.

ಇದೇ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ದಬಂಗ್ ದೆಹಲಿ ತಂಡ ಗೆಲ್ಲಬೇಕಾದರೆ ಗುಜರಾತ್ ಆಟಗಾರರ ದಾಳಿಯಿಂದ ತಪ್ಪಿಸಿಕೊಳ್ಳುವ ನೂತನ ತಂತ್ರಗಳನ್ನು ಹೆಣೆಯಬೇಕಿದೆ.

ಆಡಿದ 18 ಪಂದ್ಯಗಳಲ್ಲಿ ದಬಂಗ್‌ ನಾಲ್ಕರಲ್ಲಿ ಮಾತ್ರ ಗೆದ್ದು 13 ಪಂದ್ಯಗಳನ್ನು ಸೋತಿದೆ. ಒಂದು ಪಂದ್ಯ ಮಾತ್ರ ಟೈ ಆಗಿದೆ. ಈ ತಂಡದ ಬಳಿ ಕೇವಲ 31 ಪಾಯಿಂಟ್ಸ್‌ಗಳು ಇವೆ.

ADVERTISEMENT

ಗುಜರಾತ್ ತಂಡ 17 ರಲ್ಲಿ 10 ಪಂದ್ಯ ಗೆದ್ದು 62 ಪಾಯಿಂಟ್ಸ್‌ಗಳನ್ನು ಹೊಂದಿದೆ. ಹಿಂದಿನ ಪಂದ್ಯದಲ್ಲಿ ಈ ತಂಡ ಪಟ್ನಾ ಪೈರೇಟ್ಸ್ ಎದುರು ಕೇವಲ ಒಂದು ಪಾಯಿಂಟ್ ಅಂತರದಲ್ಲಿ ರೋಚಕ ಗೆಲುವು ದಾಖಲಿಸಿತ್ತು. ಸುಕೇಶ್ ಸೇರಿದಂತೆ ಪ್ರಮುಖ ರೈಡರ್‌ಗಳ ಅನುಪಸ್ಥಿತಿಯಲ್ಲಿ ಚಂದ್ರನ್ ಶರ್ಮಾ ತಂಡದ ರೈಡಿಂಗ್ ವಿಭಾಗಕ್ಕೆ ಬಲ ತುಂಬಿದ್ದರು. ಈ ಆಟಗಾರ ರೈಡಿಂಗ್‌ನಲ್ಲಿ ಐದು ಹಾಗೂ ಬೋನಸ್‌ನಲ್ಲಿ ಎರುಡು ಪಾಯಿಂಟ್ಸ್ ತಂದುಕೊಟ್ಟಿದ್ದರು. ಪರ್ವೇಶ್ ಹಾಗೂ ಬೈಂಸ್ವಾಲ್ ಐದು ಪಾಯಿಂಟ್ಸ್‌ಗಳಿಂದ ಗಮನ ಸೆಳೆದಿದ್ದರು.

ಮೆರಜ್ ಶೇಖ್‌ ನಾಯಕತ್ವದ ದಬಂಗ್ ತಂಡ ಹಿಂದಿನ ಎಂಟು ಪಂದ್ಯಗಳಲ್ಲಿ ಸತತವಾಗಿ ಸೋತಿದೆ. ಬೆಂಗಾಲ್ ವಾರಿಯರ್ಸ್‌ ಎದುರು 31–31 ಪಾಯಿಂಟ್ಸ್‌ಗಳಲ್ಲಿ ಟೈ ಮಾಡಿಕೊಂಡ ಬಳಿಕ ಈ ತಂಡ ಯಾವುದೇ ಪಂದ್ಯ ಗೆದ್ದಿಲ್ಲ. ಹಿಂದಿನ ಪಂದ್ಯದಲ್ಲಿ ತೆಲುಗು ಟೈಟನ್ಸ್ ಎದುರು ಹೀನಾಯ ಸೋಲು ಕಂಡಿತ್ತು. ರಾಹುಲ್ ಚೌಧರಿ ಬಳಗ 44 ಪಾಯಿಂಟ್ಸ್ ಗಳಿಸಿದ್ದರೆ, ದಬಂಗ್‌ ತಂಡ ಕೇವಲ 22 ಪಾಯಿಂಟ್ಸ್ ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿತ್ತು.

ಈ ತಂಡ ಜಯದ ಹಾದಿಗೆ ಮರಳಬೇಕಾದರೆ ರೈಡಿಂಗ್ ಹಾಗೂ ಟ್ಯಾಕಲ್ ವಿಭಾಗಗಳೆರಡರಲ್ಲೂ ಉತ್ತಮವಾಗಿ ಆಡಬೇಕಿದೆ.

ತಮಿಳ್‌–ತೆಲುಗು ಪೈಪೋಟಿ: ದಿನದ ಇನ್ನೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ಹಾಗೂ ತೆಲುಗು ಟೈಟನ್ಸ್ ತಂಡಗಳು ಎದುರಾಗಲಿವೆ. ಲೀಗ್ ಆರಂಭದಲ್ಲಿ ಸತತವಾಗಿ ಸೋಲು ಕಂಡಿದ್ದ ತಲೈವಾಸ್ ಇತ್ತೀಚಿನ ಪಂದ್ಯಗಳಲ್ಲಿ ಗಮನಾರ್ಹವಾಗಿ ಆಡುತ್ತಿದೆ. ಆದರೆ ಈ ತಂಡದ ರೈಡರ್‌ಗಳು ಆಗಾಗ ಹಿನ್ನಡೆ ಅನುಭವಿಸುತ್ತಿದ್ದಾರೆ. ಹಿಂದಿನ ಮೂರು ಪಂದ್ಯಗಳಲ್ಲಿ ಈ ತಂಡ ಸತತವಾಗಿ ಸೋತಿದೆ. ಆದರೆ ಪ್ರಬಲ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡವನ್ನು ಸೋಲಿಸಿರುವ ತಲೈವಾಸ್ ಸ್ಥಿರವಾಗಿ ಆಡುತ್ತಿಲ್ಲ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.