ADVERTISEMENT

ಗೋಲ್ಡ್‌ ಕೋಸ್ಟ್‌ಗೆ ಸ್ಕ್ವಾಷ್ ತಂಡ

ಪಿಟಿಐ
Published 31 ಮಾರ್ಚ್ 2018, 19:30 IST
Last Updated 31 ಮಾರ್ಚ್ 2018, 19:30 IST
ದೀಪಿಕಾ ಪಳ್ಳಿಕಲ್ (ಎಡ ಚಿತ್ರ) ಮತ್ತು ಜೋಷ್ನಾ ಚಿಣ್ಣಪ್ಪ
ದೀಪಿಕಾ ಪಳ್ಳಿಕಲ್ (ಎಡ ಚಿತ್ರ) ಮತ್ತು ಜೋಷ್ನಾ ಚಿಣ್ಣಪ್ಪ   

ಚೆನ್ನೈ: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತದ ಸ್ಕ್ವಾಷ್‌ ತಂಡದವರು ಶನಿವಾರ ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ಗೆ ತೆರಳಿದರು.

ಏಪ್ರಿಲ್‌ 4ರಿಂದ 15ರವರೆಗೆ ನಡೆಯಲಿರುವ ಕೂಟದಲ್ಲಿ ಸೌರವ್‌ ಘೋಷಾಲ್‌, ಹರಿಂದರ್‌ ಪಾಲ್‌ ಸಂಧು, ವಿಕ್ರಂ ಮಲ್ಹೋತ್ರಾ, ರಮಿತ್‌ ಟಂಡನ್‌, ಜೋಷ್ನಾ ಚಿಣ್ಣಪ್ಪ ಮತ್ತು ದೀಪಿಕಾ ಪಳ್ಳಿಕಲ್‌ ಅವರು ಆಡಲಿದ್ದಾರೆ. ಕೋಚ್‌ಗಳಾದ ಸೈರಸ್‌ ಪೂಂಚಾ ಮತ್ತು ಭುವನೇಶ್ವರಿ ಕುಮಾರಿ ಹಾಗೂ ಫಿಸಿಯೊ ಗ್ರೇಮ್‌ ಎವೆರಾರ್ಡ್‌ ಅವರೂ ತಂಡದ ಜೊತೆಗಿದ್ದಾರೆ. ಸ್ಕ್ವಾಷ್‌ ವಿಭಾಗದ ಸಿಂಗಲ್ಸ್‌ ಮತ್ತು ಡಬಲ್ಸ್‌ ಸ್ಪರ್ಧೆಗಳು ಏಪ್ರಿಲ್‌ 5ರಿಂದ 15ರವರೆಗೆ ಜರುಗಲಿವೆ.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಘೋಷಾಲ್‌ ಮೂರನೇ ಶ್ರೇಯಾಂಕ ಹೊಂದಿದ್ದಾರೆ. ಹರಿಂದರ್‌ ಮತ್ತು ವಿಕ್ರಂ ಅವರು ಕ್ರಮವಾಗಿ 14 ಮತ್ತು 16ನೇ ಶ್ರೇಯಾಂಕ ಗಳಿಸಿದ್ದಾರೆ.

ADVERTISEMENT

ಮಹಿಳೆಯರ ಸಿಂಗಲ್ಸ್‌ನಲ್ಲಿ ಜೋಷ್ನಾ ಮತ್ತು ದೀಪಿಕಾ ಕ್ರಮವಾಗಿ ಎಂಟು ಮತ್ತು ಒಂಬತ್ತನೇ ಶ್ರೇಯಾಂಕ ಪಡೆದಿದ್ದಾರೆ. ಡಬಲ್ಸ್‌ ವಿಭಾಗದಲ್ಲಿ ಇವರಿಗೆ ಮೂರನೇ ಶ್ರೇಯಾಂಕ ಸಿಕ್ಕಿದೆ.

ಮಿಶ್ರ ಡಬಲ್ಸ್‌ನಲ್ಲಿ ಆಡುವ ಸೌರವ್‌ ಮತ್ತು ದೀ‍ಪಿಕಾ ಐದನೇ ಶ್ರೇಯಾಂಕ ಹೊಂದಿದ್ದಾರೆ. ಜೋಷ್ನಾ ಮತ್ತು ಹರಿಂದರ್‌ ಎಂಟನೇ ಶ್ರೇಯಾಂಕ ಗಳಿಸಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಕಣಕ್ಕಿಳಿಯಲಿರುವ ವಿಕ್ರಂ ಮತ್ತು ರಮಿತ್‌ ಅವರಿಗೆ 11ನೇ ಶ್ರೇಯಾಂಕ ಲಭಿಸಿದೆ.

‘ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರ 20ರೊಳಗೆ ಸ್ಥಾನ ಗಳಿಸಿರುವ ಮೂರು ಮಂದಿ ನಮ್ಮ ತಂಡದಲ್ಲಿದ್ದಾರೆ. ಎಲ್ಲರೂ ಹಿಂದಿನ ಟೂರ್ನಿಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದ್ದಾರೆ. ಕಾಮನ್‌ವೆಲ್ತ್‌ನಲ್ಲೂ ಪದಕ ಗೆಲ್ಲಲು ಶ್ರಮಿಸಲಿದ್ದಾರೆ’ ಎಂದು ತಂಡದ ಕೋಚ್‌ ಪೂಂಚಾ ತಿಳಿಸಿದ್ದಾರೆ.

ಜೋಷ್ನಾ ಮತ್ತು ದೀಪಿಕಾ ಅವರು 2014ರ ಗ್ಲಾಸ್ಗೊ ಕೂಟದ ಮಹಿಳೆಯರ ಡಬಲ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.