ADVERTISEMENT

ಗೌತಮ್ ಅಬ್ಬರಕ್ಕೆ ಮಹಾರಾಷ್ಟ್ರ ತಬ್ಬಿಬ್ಬು

ರಣಜಿ ಟ್ರೋಫಿ: ಅಳಿಸಿ ಹೋದ 21 ವರ್ಷದ ದಾಖಲೆಯ ಜೊತೆಯಾಟ, ಬೌಲರ್‌ಗಳ ಮೇಲಿದೆ ನಿರೀಕ್ಷೆಯ ಹೊರೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2012, 19:59 IST
Last Updated 30 ಡಿಸೆಂಬರ್ 2012, 19:59 IST
ಮಹಾರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ದ್ವಿಶತಕ ಗಳಿಸಿದ ಕರ್ನಾಟಕದ ಸಿ.ಎಂ. ಗೌತಮ್ ಅವರನ್ನು ಸಹ ಆಟಗಾರರು ಅಭಿನಂದಿಸಿದ ಕ್ಷಣ
ಮಹಾರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ದ್ವಿಶತಕ ಗಳಿಸಿದ ಕರ್ನಾಟಕದ ಸಿ.ಎಂ. ಗೌತಮ್ ಅವರನ್ನು ಸಹ ಆಟಗಾರರು ಅಭಿನಂದಿಸಿದ ಕ್ಷಣ   

ಪುಣೆ: ಸುನಾಮಿಯ ಅಬ್ಬರದ ಅಲೆಗಳನ್ನು ಎದುರಿಸಿ ಎದೆಯುಬ್ಬಿಸಿ ನಿಲ್ಲಲು ಸಾಧ್ಯವೇ? ಇಂತಹದೊಂದು ವ್ಯರ್ಥ ಪ್ರಯತ್ನಕ್ಕೆ ಕೈ ಹಾಕಿ ಮಹಾರಾಷ್ಟ್ರ ಭಾರಿ ಪೆಟ್ಟು ತಿಂದಿತು. ಇದಕ್ಕೆ ಕಾರಣವಾಗಿದ್ದು ಪ್ರವಾಹದ ವೇಗದಂತೆ ರನ್ ಗಳಿಸಿದ ಸಿ.ಎಂ. ಗೌತಮ್.

ಈ ಜಗತ್ತಿನಲ್ಲಿ ಏನು ಬೇಕಾದರೂ ಬದಲಾವಣೆಯಾಗಬಹುದು. ಆದರೆ, ಗೌತಮ್ ಬ್ಯಾಟಿಂಗ್ ಶೈಲಿ, ಆಡುವ ವೇಗ, ಸ್ಥಿರತೆ ಮಾತ್ರ ಬದಲಾಗುವುದೇ ಇಲ್ಲವೇನೋ? ಹತ್ತೂವರೆ ಗಂಟೆಗೂ ಹೆಚ್ಚುಕಾಲ ಕ್ರೀಸ್‌ನಲ್ಲಿ ನಿಂತು ಈ ಸಲದ ರಣಜಿ ಋತುವಿನಲ್ಲಿ ಎರಡನೇ ದ್ವಿಶತಕ ಗಳಿಸಿದ್ದೇ ಇದಕ್ಕೆ ಸಾಕ್ಷಿ.

ಇದರಿಂದ ಕಂಗಾಲಾಗಿದ್ದು ಮಹಾರಾಷ್ಟ್ರ ತಂಡದ ನಾಯಕ ರೋಹಿತ್. ಎಂಟು ಜನ ಬೌಲರ್‌ಗಳನ್ನು ಕಣಕ್ಕಿಳಿಸಿದರೂ, `ರನ್ ಯಂತ್ರ' ವನ್ನು ಕಟ್ಟಿ ಹಾಕಲು ಅವರಿಂದ ಸಾಧ್ಯವಾಗಲಿಲ್ಲ. ಪ್ರತಿ ಓವರ್ ಮುಗಿದಾಗಲೂ ಚೆಂಡು ಯಾರ ಕೈಗೆ ನೀಡಬೇಕು ಎನ್ನುವ ಚಿಂತೆ ನಾಯಕ ರೋಹಿತ್ ಅವರನ್ನು ಕಾಡುತ್ತಿತ್ತು.

ಸುಬ್ರತಾ ರಾಯ್ ಸಹಾರಾ ಕ್ರೀಡಾಂಗಣದಲ್ಲಿ ಭಾನುವಾರ ಹರಿದಿದ್ದು ರನ್ ಹೊಳೆ. ಗೌತಮ್ ಹಾಗೂ ಸ್ಟುವರ್ಟ್ ಬಿನ್ನಿ ಅವರ ದಾಖಲೆಯ ಜೊತೆಯಾಟ ಇದಕ್ಕೆ ಕಾರಣವಾಯಿತು. ಈ ಪರಿಣಾಮ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 158.5 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು 572 ರನ್ ಕಲೆ ಹಾಕಿ ಡಿಕ್ಲೇರ್ ಮಾಡಿಕೊಂಡಿತು. ಆದರೆ, ವಿಕೆಟ್ ಕೀಪರ್ ಗೌತಮ್ ಅವರನ್ನು ಔಟ್ ಮಾಡಲು ಮಾತ್ರ ಸಾಧ್ಯವೇ ಆಗಲಿಲ್ಲ.

ಈ ಸವಾಲಿನ ಮೊತ್ತವನ್ನು ಬೆನ್ನು ಹತ್ತಿರುವ ಆತಿಥೇಯ ತಂಡದವರು ಎರಡನೆಯ ದಿನದಾಟದ ಅಂತ್ಯಕ್ಕೆ 16 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿದ್ದಾರೆ. ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಕರ್ನಾಟಕ ಸವಾಲಿನ ಮೊತ್ತ ಕಲೆ ಹಾಕಿದೆ. ಆದರೆ, ಬಿನ್ನಿ ಬಳಗದ ಕ್ವಾರ್ಟರ್ ಫೈನಲ್ ಕನಸನ್ನು ನನಸು ಮಾಡುವ ಜವಾಬ್ದಾರಿ ಈಗ ಬೌಲರ್‌ಗಳ ಮೇಲಿದೆ.

ಗೌತಮ್‌ಮತ್ತೊಂದು ದ್ವಿಶತಕ: ಈ ಸಲದ ರಣಜಿ ಋತುವಿನಲ್ಲಿ ಗೌತಮ್ (ಔಟಾಗದೆ 264, 464ಎಸೆತ, 32 ಬೌಂಡರಿ, 1 ಸಿಕ್ಸರ್) ಮತ್ತೊಂದು ದ್ವಿಶತಕ ಗಳಿಸಿದರು. ಮೈಸೂರಿನಲ್ಲಿ ನಡೆದ ವಿದರ್ಭ ವಿರುದ್ಧದ ಪಂದ್ಯದಲ್ಲೂ ಅವರು ದ್ವಿಶತಕ (257) ಸಿಡಿಸಿದ್ದರು. ಈ ಸಾಧನೆಯ ಮೂಲಕ ಅವರು ಹಲವು ದಾಖಲೆಗಳ ಶ್ರೇಯಕ್ಕೂ ಪಾತ್ರರಾದರು.

ಶನಿವಾರದ ಅಂತ್ಯಕ್ಕೆ 89 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿದ್ದ ಕರ್ನಾಟಕ ಭಾನುವಾರ ವೇಗವಾಗಿ ರನ್ ಕಲೆ ಹಾಕಿತು. ಮೊದಲ ದಿನ 132 ರನ್ ಗಳಿಸಿದ ಬಲಗೈ ಬ್ಯಾಟ್ಸ್‌ಮನ್ ಗೌತಮ್ ಎರಡನೆಯ ದಿನವೂ ಇಷ್ಟೇ ರನ್‌ಗಳನ್ನು ಗಳಿಸಿದರು. ಇದರಿಂದ ಈ ರಣಜಿ ಋತುವಿನಲ್ಲಿ ಗರಿಷ್ಠ ಮೊತ್ತ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು. ಈ ಆಟಗಾರ ಎಂಟು ಪಂದ್ಯಗಳಿಂದ 922 ರನ್ ಗಳಿಸಿದ್ದಾರೆ. ವಿಕೆಟ್ ಕೀಪರ್ ಆಗಿ ಈ ಋತುವಿನಲ್ಲಿ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನ್ನುವ ಕೀರ್ತಿಯೂ ಕರ್ನಾಟಕದ ಆಟಗಾರನ ಪಾಲಾಯಿತು.

108ನೇ ಓವರ್‌ನಲ್ಲಿ ಭುಜಕ್ಕೆ ಚೆಂಡಿನ ಪೆಟ್ಟು ತಿಂದರೂ ಹಾಗೆಯೇ ಬ್ಯಾಟಿಂಗ್ ಮುಂದುವರಿಸಿದರು. ಮೊದಲ ದಿನ ಎರಡು ಜೀವದಾನ ಪಡೆದಿದ್ದ ಗೌತಮ್ ಮತ್ತೆ ಎರಡು ಅಂತಹ `ಅದೃಷ್ಟ'ವನ್ನು ಪಡೆದುಕೊಂಡರು. ಸಚಿನ್ ಚೌಧರಿ ಬೌಲಿಂಗ್‌ನಲ್ಲಿ ಮಿಡ್ ವಿಕೆಟ್ ಹಾಗೂ ಮಿಡ್ ಆನ್ ಮಧ್ಯೆ ಎರಡು ರನ್ ಕದಿಯುವ ಮೂಲಕ 200 ರನ್ ಗಳಿಸಿದರು. ಈ ಸಂದರ್ಭದಲ್ಲಿ ಅವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಈ ವೇಳೆ ಅವರು ಬ್ಯಾಟ್‌ಗೆ ಚುಂಬಿಸಿ ದ್ವಿಶತಕದ ಖುಷಿ ಅನುಭವಿಸಿದರು. ಇನ್ನೊಂದು ಬದಿಯಿದ್ದ ನಾಯಕ ಬಿನ್ನಿ 26 ವರ್ಷದ ಗೌತಮ್ ಆಟಕ್ಕೆ ಶಹಬ್ಬಾಸ್‌ಗಿರಿ ನೀಡಿದರು.

ದಾಖಲೆಯ ಜೊತೆಯಾಟ: ಗೌತಮ್ ಹಾಗೂ ಬಿನ್ನಿ ಐದನೆಯ ವಿಕೆಟ್ ಜೊತೆಯಾಟದಲ್ಲಿ 340 ರನ್‌ಗಳನ್ನು ಕಲೆ ಹಾಕುವ ಮೂಲಕ 21 ವರ್ಷಗಳ ದಾಖಲೆಯನ್ನು ಅಳಿಸಿ ಹಾಕಿದರು. ಇದು ಕರ್ನಾಟಕ ಐದನೇ ವಿಕೆಟ್ ಜೊತೆಯಾಟದಲ್ಲಿ ಕಲೆ ಹಾಕಿದ ಗರಿಷ್ಠ ಮೊತ್ತವಾಗಿದೆ.

1990-91ರ ಋತುವಿನಲ್ಲಿ ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ಸಯ್ಯದ್ ಕಿರ್ಮಾನಿ (161) ಮತ್ತು ಕೆ. ಜಸ್ವಂತ್ (ಔಟಾಗದೆ 259) ದಾಖಲೆ ನಿರ್ಮಿಸಿದ್ದರು. ಕೊಯಮತ್ತೂರಿನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಕೀರ್ಮಾನಿ ಹಾಗೂ ಜಸ್ವಂತ್ ಐದನೆಯ ವಿಕೆಟ್‌ಗೆ 336 ರನ್ ಗಳಿಸಿದ್ದರು. ಈ ದಾಖಲೆ `ಕ್ವೀನ್ಸ್ ಆಫ್ ದಿ ಡೆಕ್ಕನ್' ಖ್ಯಾತಿಯ ಪುಣೆ ನಗರದಲ್ಲಿ ಅಳಿಸಿ ಹೋಯಿತು.

ಮಿಂಚಿದ ಬಿನ್ನಿ: ನಾಯಕರಾಗಿ ಚೊಚ್ಚಲ ಶತಕ ಗಳಿಸಿದ ಬಿನ್ನಿ (168, 272ಎಸೆತ, 414ನಿಮಿಷ, 19 ಬೌಂಡರಿ, 2 ಸಿಕ್ಸರ್) ಸಮದ್ ಫಲ್ಹಾ ಎಸೆತದಲ್ಲಿ ಹರ್ಷದ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ತಲೆಯ ಮೇಲೆ ಹೊತ್ತ ದೊಡ್ಡ ಭಾರವನ್ನು ಇಳಿಸಿದ ಸಮಾಧಾನ ಮಹಾರಾಷ್ಟ ಪಾಳಯದಲ್ಲಿ  ನಲಿದಾಡಿತು.

ಅಮಿತ್ ವರ್ಮಾ (42, 68ಎಸೆತ, 5ಬೌ. 1 ಸಿಕ್ಸರ್) ಕೊಂಚ ಹೊತ್ತು ಆರ್ಭಟಿಸಿದರು. ನಂತರ ಬಂದ ಬ್ಯಾಟ್ಸ್‌ಮನ್‌ಗಳ್ಯಾರು ಹೆಚ್ಚು ಕ್ರೀಸ್‌ಗೆ ಅಂಟಿಕೊಂಡು ನಿಲ್ಲಲಿಲ್ಲ. ಎರಡು ದಿನವೂ ಕಾಡಿದ ಕರ್ನಾಟಕವನ್ನು ಕೊನೆಗೂ ನಿಯಂತ್ರಿಸಿದ ಸಮಾಧಾನ ಆತಿಥೇಯ ತಂಡದವರ ಮೊಗದಲ್ಲಿತ್ತು.

ಕರ್ನಾಟಕದ ಕನಸಿಗೆ ಒಡಿಶಾ ಅಡ್ಡಿ?
ಪುಣೆ:
ಕ್ವಾರ್ಟರ್ ಫೈನಲ್ ಪ್ರವೇಶಿಸಬೇಕು ಎನ್ನುವ ಕರ್ನಾಟಕ ತಂಡದ ಕನಸು ಕಮರಿ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಇದಕ್ಕೆ ಕಾರಣ ಒಡಿಶಾ ತಂಡದವರ ಉತ್ತಮ ಪ್ರದರ್ಶನ.ಕಟಕ್‌ನಲ್ಲಿ ನಡೆಯುತ್ತಿರುವ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಒಡಿಶಾ ಗೆಲುವಿನ ಹಾದಿಯಲ್ಲಿ ಹೆಜ್ಜೆ ಹಾಕಿದೆ. ಇನ್ನೂ ಎರಡು ದಿನಗಳ ಆಟ ಬಾಕಿಯಿದ್ದು ಒಡಿಶಾ ಗೆಲುವು ಸಾಧಿಸಲು 92 ರನ್ ಮಾತ್ರ ಬಾಕಿಯಿವೆ. ಕೈಯಲ್ಲಿರುವುದು ಆರು ವಿಕೆಟ್.

ಎರಡು ದಿನದಲ್ಲಿ 34 ವಿಕೆಟ್‌ಗಳನ್ನು ನುಂಗಿದ ಬಾರಾಬತಿ ಕ್ರೀಡಾಂಗಣದಲ್ಲಿ ಒಡಿಶಾ ಗೆಲುವು ಸಾಧಿಸಿದರೆ, ಕರ್ನಾಟಕದ ಎಂಟರ ಘಟ್ಟದ ಕನಸು ಕೈಗೂಡುವುದಿಲ್ಲ. ಎಳು ಪಂದ್ಯಗಳಿಂದ ಒಡಿಶಾ 16 ಅಂಕಗಳನ್ನು ಕಲೆ ಹಾಕಿದೆ. ಉತ್ತರ ಪ್ರದೇಶ ವಿರುದ್ಧ ಗೆಲುವು ಸಾಧ್ಯವಾದರೆ, ಅಂಕಗಳ ಸಂಖ್ಯೆ 22ಕ್ಕೆ ಏರಲಿದೆ.

ADVERTISEMENT

ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧ ಬೋನಸ್ ಅಂಕದೊಂದಿಗೆ ಗೆಲುವು ಸಾಧಿಸಿದರೂ ಅಂಕಗಳ ಸಂಖ್ಯೆ 22 ಆಗಲಿದೆ. 27 ಅಂಕ ಹೊಂದಿರುವ ಉತ್ತರಪ್ರದೇಶ ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. 22 ಅಂಕಗಳನ್ನು ಹೊಂದಿರುವ ಬರೋಡ ಎರಡನೇ ಸ್ಥಾನದಲ್ಲಿದೆ.

ದೆಹಲಿ ವಿರುದ್ಧ ವಿದರ್ಭ ಇನಿಂಗ್ಸ್ ಸಾಧಿಸಿದರೂ, ಈ ತಂಡದ ಒಟ್ಟು ಅಂಕ 22 ಆಗಲಿದೆ . ಆದ್ದರಿಂದ ಹೋರಾಟ ಈ ಋತುವಿನಲ್ಲಿ ಲೀಗ್‌ನಲ್ಲಿಯೇ ಹೋರಾಟ ಕಾಣುವ ಸಾಧ್ಯತೆಯೇ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.