ಲಂಡನ್: ಪದೇ ಪದೇ ಅಡ್ಡಿಪಡಿಸುತ್ತಿದ್ದ ಮಳೆ ಭಾರತದ ಆಟಗಾರರ ಚಿತ್ತಕ್ಕೆ ಕೊಂಚವೂ ಭಂಗ ಉಂಟು ಮಾಡಲಿಲ್ಲ. ಮೊದಲು ರವೀಂದ್ರ ಜಡೇಜ ಅವರ ಸ್ಪಿನ್ ಜಾದೂ, ಬಳಿಕ ಶಿಖರ್ ಧವನ್ ಅವರ ಮತ್ತೊಂದು ಶತಕದ ನೆರವಿನಿಂದ ಭಾರತ ತಂಡದವರು ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ `ಬಿ' ಗುಂಪಿನ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ತಂಡವನ್ನು ಎಂ.ಎಸ್.ದೋನಿ ಬಳಗ ಎಂಟು ವಿಕೆಟ್‌ಗಳಿಂದ ಬಗ್ಗುಬಡಿಯಿತು. ಈ ಮೂಲಕ ಈ ಬಾರಿಯ ಟೂರ್ನಿಯಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿದ ಮೊದಲ ತಂಡ ಎನಿಸಿತು.
ಮೊದಲು ಬ್ಯಾಟ್ ಮಾಡಿದ್ದ ಕೆರಿಬಿಯನ್ ಬಳಗ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 233 ರನ್ ಗಳಿಸಿತ್ತು. ಈ ಗುರಿಯನ್ನು ಭಾರತ 39.1 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ತಲುಪಿತು. ಈ ಗೆಲುವಿನ ಕ್ರೆಡಿಟ್ ಜಡೇಜ (36ಕ್ಕೆ5) ಹಾಗೂ ಧವನ್‌ಗೆ (ಅಜೇಯ 102) ಸಲ್ಲಬೇಕು.
ವಿಂಡೀಸ್ ಸಾಧಾರಣ ಮೊತ್ತ: ಟಾಸ್ ಗೆದ್ದ ನಾಯಕ ದೋನಿ ಕೆರಿಬಿಯನ್ ಬಳಗವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ವಿಂಡೀಸ್ ಮೊದಲ ವಿಕೆಟ್ ಬೇಗನೇ ಕಳೆದುಕೊಂಡಿತು. ಆದರೆ ಚಾರ್ಲ್ಸ್ ಹಾಗೂ ಡರೆನ್ ಬ್ರಾವೊ ಎರಡನೇ ವಿಕೆಟ್ ಜೊತೆಯಾಟದಲ್ಲಿ ಭಾರತದ ಬೌಲರ್‌ಗಳನ್ನು ಕಾಡಿದರು. ಇವರಿಬ್ಬರು 2ನೇ ವಿಕೆಟ್‌ಗೆ 78 ರನ್ ಸೇರಿಸಿ ದೊಡ್ಡ ಮೊತ್ತದ ಜೊತೆಯಾಟದ ಸುಳಿವು ನೀಡಿದ್ದರು.
ಆಗ ದೋನಿ ತೋರಿದ ಜಾಣ್ಮೆ ಕೆಲಸ ಮಾಡಿತು. ಅವರು ಎಡಗೈ ಸ್ಪಿನ್ನರ್ ಜಡೇಜ ಅವರಿಗೆ ಚೆಂಡು ನೀಡಿದರು. ಮೊದಲ ಓವರ್ ಮೇಡನ್ ಮಾಡಿದ ಅವರು ತಮ್ಮ ಎರಡನೇ ಓವರ್‌ನಲ್ಲಿ ಚಾರ್ಲ್ಸ್ (60; 55 ಎ. 7 ಬೌಂ,. 2 ಸಿ.) ವಿಕೆಟ್ ಪಡೆದು ಮಹತ್ವದ ತಿರುವು ನೀಡಿದರು.
ಚಾರ್ಲ್ಸ್ ಔಟ್ ಆದ ಬಳಿಕ ರನ್‌ವೇಗಕ್ಕೂ ಕಡಿವಾಣ ಬಿತ್ತು. ಆಗಲೇ ಶುರುವಾಗಿದ್ದು ವಿಂಡೀಸ್ ತಂಡದ ಪತನ. ಜಡೇಜ ತಮ್ಮ ಮೂರನೇ ಓವರ್‌ನಲ್ಲಿ ಮಾರ್ಲೊನ್ ಸ್ಯಾಮುಯೆಲ್ಸ್‌ಗೆ ಪೆವಿಲಿಯನ್ ದಾರಿ ತೋರಿಸಿದರು. ಮೊದಲು ಅಂಪೈರ್ ಔಟ್ ನೀಡಲಿಲ್ಲ. ಆದರೆ ಅಂಪೈರ್ ತೀರ್ಪು ಪರಿಶೀಲನಾ ಪದ್ಧತಿ (ಯುಡಿಆರ್‌ಎಸ್) ಮೊರೆ ಹೋದ ನಾಯಕ ದೋನಿ ಅದರಲ್ಲಿ ಯಶಸ್ಸು ಕಂಡರು.
ತಮ್ಮ ನಾಲ್ಕನೇ ಓವರ್‌ನಲ್ಲಿ ಜಡೇಜ ಮತ್ತೊಂದು ವಿಕೆಟ್ ಕೆಡವಿದರು. ಆಗ ವಿಂಡೀಸ್ ಸ್ಕೋರ್ 109ಕ್ಕೆ4. ಆರು ರನ್‌ಗಳ ಅಂತರದಲ್ಲಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ವಿಂಡೀಸ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತು.
ತಂಡವನ್ನು ಅಪಾಯದಿಂದ ಪಾರು ಮಾಡಲು ಡ್ವೇನ್ ಬ್ರಾವೊ ಹಾಗೂ ಕೀರನ್ ಪೊಲಾರ್ಡ್ ಪ್ರಯತ್ನಿಸಿದರು. ಆದರೆ ಆರ್.ಅಶ್ವಿನ್ ಈ ಜೋಡಿಯನ್ನು ಬೇರ್ಪಡಿಸಿದರು. ಈ ತಂಡದವರು 42 ರನ್ ಗಳಿಸುವಷ್ಟರಲ್ಲಿ ಮತ್ತೆ ಐದು ವಿಕೆಟ್ ಕಳೆದುಕೊಂಡರು. ಹಾಗಾಗಿ 190 ರನ್‌ನೊಳಗೆ ಈ ತಂಡ ಆಲ್‌ಔಟ್ ಆಗಬಹುದು ಎಂದು ಯೋಚಿಸಿದವರೇ ಹೆಚ್ಚು.
ಆದರೆ ಈ ತಂಡಕ್ಕೆ ಮಹತ್ವದ ತಿರುವು ತಂದುಕೊಟ್ಟಿದ್ದು ಡರೆನ್ ಸಮಿ ಆಟ. 35 ಎಸೆತ ಎದುರಿಸಿದ ಅವರು 5 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 56 ರನ್ ಗಳಿಸಿದರು. ಅಷ್ಟು ಮಾತ್ರವಲ್ಲದೇ, ಕೊನೆಯ ವಿಕೆಟ್ ಜೊತೆಯಾಟದಲ್ಲಿ ರೋಚ್ ಜೊತೆ 51 ರನ್ ಸೇರಿಸಿದರು. ಅದಕ್ಕೆ ಈ ಜೋಡಿ ತೆಗೆದುಕೊಂಡ ಎಸೆತ ಕೇವಲ 27. ವಿಶೇಷವೆಂದರೆ ರೋಚ್ ಒಂದೂ ರನ್ ಗಳಿಸಲಿಲ್ಲ.
ಆದರೆ ಐದು ವಿಕೆಟ್ ಪಡೆದ ಜಡೇಜ ವೈಯಕ್ತಿಕ ಶ್ರೇಷ್ಠ ಸಾಧನೆಗೆ ಕಾರಣರಾದರು. ವಿದೇಶದಲ್ಲಿ ಐದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೂರನೇ ಎಡಗೈ ಸ್ಪಿನ್ನರ್ ಎನಿಸಿದರು.
ಉತ್ತಮ ಆರಂಭ: ವಿಂಡೀಸ್ ನೀಡಿದ ಅಷ್ಟೇನು ಸವಾಲು ಅಲ್ಲದ ಗುರಿ ಎದುರು ಭಾರತಕ್ಕೆ ಉತ್ತಮ ಆರಂಭವೇ ಲಭಿಸಿತು. ರೋಹಿತ್ ಶರ್ಮ ಹಾಗೂ ಶಿಖರ್ ಮೊದಲ ವಿಕೆಟ್‌ಗೆ 93 ಎಸೆತಗಳಲ್ಲಿ 101 ರನ್ ಸೇರಿಸಿ ಸುಭದ್ರ ಅಡಿಪಾಯ ಹಾಕಿಕೊಟ್ಟರು.
ಆರಂಭಿಕ ಆಟಗಾರನಾಗಿ ಬಡ್ತಿ ಪಡೆದಿರುವ ರೋಹಿತ್ (52; 56 ಎ, 7 ಬೌಂ) ಮತ್ತೊಂದು ಅರ್ಧ ಶತಕ ದಾಖಲಿಸಿದರು. ಆದರೆ ಆಫ್ ಸ್ಪಿನ್ನರ್ ಸುನಿಲ್ ನಾರಾಯಣ್ ಪ್ರವೇಶ ಭಾರತ ತಂಡದಲ್ಲಿ ಕೊಂಚ ಆತಂಕ ಮೂಡಿಸಿದ್ದು ನಿಜ. ಏಕೆಂದರೆ ಅವರು ರೋಹಿತ್ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಪಡೆದು ಭಯ ಮೂಡಿಸಿದ್ದರು. ಆದರೆ ಶಿಖರ್ (ಅಜೇಯ 102; 107 ಎ, 10 ಬೌಂ, 1 ಸಿ.) ಯಾವುದೇ ಅಪಾಯಕ್ಕೆ ಆಸ್ಪದ ನೀಡಲಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸ್ ಆದ ಬಳಿಕ ಅದ್ಭುತ ಫಾರ್ಮ್‌ನಲ್ಲಿರುವ ಅವರು ಮತ್ತೊಂದು ಶತಕ ಗಳಿಸಿದರು. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಗಳಿಸಿದ ಶತಕ ಸೇರಿ ಆಡಿದ ಮೂರು ಪಂದ್ಯಗಳಲ್ಲಿ ಮೂರನೇ ಶತಕ ಗಳಿಸಿದ್ದಾರೆ ಎನ್ನುವುದು ವಿಶೇಷ.
ವೆಸ್ಟ್‌ಇಂಡೀಸ್ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 233
ಕ್ರಿಸ್ ಗೇಲ್ ಸಿ ಆರ್.ಅಶ್ವಿನ್ ಬಿ ಭುವನೇಶ್ವರ್ ಕುಮಾರ್ 21
ಜಾನ್ಸನ್ ಚಾರ್ಲ್ಸ್ ಎಲ್‌ಬಿಡಬ್ಲ್ಯು ಬಿ ರವೀಂದ್ರ ಜಡೇಜ 60
ಡರೆನ್ ಬ್ರಾವೊ ಸ್ಟಂಪ್ಡ್ ಎಂ.ಎಸ್.ದೋನಿ ಬಿ ಆರ್.ಅಶ್ವಿನ್ 35
ಮಾರ್ಲೊನ್ ಸ್ಯಾಮುಯೆಲ್ಸ್ ಎಲ್‌ಬಿಡಬ್ಲ್ಯು ಬಿ ರವೀಂದ್ರ ಜಡೇಜ 01
ರಾಮನರೇಶ್ ಸರವಣ ಸಿ ಎಂ.ಎಸ್.ದೋನಿ ಬಿ ರವೀಂದ್ರ ಜಡೇಜ 01
ಡ್ವೇನ್ ಬ್ರಾವೊ ಸಿ ರವೀಂದ್ರ ಜಡೇಜ ಬಿ ಉಮೇಶ್ ಯಾದವ್ 25
ಕೀರನ್ ಪೊಲಾರ್ಡ್ ಸಿ ಭುವನೇಶ್ವರ್ ಕುಮಾರ್ ಬಿ ಇಶಾಂತ್ ಶರ್ಮ 22
ಡರೆನ್ ಸಮಿ ಔಟಾಗದೆ 56
ಸುನಿಲ್ ನಾರಾಯಣ್ ಸಿ ದಿನೇಶ್ ಕಾರ್ತಿಕ್ ಬಿ ರವೀಂದ್ರ ಜಡೇಜ 02
ರವಿ ರಾಂಪಾಲ್ ಬಿ ರವೀಂದ್ರ ಜಡೇಜ 02
ಕೆಮರ್ ರಾಚ್ ಔಟಾಗದೆ 00
ಇತರೆ (ಬೈ-4, ಲೆಗ್‌ಬೈ-2, ವೈಡ್-2) 08
ವಿಕೆಟ್ ಪತನ: 1-25 (ಗೇಲ್; 4.6); 2-103 (ಚಾರ್ಲ್ಸ್; 19.5); 3-105 (ಸ್ಯಾಮುಯೆಲ್ಸ್; 21.6); 4-109 (ಸರವಣ; 23.6); 5-140 (ಡರೆನ್; 33.1); 6-163 (ಡ್ವೇನ್; 37.5); 7-171 (ಪೊಲಾರ್ಡ್; 42.1); 8-179 (ಸುನಿಲ್; 43.4); 9-182 (ರಾಂಪಾಲ್; 45.3)
ಬೌಲಿಂಗ್: ಭುವನೇಶ್ವರ್ ಕುಮಾರ್ 8-0-32-1, ಉಮೇಶ್ ಯಾದವ್ 9-0-54-1 (ವೈಡ್-1), ಇಶಾಂತ್ ಶರ್ಮ 10-1-43-1 (ವೈಡ್-1), ಆರ್.ಅಶ್ವಿನ್ 9-2-36-1, ವಿರಾಟ್ ಕೊಹ್ಲಿ 4-0-26-0, ರವೀಂದ್ರ ಜಡೇಜ 10-2-36-5
ಭಾರತ 39.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 236
ರೋಹಿತ್ ಶರ್ಮ ಸಿ ಜಾನ್ಸನ್ ಚಾರ್ಲ್ಸ್ ಬಿ ಸುನಿಲ್ ನಾರಾಯಣ್ 52
ಶಿಖರ್ ಧವನ್ ಔಟಾಗದೆ 102
ವಿರಾಟ್ ಕೊಹ್ಲಿ ಬಿ ಸುನಿಲ್ ನಾರಾಯಣ್ 22
ದಿನೇಶ್ ಕಾರ್ತಿಕ್ ಔಟಾಗದೆ 51
ಇತರೆ (ಬೈ-4, ವೈಡ್-5) 09
ವಿಕೆಟ್ ಪತನ: 1-101 (ರೋಹಿತ್; 15.3); 2-127 (ಕೊಹ್ಲಿ; 19.6)
ಬೌಲಿಂಗ್: ಕೆಮರ್ ರೋಚ್ 6-0-47-0, ರವಿ ರಾಂಪಾಲ್ 6-0-28-0, ಸುನಿಲ್ ನಾರಾಯಣ್ 10-0-49-2, ಡರೆನ್ ಸಮಿ 4-0-23-0, ಡ್ವೇನ್ ಬ್ರಾವೊ 5-0-36-0, ಮಾರ್ಲೊನ್ ಸ್ಯಾಮುಯೆಲ್ಸ್ 4-0-17-0, ಕ್ರಿಸ್ ಗೇಲ್ 1-0-11-0, ಕೀರನ್ ಪೊಲಾರ್ಡ್ 3.1-0-21-0
ಫಲಿತಾಂಶ: ಭಾರತಕ್ಕೆ ಎಂಟು ವಿಕೆಟ್ ಜಯ, ಪಂದ್ಯಶ್ರೇಷ್ಠ: ರವೀಂದ್ರ ಜಡೇಜ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.